ADVERTISEMENT

‘ದೂರದರ್ಶನ’ ಸಿನಿಮಾ ವಿಮರ್ಶೆ: ಟಿ.ವಿ ಸುತ್ತ ಸುತ್ತುವ ಸಮಯ!

ಅಭಿಲಾಷ್ ಪಿ.ಎಸ್‌.
Published 3 ಮಾರ್ಚ್ 2023, 11:13 IST
Last Updated 3 ಮಾರ್ಚ್ 2023, 11:13 IST
ಅಯಾನ ಹಾಗೂ ಪೃಥ್ವಿ ಅಂಬಾರ್‌
ಅಯಾನ ಹಾಗೂ ಪೃಥ್ವಿ ಅಂಬಾರ್‌   

ಸಿನಿಮಾ: ದೂರದರ್ಶನ (ಕನ್ನಡ)
ನಿರ್ದೇಶನ: ಸುಕೇಶ್‌ ಶೆಟ್ಟಿ
ನಿರ್ಮಾಪಕ: ರಾಜೇಶ್‌ ಭಟ್‌
ತಾರಾಗಣ: ಪೃಥ್ವಿ ಅಂಬಾರ್‌, ಸುಂದರ್‌ ವೀಣಾ, ಉಗ್ರಂ ಮಂಜು, ಹರಿಣಿ, ದೀಪಕ್‌ ರೈ ಪಾಣಾಜೆ, ಅಯಾನ ಮತ್ತಿತರರು

***

ಸರಳವಾದ ಕಥೆಯೊಂದನ್ನು ಸುದೀರ್ಘವಾಗಿ ಹೆಣೆದರೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕನ ತಾಳ್ಮೆ ಪರೀಕ್ಷೆಯಾಗುತ್ತದೆ. ಇದುವೇ ಸ್ಥಿತಿ ‘ದೂರದರ್ಶನ’ದ್ದು. ಕಥೆಯ ವಿಚಾರದಲ್ಲಿ ಖಂಡಿತವಾಗಿಯೂ ಸ್ವಾರಸ್ಯಕರವಾದ ಕಥೆಯೊಂದನ್ನು ನಿರ್ದೇಶಕ ಸುಕೇಶ್‌ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ಆದರೆ ಅದನ್ನು ತೆರೆಗಿಡುವ ಸಂದರ್ಭದಲ್ಲಿ ಸಮಯದ ಚೌಕಟ್ಟನ್ನು ನಿಗದಿ ಮಾಡುವಲ್ಲಿ ಎಡವಿದ್ದಾರೆ. ಹೀಗಾಗಿ 139 ನಿಮಿಷದ ‘ಕಿರುತೆರೆ’ಯನ್ನು ಹಿರಿತೆರೆಯಲ್ಲಿ ವೀಕ್ಷಿಸಲು ಪ್ರೇಕ್ಷಕನಿಗೆ ತಾಳ್ಮೆ ಅಗತ್ಯ.

