ADVERTISEMENT

ಸು ಫ್ರಮ್‌ ಸೋ ಸಿನಿಮಾ ವಿಮರ್ಶೆ: ಮನರಂಜನೆಯ ಮಾಲೆಪಟಾಕಿ ಇದು..

ಅಭಿಲಾಷ್ ಪಿ.ಎಸ್‌.
Published 25 ಜುಲೈ 2025, 9:45 IST
Last Updated 25 ಜುಲೈ 2025, 9:45 IST
ಚಿತ್ರದ ದೃಶ್ಯ 
ಚಿತ್ರದ ದೃಶ್ಯ    

ಸಿನಿಮಾ ವಿಮರ್ಶೆ: ಸು ಫ್ರಮ್‌ ಸೋ (ಕನ್ನಡ)

ಕನ್ನಡದಲ್ಲಿ ಪೂರ್ಣ ಪ್ರಮಾಣದ ಹಾಸ್ಯಭರಿತ ಸಿನಿಮಾವೊಂದು ತೆರೆಕಾಣುವುದು ಇತ್ತೀಚೆಗೆ ಅಪರೂಪವಾಗಿದೆ. ವರ್ಷದ ಹಿಂದೆ ತೆರೆಕಂಡಿದ್ದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ  ಭಿನ್ನವಾದ ಪ್ರಸ್ತುತಿ ಹಾಗೂ ಕಥೆಯಿಂದ ಹಾಸ್ಯದೌತಣ ಬಡಿಸಿತ್ತು. ಇದೀಗ ತೆರೆಕಂಡಿರುವ ‘ಸು ಫ್ರಮ್‌ ಸೋ’ ಅಂದರೆ ‘ಸುಲೋಚನಾ ಫ್ರಮ್‌ ಸೋಮೇಶ್ವರ’ ಹಾಸ್ಯದೊಂದಿಗೆ ತುಸು ಹಾರರ್‌ ಮಿಶ್ರಣವಾದ ಭರ್ಜರಿ ಮನರಂಜನೆಯ ಸಿನಿಮಾ. ಈ ಸಿನಿಮಾ ಸುಮಾರು ಎರಡು ಗಂಟೆಗಳ ನಗುವಿನ ಮಾಲೆಪಟಾಕಿ.

ಒಂದು ವಠಾರ, ಅದರೊಳಗೊಂದು ಕಥೆ, ಆ ಕಥೆಯುದ್ದಕ್ಕೂ ಹಾಸ್ಯಭರಿತ ಸಂಭಾಷಣೆ, ಸಂಭಾಷಣೆಗೆ ತಕ್ಕ ಪಾತ್ರದ ಹಾವಭಾವಗಳು, ಕ್ಲೈಮ್ಯಾಕ್ಸ್‌ನಲ್ಲೊಂದು ಭಾವನಾತ್ಮಕ ಸ್ಪರ್ಶ...ಇದು ತುಳು ನಾಟಕಗಳ ಜೀವಾಳ. ಇಂತಹ ರಂಗಭೂಮಿಯಲ್ಲಿ ಪಳಗಿರುವ ಜೆ.ಪಿ.ತೂಮಿನಾಡು ಸಿನಿಮಾದೊಳಗೂ ಅದನ್ನು ಪ್ರಯೋಗಿಸಿ ಯಶಸ್ಸು ಕಂಡಿದ್ದಾರೆ. ‘ಸು ಫ್ರಮ್‌ ಸೋ’ ಒಂದು ಊರಿನೊಳಗೆ ನಡೆಯುವ ಕಥೆಯಾಗಿದ್ದು, ನೋಡುಗನನ್ನು ಆ ಊರಿನ ಭಾಗವಾಗಿಸಿ ನಕ್ಕುನಗಿಸುತ್ತದೆ.

