
ಕರಾವಳಿ ಭಾಗದ ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಕಥಾವಸ್ತುಗಳನ್ನಾಗಿ ಇಟ್ಟುಕೊಂಡು ಹಲವು ಸಿನಿಮಾಗಳು ಬಂದಿವೆ. ‘ಮಾರ್ನಮಿ’ಯೂ ಕರಾವಳಿಯ ಹುಲಿವೇಷ ಹಿನ್ನೆಲೆಯಲ್ಲಿ ಪ್ರೇಮಕಥೆಯೊಂದನ್ನು ತೆರೆಗೆ ತಂದಿದೆ. ಮೊದಲಾರ್ಧದಲ್ಲಿ ಗಮನಸೆಳೆಯುವ ಕಥೆಯು ದ್ವಿತೀಯಾರ್ಧದಲ್ಲಿ ಬೇರೊಂದು ಆಯಾಮದಲ್ಲಿ ಸಾಗಬಹುದಿತ್ತು ಎನಿಸುವಂತೆ ಮಾಡುತ್ತದೆ.
ಚೇತು(ರಿತ್ವಿಕ್ ಮಠದ್) ಅಮ್ಮನ ಮುದ್ದಿನ ಮಗ. ಬಾಲ್ಯದಲ್ಲಿ ಈತನಿಗೆ ಸೀತಾಳೆ ಸಿಡುಬು(ಚಿಕನ್ ಪಾಕ್ಸ್) ರೋಗ ಬರುತ್ತದೆ. ತಾಯಿ ಈತ ಗುಣಮುಖನಾದರೆ ದಸರಾ(ತುಳುವಿನಲ್ಲಿ ಮಾರ್ನಮಿ) ಹಬ್ಬಕ್ಕೆ ಈತನಿಗೆ ಹುಲಿವೇಷ ಹಾಕಿಸಿ ದೇವಿ ಮುಂದೆ ಕುಣಿಸುವ ಹರಕೆ ಹೊರುತ್ತಾಳೆ. ಆತ ಗುಣಮುಖನಾಗುತ್ತಾನೆ. ಬಳಿಕ ತಾಯಿ ಟಿಬಿಯಿಂದ ನಿಧನಳಾಗುತ್ತಾಳೆ. ಮಾವನ ಜೊತೆ ಬೆಳೆಯುವ ಚೇತು ದೊಡ್ಡ ಕನಸುಗಳಿಲ್ಲದೆ ಪುಟ್ಟ ಸಂಸಾರದ ಕನಸು ಕಾಣುತ್ತಾನೆ. ಆಗ ‘ದೀಕ್ಷಾ’(ಚೈತ್ರಾ ಜೆ.ಆಚಾರ್) ಸಿಗುತ್ತಾಳೆ. ಕಥೆ ಹೀಗೆ ತೆರೆದುಕೊಳ್ಳುತ್ತದೆ.
