ADVERTISEMENT

‘ನಾಳೆ ರಜಾ ಕೋಳಿ ಮಜಾ’ ಸಿನಿಮಾ ವಿಮರ್ಶೆ: ಮಲೆನಾಡಿನ ಸುಂದರ ಕಥನ

ವಿನಾಯಕ ಕೆ.ಎಸ್.
Published 11 ಮೇ 2025, 23:30 IST
Last Updated 11 ಮೇ 2025, 23:30 IST
ಚಿತ್ರದ ದೃಶ್ಯ
ಚಿತ್ರದ ದೃಶ್ಯ   

‘ನಾಳೆ ರಜಾ ಕೋಳಿ ಮಜಾ’ ಮಲೆನಾಡು ಭಾಗದ ಶಾಲಾ ಮಕ್ಕಳ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ‍ದ. ಶಾಲೆಗೆ ರಜೆ ಸಿಕ್ಕರೆ ಮಕ್ಕಳಿಗೆ ಮಜ ಎಂಬುದನ್ನು ಈ ರೀತಿ ಹೇಳುತ್ತಾರೆ. ಆವತ್ತು ಗಾಂಧಿ ಜಯಂತಿ, ಜತೆಗೆ ಭಾನುವಾರ ಕೂಡ. ನಾನ್‌ವೆಜ್‌ ತಿನ್ನುವವರ ಮನೆಗಳಲ್ಲಿ ಭಾನುವಾರ, ರಜಾ ದಿನಗಳಲ್ಲಿ ಬಾಡೂಟ ಸಾಮಾನ್ಯ. ಹೀಗಾಗಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸ್ನೇಹಾಳಿಗೆ ಕೋಳಿ ಸಾರು ತಿನ್ನಬೇಕೆಂಬ ತೀವ್ರ ಬಯಕೆ. ಆದರೆ ಶಾಂತಿ, ಅಹಿಂಸೆಯ ಪ್ರತೀಕವಾದ ಗಾಂಧಿ ಜಯಂತಿಯಂದು ಎಲ್ಲಿಯೂ ಸಾರಿಗೆ ಕೋಳಿ ಸುಲಭವಾಗಿ ಸಿಗುವುದಿಲ್ಲ. ಆಕೆ ಸಾರಿಗಾಗಿ ಕೋಳಿ ಹುಡುಕಿಕೊಂಡು ಹೋಗುವುದೇ ಚಿತ್ರಕಥೆ!

ಚಿಕ್ಕ ಮಕ್ಕಳಿಗೆ ಏನಾದರೂ ಬೇಕು ಎನಿಸಿದರೆ ಸಿಗುವವರೆಗೂ ಬಿಡುವುದಿಲ್ಲ. ಅದೇ ರೀತಿಯ ವ್ಯಕ್ತಿತ್ವ ನಾಲ್ಕನೆ ತರಗತಿಯಲ್ಲಿ ಓದುತ್ತಿರುವ ಸ್ನೇಹಾಳದ್ದು. ಚಿತ್ರದ ಕಥೆ ಪ್ರಾರಂಭವಾಗುವುದು ಪಶ್ಚಿಮಘಟ್ಟದ ಹಳ್ಳಿಯೊಂದರಲ್ಲಿ. ಇಡೀ ಸಿನಿಮಾದ ಶಕ್ತಿಯೇ ಸಹಜತೆ. ಎಲ್ಲರ ಮನೆಯ ಅಂಗಳದಲ್ಲಿ ನಡೆಯುವ ಸರಳ ಕಥೆಯಿದು. ಅದಕ್ಕೆ ಯಾವುದೇ ರೀತಿಯ ನಾಟಕ, ಮಸಾಲೆ, ತಿರುವುಗಳನ್ನು ಬೆರಸದೆ ಸಹಜವಾಗಿಯೇ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕರು. ಶಾಲೆ, ಅಲ್ಲಿ ಗಾಂಧಿಜಯಂತಿ ಆಚರಣೆ, ಮಕ್ಕಳು ಹಾಡುವ ದೇಶಭಕ್ತಿಗೀತೆ ನಮ್ಮ ಶಾಲಾದಿನಗಳನ್ನೊಮ್ಮೆ ನೆನಪಿಸುತ್ತದೆ. 