ADVERTISEMENT

‘ಮರ್ಲೂರು’ ಕರಾವಳಿಯ ಒಂದು ಊರು. ಊರಿನಲ್ಲಿ ಮೇಸ್ತ್ರಿಯಾಗಿರುವ ‘ರವಿಯಣ್ಣ’(ಶನೀಲ್‌ ಗೌತಮ್‌) ಎಲ್ಲರಿಗೂ ಅಚ್ಚುಮೆಚ್ಚು. ‘ರವಿಯಣ್ಣ’ನ ಮಾತೇ ವೇದವಾಕ್ಯ. ಅದೇ ಊರಿನಲ್ಲಿ ಪೇಂಟರ್‌ ಆಗಿ ಕೆಲಸ ಮಾಡುತ್ತಿರುವ ‘ಅಶೋಕ’ನಿಗೆ(ಜೆ.ಪಿ.ತೂಮಿನಾಡು) ಊರಿನ ಹುಡುಗಿಯೊಬ್ಬಳ ಮೇಲೆ ಕಣ್ಣಿನಲ್ಲೇ ಪ್ರೀತಿ. ‘ರವಿಯಣ್ಣ’ನನ್ನು ಕಂಡರೆ ಅಶೋಕನಿಗೆ ಅಷ್ಟಕಷ್ಟೇ. ಊರಿನಲ್ಲಿ ಮದುವೆ ನಡೆದರೂ, ತಿಥಿಯಾದರೂ ‘ರವಿಯಣ್ಣ’ನ ಸಲಹೆ, ಸೂಚನೆಗಳು ಬೇಕೇಬೇಕು. ಊರಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದು ‘ರವಿಯಣ್ಣ’ನಲ್ಲೇ. ಈತ ಮೇಲ್ನೋಟಕ್ಕೆ ಧೈರ್ಯಶಾಲಿ! ಇಂತಹ  ‘ರವಿಯಣ್ಣ’ನಿಗೂ ಬಗೆಹರಿಸಲಾಗದ ಸಮಸ್ಯೆಯೊಂದು ಎದುರಾದಾಗ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ, ಸುಲೋಚನಾಳ ಆಟ ಪ್ರಾರಂಭವಾಗುತ್ತದೆ. ಕರುಣಾಕರ ಗುರೂಜಿಯ ಆಗಮನವೂ ಆಗುತ್ತದೆ!

ಪ್ರೇಕ್ಷಕರನ್ನು ನಗಿಸುವುದೊಂದೇ ನನ್ನ ಕೆಲಸ ಎಂದುಕೊಂಡಂತೆ ಕಥೆ ರಚಿಸಿದ್ದಾರೆ ಜೆ.ಪಿ.ತೂಮಿನಾಡು. ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾದ ವಾತಾವರಣವನ್ನು ನೆನಪಿಸುವ ಈ ಸಿನಿಮಾ, ಕರಾವಳಿಯ ಮಣ್ಣಿನ ಸೊಬಗಿನಿಂದ ಕೂಡಿದೆ. ಕರಾವಳಿಯ ನೋಟ, ಸಂಸ್ಕೃತಿ, ಆಚರಣೆಗಳೊಂದಿಗೆ ಪ್ರವೇಶಿಕೆ ಬರೆಯುತ್ತಾ ಚುಟುಕಾಗಿ ಪ್ರೀತಿಯ ಒಗ್ಗರಣೆ ಹಾಕಿ, ಕಥೆಗೆ ತಕ್ಕ ಸ್ಥಳೀಯ ಪಾತ್ರಗಳನ್ನು ಒಗ್ಗೂಡಿಸಿ, ಅವುಗಳಿಗೆ ಭರಪೂರ ಹಾಸ್ಯ ಸಂಭಾಷಣೆಗಳನ್ನು ಸುರಿಯುತ್ತಾ, ಚಿಟಿಕೆಯಷ್ಟು ಮಾನವೀಯ ಗುಣಗಳ ಸಂದೇಶ ಹಾಕಿ ಈ ರಸದೌತಣವನ್ನು ಅವರು ಸಿದ್ಧಪಡಿಸಿದ್ದಾರೆ. ಹಾಸ್ಯ–ಹಾರರ್‌–ಭಾವನೆಗಳ ಹದವಾದ ಮಿಶ್ರಣ ಇಲ್ಲಿದೆ.

