ADVERTISEMENT

‘ಮಂಡ್ಯ ಹೈದ’ ಸಿನಿಮಾ ವಿಮರ್ಶೆ: ಮಂಡ್ಯದ ಪಡ್ಡೆಹೈಕ್ಳ ಹುಡುಗಾಟ

ವಿನಾಯಕ ಕೆ.ಎಸ್.
Published 16 ಫೆಬ್ರುವರಿ 2024, 11:24 IST
Last Updated 16 ಫೆಬ್ರುವರಿ 2024, 11:24 IST
ಚಿತ್ರದ ಒಂದು ದೃಶ್ಯ
ಚಿತ್ರದ ಒಂದು ದೃಶ್ಯ   

ಮಂಡ್ಯ ಪರಿಸರದ ಹಳ್ಳಿಯೊಂದರಲ್ಲಿ ಉಂಡಾಡಿಗುಂಡರ ರೀತಿ ಬದುಕುತ್ತಿರುವ ನಾಲ್ಕು ಪಡ್ಡೆ ಹೈಕ್ಳು, ಅವರ ಹುಡುಗಾಟವೇ ‘ಮಂಡ್ಯ ಹೈದ’ ಚಿತ್ರದ ಕಥೆ. ‘ರಾಜಾಹುಲಿ’, ‘ಕಿರಾತಕ’ ಸಿನಿಮಾಗಳಲ್ಲಿನ ಮಾದರಿಯ ಹುಡುಗರ ತಂಡವಿದು. ಈ ತಂಡವನ್ನು ಮುನ್ನಡೆಸುವುದು ಚಿತ್ರದ ನಾಯಕ ಅಭಯ್‌. ಅಂಬರೀಶ್‌ ಅವರ ‘ಅಂತ’ ಸಿನಿಮಾದ ಕಟೌಟ್‌ ನಿಲ್ಲಿಸುವ ವಿಚಾರದ ಜಗಳದಿಂದ ಸಿನಿಮಾ ಪ್ರಾರಂಭವಾಗುತ್ತದೆ. ಫೈಟ್‌, ಬಿಲ್ಡಪ್‌ನೊಂದಿಗೆ ಆ ಜಗಳದೊಂದಿಗೆ ಪ್ರವೇಶ ಪಡೆಯುವ ನಾಯಕ ಅಭಯ್‌ ಮಾಸ್‌ ನಾಯಕನಾಗಲು ಹೊರಟ್ಟಿದ್ದಾರೆ ಎಂಬುದನ್ನು ನಿರ್ದೇಶಕರು ಪ್ರಾರಂಭದಲ್ಲಿಯೇ ತೋರಿಸಿಬಿಡುತ್ತಾರೆ. 

ಯುವ ಪ್ರೇಮಿಗಳಿಗೆ ಮನೆಯವರದೇ ಅಡ್ಡಿ. ಇಂಥ ಜೋಡಿಗೆ ಊರಿಂದ ಓಡಿ ಹೋಗಲು ಸಹಾಯ ಮಾಡುವುದೇ ನಾಲ್ಕು ಪಡ್ಡೆಹೈಕ್ಳ ಕೆಲಸ. ಅಲ್ಲೊಂದಷ್ಟು ಹಾಸ್ಯ, ಮಂಡ್ಯದ ಭಾಷೆ ಬಳಕೆಯೊಂದಿಗೆ ಮೊದಲಾರ್ಧ ಮುಗಿಯುತ್ತದೆ. ಈ ಭಾಗದ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿಸುವ, ಮೊನುಚಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ನಟನೆಯಿಂದ ನಾಯಕ ಅಭಯ್‌ ಇಷ್ಟವಾಗುತ್ತಾರೆ. ಮುಗ್ಧ ಹುಡುಗನಂತೆ ಕಾಣಿಸುವ ನಾಯಕನಿಗೆ ಕೆಲವು ಕಡೆ ಬಿಲ್ಡಪ್‌ ಕಡಿಮೆ ಮಾಡಬಹುದಿತ್ತು. ಹಿನ್ನೆಲೆ ಸಂಗೀತ ದೃಶ್ಯಗಳಿಗೆ ತಕ್ಕಂತೆ ಇದೆ. ಮನುಗೌಡ ಛಾಯಾಚಿತ್ರಗ್ರಹಣದಲ್ಲಿ ಮಂಡ್ಯ ಜಿಲ್ಲೆಯ ದೃಶ್ಯ ವೈಭವವನ್ನು ಚೆನ್ನಾಗಿ ಸೆರೆ ಹಿಡಿದಿದ್ದಾರೆ.

ನಾಯಕಿ ಭೂಮಿಕಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈಕೆಯ ತಂದೆಯಾಗಿ, ಊರಿನ ಗೌಡನಾಗಿ ಬಲ ರಾಜವಾಡಿ ನಟನೆ ಖಡಕ್‌ ಆಗಿದೆ. ಊರವರಿಗೆಲ್ಲ ಓಡಿ ಹೋಗಲು ಸಹಾಯ ಮಾಡುತ್ತಿದ್ದ ನಾಯಕನೇ ಊರು ಬಿಟ್ಟು ಹೋಗುವ ಸಂದರ್ಭ ಎದುರಾಗುತ್ತದೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ದ್ವಿತೀಯಾರ್ಧ. ನಾಯಕನ ಸುತ್ತಲಿನ ಬಳಗದವರೆಲ್ಲ ಮಕ್ಕಳ ವಯಸ್ಸಿನವರು. ಕಥೆಯ ನಿರೂಪಣೆ ಇವರ ವಯಸ್ಸಿಗೆ ಮೀರಿದ್ದು ಎಂಬ ಭಾವನೆ ಅಲ್ಲಲ್ಲಿ ಮೂಡುತ್ತದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.