ADVERTISEMENT

ಕಥೆ ಹೀಗಿದೆ: 80–90ರ ದಶಕಕ್ಕೆ ನಿರ್ದೇಶಕರು ನಮ್ಮನ್ನು ಟೈಟಲ್‌ ಕಾರ್ಡ್‌ ಜೊತೆಗೇ ಕರೆದೊಯ್ಯುತ್ತಾರೆ. ಅದಿನ್ನೂ ಆಕಾಶವಾಣಿಯ ಯುಗ. ಆ ಹಳ್ಳಿಯಲ್ಲಿ ರೇಡಿಯೊವೊಂದೇ ಮನರಂಜನೆಯ ಮಾಧ್ಯಮ. ಇಂಥ ಒಂದು ಹಳ್ಳಿಯಲ್ಲಿ ಶ್ರೀಮಂತ ಕುಟುಂಬದ ರಾಮಕೃಷ್ಣ ಭಟ್‌(ಸುಂದರ್‌ ವೀಣಾ) ಮನೆ ಇದೆ. ಅದು ಎಲ್ಲ ‘ಮೊದಲು’ಗಳ ಭಂಡಾರ. ವಿದ್ಯುತ್‌, ಗ್ರಾಮಾಫೋನ್‌, ಟೆಲಿಫೋನ್‌, ರೇಡಿಯೊ ಹೀಗೆ ಆಗಿನ ಕಾಲದ ಹೊಸ ತಂತ್ರಜ್ಞಾನಗಳೆಲ್ಲ ಮೊದಲು ಕಾಲಿಡುತ್ತಿದ್ದುದೇ ಈ ಭಟ್ಟರ ಮನೆಗೆ. ಹೀಗಿರುವಾಗ ರಾಮಕೃಷ್ಣ ಭಟ್‌ ಅವರ ತಮ್ಮ ಶ್ರೀನಿವಾಸ ಭಟ್‌(ರಘು ರಮಣಕೊಪ್ಪ) ತನ್ನ ಬಾಮೈದ ವಿದೇಶದಿಂದ ಉಡುಗೊರೆಯಾಗಿ ನೀಡಿದ ಟಿ.ವಿಯೊಂದನ್ನು ರಾಮಕೃಷ್ಣ ಭಟ್ಟರ ಮನೆಯಲ್ಲಿ ಇಡುತ್ತಾನೆ. ತನ್ನ ಹೊಸ ಮನೆ ಗೃಹಪ್ರವೇಶವಾಗುವವರೆಗೂ ಟಿ.ವಿ ಅಣ್ಣನ ಮನೆಯಲ್ಲೇ ಇರಲಿ ಎಂದು ಸೂಚಿಸುತ್ತಾನೆ. ಈ ಮಾಯಾಪೆಟ್ಟಿಗೆ ಭಟ್ಟರ ಮನೆಗೆ ಬಂದ ಬಳಿಕ ‘ಟಿ.ವಿ ತಂದ ಭಟ್ಟರೇ ದೇವಮಾನವಂ’ ಆಗುವ ಬಗೆ ಹಾಗೂ ನಂತರ ನಡೆಯುವ ಸರಣಿ ಘಟನೆಗಳೇ ಚಿತ್ರದ ಕಥೆ.

ಈ ಚಿತ್ರಕಥೆಯ ನಾಯಕನಾಗಿ ಮನು(ಪೃಥ್ವಿ ಅಂಬಾರ್‌) ಇದ್ದರೂ, ಕಥೆಯ ಮುಖ್ಯಪಾತ್ರಧಾರಿಯಾಗಿ ರಾಮಕೃಷ್ಣ ಭಟ್ಟರ ಮೂಲಕ ಸುಂದರ್‌ ವೀಣಾ ತೆರೆತುಂಬಿಕೊಳ್ಳುತ್ತಾರೆ. ಭಾಷೆ, ಸ್ಲ್ಯಾಂಗ್‌, ಧ್ವನಿಯ ಏರಿಳಿತ, ಹಾವಭಾವದಿಂದಲೇ ಮೊದಲಾರ್ಧದಲ್ಲಿ ನಾಯಕನಾಗಿ ಮಿಂಚಿ, ನಗುವಿನ ಔತಣವನ್ನೂ ಬಡಿಸುತ್ತಾರೆ. ಪೃಥ್ವಿ ಕೇವಲ ಡೈಲಾಗ್‌, ಫೈಟಿಂಗ್‌, ಹಾಡಿಗೆ ಸೀಮಿತವಾಗುತ್ತಾರೆ. ದೂರದರ್ಶನದ ಪ್ರವೇಶವೆಂಬ ಸ್ವಾರಸ್ಯಕರ ವಿಷಯವನ್ನು ಆಯ್ಕೆ ಮಾಡಿಕೊಂಡ ಕಾರಣ ಹಾಗೂ ಮೂರ್ನಾಲ್ಕು ಘಟನೆಗಳು ಏಕಕಾಲದಲ್ಲಿ ಸಾಗುವ ಕಾರಣ ಮೊದಲಾರ್ಧಕ್ಕೆ ವೇಗವಿದೆ. ಹಳ್ಳಿಯೊಂದಕ್ಕೆ ಮೊದಲ ಟಿ.ವಿ ಬಂದಾಗ ವಾತಾವರಣ ಹೇಗಿರುತ್ತದೆ, ಮಾಯಾಪೆಟ್ಟಿಗೆಗೆ ಜನ ಆಕರ್ಷಿತರಾಗುವ ಬಗೆ, ರಾಮಾಯಣ ಧಾರಾವಾಹಿಯ ಸೆಳೆತ, ಟಿ.ವಿ ಇರುವ ಮನೆಯ ಪರಿಸ್ಥಿತಿ ಏನಾಗುತ್ತದೆ ಎನ್ನುವುದನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಆದರೆ ಇದೇ ವೇಗ ದ್ವಿತೀಯಾರ್ಧದಲ್ಲಿ ಮರೆಯಾಗುತ್ತದೆ. ಕಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದರೆ ಇದು ಸಾಧ್ಯವಿತ್ತು.