ಆರಂಭದಲ್ಲಿ ‘ಭಾವ’ನ ಮದ್ಯಪಾನದ ಒಂದೆರಡು ದೃಶ್ಯಗಳಿಗೆ ಕತ್ತರಿ ಹಾಕಿ, ಈ ಅವಧಿಯನ್ನು ಅಶೋಕನ ಪ್ರೀತಿಯ ಕಥೆಗೆ ಮೀಸಲಿಡಬಹುದಿತ್ತು ಎನಿಸುತ್ತದೆ. ಈ ಕೊರತೆಯಿಂದ ಚಿತ್ರದಲ್ಲಿ ಪ್ರೀತಿಯ ಕಥೆ ಅಪೂರ್ಣವಾದಂತೆ ಭಾಸವಾಗುತ್ತದೆ.

ನಟನೆಯಲ್ಲಿ ‘ರವಿಯಣ್ಣ’ನಾಗಿ ಶನೀಲ್‌ ಗೌತಮ್‌ ಇಷ್ಟವಾಗುತ್ತಾರೆ. ಅವರ ಸಹಜವಾಗಿರುವ ಅಭಿನಯ ಆ ಪಾತ್ರಕ್ಕೆ ಜೀವ ತುಂಬಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ತಮ್ಮ ನಟನೆಯ ಸಾಮರ್ಥ್ಯ ಪ್ರದರ್ಶಿಸಿದ್ದ ಜೆ.ಪಿ.ತೂಮಿನಾಡು ಇಲ್ಲೂ ನಟನೆಯ ಜೊತೆಗೆ ನಿರ್ದೇಶನದ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದಾರೆ. ‘ಭಾವ’ನಾಗಿ ಪುಷ್ಪರಾಜ್‌ ಬೋಳಾರ್‌, ‘ಚಂದ್ರ’ನಾಗಿ ಪ್ರಕಾಶ್‌ ತೂಮಿನಾಡು, ‘ಸತೀಶ’ನಾಗಿ ದೀಪಕ್‌ ರೈ ಪಾಣಾಜೆ, ‘ಯದು’ವಾಗಿ ಮೈಮ್‌ ರಾಮದಾಸ್‌ ನಗಿಸುವ ಜವಾಬ್ದಾರಿ ಹೊತ್ತು ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಟಿ ಸಂಧ್ಯಾ ಅರೆಕೆರೆ ‘ಭಾನು’ ಪಾತ್ರವನ್ನು ನಿಭಾಯಿಸಿದ ರೀತಿ ಉಲ್ಲೇಖಾರ್ಹ.

ಕರುಣಾಕರ ಗುರೂಜಿ ಎಂಬ ಪಾತ್ರ ಗುಟ್ಟಾಗಿ ಉಳಿದರೇ ಚೆಂದ. ಗುರೂಜಿ–ಭಾವನ ಹೈಫೈ ದೃಶ್ಯ ಇಡೀ ಸಿನಿಮಾದ ಹೈಲೈಟ್‌. ಗುರೂಜಿ ಪಾತ್ರದ ಗತ್ತು, ಗಮ್ಮತ್ತನ್ನು ತೆರೆಯಲ್ಲೇ ನೋಡಿ ಆನಂದಿಸಬೇಕು. ಈ ಪಾತ್ರವನ್ನು ನಿಭಾಯಿಸಿದ ನಟ ಆಗಾಗ ಇಂತಹ ಜಾನರ್‌ನ ಸಿನಿಮಾಗಳನ್ನು ತರಲಿ ಎನ್ನುವುದಷ್ಟೇ ಆಶಯ. ಯುವ ಸಂಗೀತ ನಿರ್ದೇಶಕ ಸುಮೇಧ್‌ ಕೆ. ಹಾಗೂ ಸಂದೀಪ್‌ ತುಳಸಿದಾಸ್‌ ಚಿತ್ರದ ದೃಶ್ಯಗಳಿಗೆ ಸಂಗೀತದ ಮೂಲಕ ಜೀವ ತುಂಬಿದ್ದಾರೆ. ಎಸ್.ಚಂದ್ರಸೇಖರನ್ ಛಾಯಾಚಿತ್ರಗ್ರಹಣ ಕರಾವಳಿಯ ಸೊಬಗನ್ನು ಸೆರೆಹಿಡಿದಿದೆ.

ಇದು ನೋಡಬಹುದಾದ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.