‘ಗರುಡ ಗಮನ..’ ಸಿನಿಮಾದ ಒಂದು ಅಂಶವನ್ನಿಟ್ಟುಕೊಂಡೇ ಸಿನಿಮಾದ ಮೊದಲಾರ್ಧದ ಕಥೆ ಆರಂಭವಾಗುತ್ತದೆ. ಮೊದಲಾರ್ಧದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಥೆಗಿದೆ. ಒಂದು ಮುಗ್ಧ ಪ್ರೀತಿ ಸೆಳೆಯುವಂತಿದೆ. ಕೊಂಚ ಎಳೆದಂತೆ ಅನಿಸಿದರೂ ಚಿತ್ರಕಥೆ ಗಟ್ಟಿಯಾಗಿದೆ. ಸಂಭಾಷಣೆಗಳೂ ಸೊಗಸಾಗಿವೆ. ಹುಲಿವೇಷದ ಆಚರಣೆ, ಅದರ ಹಿನ್ನೆಲೆ, ಸಿದ್ಧತೆಯ ವಿವರಣೆಗೆ ಇಲ್ಲಿ ಹೆಚ್ಚಿನ ತೆರೆ ಅವಧಿ ನೀಡಲಾಗಿದೆ. ಜೊತೆಗೆ ಹುಲಿವೇಷ ಕುಣಿಸುವ ಎರಡು ತಂಡಗಳ ನಡುವಿನ ಸ್ಪರ್ಧೆ, ಜಿದ್ದನ್ನೂ ಇಲ್ಲಿ ಚಿತ್ರಿಸಲಾಗಿದೆ. ಮಧ್ಯಂತರ ತಲುಪುವ ವೇಳೆಗೆ ನಿರ್ದೇಶಕರು ಚಿತ್ರಕಥೆಯನ್ನು ಅನಗತ್ಯವಾಗಿ ಬೇರೆಡೆ ಎಳೆದಂತೆ ಭಾಸವಾಗುತ್ತದೆ. ಅಪಶಕುನದ ಕಥೆಯ ಅಗತ್ಯವಿರಲಿಲ್ಲ. ದ್ವಿತೀಯಾರ್ಧದ ಕಥೆಗೆ ಬೇರೆ ರೂಪ ನೀಡುವ ಅವಕಾಶ ನಿರ್ದೇಶಕರಿಗಿತ್ತು. ಇದರಿಂದ ಭಿನ್ನ ಕ್ಲೈಮ್ಯಾಕ್ಸ್‌ನ ಸಾಧ್ಯತೆಯೂ ಇತ್ತು. ಈ ಭಾಗದ ಬರವಣಿಗೆಯೂ ಗಟ್ಟಿಯಾಗಿರಬೇಕಿತ್ತು. ಒಟ್ಟಾರೆ ಈ ಭಾಗ ಸಿನಿಮಾ ಅವಧಿಯನ್ನೂ ಹೆಚ್ಚಿಸಿದೆ. ಪಾತ್ರಗಳಿಗೆ ಕೆಲಸ ನಿಗದಿ ಮಾಡದೇ ಇರುವ ಕೊರತೆ ಕಥೆಗೂ ಅಡ್ಡಿಯಾಗಿದೆ.
ನಟನೆಯಲ್ಲಿ ಕರಾವಳಿಯ ಹುಡುಗಿ ‘ದೀಕ್ಷಾ’ಳಾಗಿ ಚೈತ್ರಾ ಜೆ. ಆಚಾರ್ ಜೀವಿಸಿದ್ದಾರೆ. ಅವರ ಸಂಭಾಷಣೆ, ಹಾವಭಾವದಲ್ಲಿ ನೈಜತೆ ಇದೆ. ರಿತ್ವಿಕ್ ‘ಚೇತು’ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಸೋನು ಗೌಡ, ಸ್ವರಾಜ್ ಶೆಟ್ಟಿ ನಟನೆ ಚೆನ್ನಾಗಿದೆ. ಪ್ರಕಾಶ್ ತೂಮಿನಾಡು- ಚೈತ್ರಾ ಶೆಟ್ಟಿ ಜೋಡಿಯ ನಟನೆ ಸ್ಥಳೀಯ ಸೊಗಡಿನ ಸಿನಿಮಾಗೆ ಹೇಳಿ ಮಾಡಿಸಿದಂತಿದೆ. ‘ಏ ಮಾರಾಯ..’ ಹಾಡು ಮತ್ತೆ ಮತ್ತೆ ಗುನುಗುವಂತಿದೆ. ಶಿವಸೇನಾ ಕರಾವಳಿಯ ಜಾತ್ರೆ, ಜನಜೀವನವನ್ನು ಸೆಳೆಯುವಂತೆ ಸೆರೆಹಿಡಿದಿದ್ದಾರೆ.
ನೋಡಬಹುದಾದ ಸಿನಿಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.