ಈ ಚಿತ್ರದ ಮೂಲಕ ಕಮರ್ಷಿಯಲ್‌ ಸಿನಿಮಾ ಲೋಕಕ್ಕೆ ಹೆಜ್ಜೆ ಇಟ್ಟಿರುವ ನಟಿ ಅಯಾನ ‘ಮೈತ್ರಿ’ ಎಂಬ ಪಾತ್ರದಲ್ಲಿ ಜೀವಿಸಿದ್ದಾರೆ. ರಾಮಕೃಷ್ಣ ಭಟ್‌ ಅವರ ಪತ್ನಿ ‘ಸುಲೋಚನ’ಳಾಗಿ ಹರಿಣಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಯಾನ ಅವರಲ್ಲಿ ಭರವಸೆಯ ನಟಿಯನ್ನು ಗುರುತಿಸಬಹುದು. ಉಗ್ರಂ ಮಂಜು ನಟನೆಯಲ್ಲಿ ಅಂಕ ಗಿಟ್ಟಿಸಿಕೊಂಡರೂ, ಅವರ ಧ್ವನಿ ಸಿನಿಮಾದಲ್ಲಿ ಕೃತಕವಾಗಿರುವಂತೆ ಭಾಸವಾಗುತ್ತದೆ. ಮನುವಿನ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹುಲಿ ಕಾರ್ತಿಕ್‌, ಸೂರಜ್‌ ಹಾಗೂ ಸೂರ್ಯ ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ.

ತಾನು ಕೇವಲ ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನು ನಟ ದೀಪಕ್‌ ರೈ ಪಾಣಾಜೆ ಇಲ್ಲಿ ಸಾಬೀತುಪಡಿಸಿದ್ದಾರೆ. ‘ಮೈತ್ರಿ’ಯ ತಂದೆ ‘ಪಾಂಡು’ವಾಗಿ ಗಂಭೀರವಾದ ಪಾತ್ರದಲ್ಲಿ ತೆರೆಯಲ್ಲಿ ಜೀವಿಸಿದ್ದಾರೆ. ಜೊತೆಯಾಗಿ ಬಾಳಿದರೆ ಸ್ವರ್ಗ ಎನ್ನುವ ಸಂದೇಶ ಹೊತ್ತ ಸಿನಿಮಾದಲ್ಲಿ ಹಳ್ಳಿಯ ಸೌಂದರ್ಯವನ್ನು ಅರುಣ್‌ ಸುರೇಶ್‌ ಸುಂದರವಾಗಿ ಸೆರೆಹಿಡಿದಿದ್ದಾರೆ. ವಾಸುಕಿ ವೈಭವ್‌ ಅವರ ಸಂಗೀತವೂ ಇಂಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.