ಸಿನಿಮಾದಲ್ಲಿ ಕುಂದಾಪುರ ಕನ್ನಡ ಬಳಸಲಾಗಿದೆ. ಭಾನುವಾರ ಗಾಂಧಿಜಯಂತಿ ಮುಗಿಸಿ ಬಂದ ಸ್ನೇಹಾ ಕೋಳಿ ಸಾರಿಗೆ ಹಠ ಹಿಡಿಯುತ್ತಾಳೆ. ಅವರು ಇರುವುದು ಬ್ರಹ್ಮಾವರದಂಥ ಸಣ್ಣ ಪೇಟೆಯಲ್ಲಿ. ಅಪ್ಪ ರಮೇಶ್‌ನನ್ನು ಕರೆದುಕೊಂಡು ಕೋಳಿ ಹುಡುಕಲು ಹೊರಡುತ್ತಾಳೆ. ಒಂದೆರಡು ಕಡೆ ಬ್ಲಾಕ್‌ನಲ್ಲಿ ಕೋಳಿ ಸಿಗುತ್ತದೆ. ದರ ದುಬಾರಿ ಎಂದು ಅಪ್ಪ ಆ ಕೋಳಿ ಬೇಡ ಎನ್ನುತ್ತಾನೆ. ಆದರೆ ಅದೇ ಅಪ್ಪ ಎಣ್ಣೆಯನ್ನು ಎರಡು ಪಟ್ಟು ಹಣ ನೀಡಿ ತರುತ್ತಾನೆ. ಇದರಿಂದ ಕೋಪಗೊಳ್ಳುವ ಸ್ನೇಹಾ ಅಜ್ಜಿ ಮನೆಗೆ ಹೊರಡುತ್ತಾಳೆ. ಆಕೆ ಮನೆಯಿಂದ ಹೋದ ನಂತರ ಪಕ್ಕದ ಮನೆಯವರ್ಯಾರೊ ಕೋಳಿ ಸಾರು ಉಳಿದಿತ್ತು ಎಂದು ತಂದುಕೊಡುತ್ತಾರೆ. ಈ ರೀತಿ ಸಾಕಷ್ಟು ಸಹಜ ಘಟನೆಗಳಿಂದಲೇ ಚಿತ್ರ ಇಷ್ಟವಾಗುತ್ತದೆ.

ADVERTISEMENT

ಆಕೆಯ ಅಜ್ಜಿ ಮನೆ ಸಾಗರ. ಅಲ್ಲಿನ ತೋಟ, ಊರು, ಗ್ರಾಮೀಣ ಭಾಗದ ಬದುಕು ಎಲ್ಲವೂ ಮುದ ನೀಡುವಂತಿದೆ. ಮುಗ್ಧ ಮಗುವಿನಲ್ಲಿ ದೃಷ್ಟಿಯಲ್ಲಿ ಗಾಂಧಿಯ ಅಹಿಂಸಾ ತತ್ವ ಮತ್ತು ಅದನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ನಿರ್ದೇಶಕರು ಕಟ್ಟಿಕೊಡುತ್ತ ಹೋಗುತ್ತಾರೆ. ಸ್ನೇಹ ಆಗಿ ಸಮೃದ್ಧಿ ಕುಂದಾಪುರ ಇಷ್ಟವಾಗುತ್ತಾರೆ. ಎಲ್ಲ ಪಾತ್ರಧಾರಿಗಳು ಸಹಜವಾಗಿ ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ಬಹಳ ಇತಿಮಿತಿಯಲ್ಲಿ ಸಿನಿಮಾ ಸಿದ್ಧಗೊಂಡಿರುವುದು ತೆರೆಯ ಮೇಲೂ ಅನುಭವಕ್ಕೆ ಬರುತ್ತದೆ.  ಮಕ್ಕಳ ಮುಗ್ಧ ಪ್ರಪಂಚವನ್ನಿಟ್ಟುಕೊಂಡು ಚಿತ್ರಕಥೆಯನ್ನು ಇನ್ನಷ್ಟು ಉತ್ತಮಗೊಳಿಸುವ, ಸಹಜವಾಗಿಯೇ ನಡೆಯುವ ಕೆಲವಷ್ಟು ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದ ಸಂಕಲನ ಇನ್ನೊಂದಷ್ಟು ಉತ್ತಮವಾಗಬೇಕಿತ್ತು. ಮಲೆನಾಡಿನ ಪ್ರಾಕೃತಿಕ ಸೊಬಗಿನ ಒಂದಷ್ಟು ಸಿನಿಮ್ಯಾಟಿಕ್‌ ಫ್ರೇಮ್‌ಗಳನ್ನು ಕಟ್ಟಿಕೊಡಲು ಛಾಯಾಚಿತ್ರಗ್ರಹಣದಲ್ಲಿ ಅವಕಾಶವಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.