# ಪಾರು ಪಾರ್ವತಿ’ ಚಿತ್ರದ ಪೋಸ್ಟರ್
ಟ್ರಾವೆಲ್ ಅಡ್ವೆಂಚರ್ ಆಧಾರಿತ ಸಿನಿಮಾಗಳಲ್ಲಿ ಪಾತ್ರಗಳ ನಡುವೆ ನಡೆಯುವ ಡ್ರಾಮಾ, ಪ್ರಕೃತಿಯನ್ನು ಸೆರೆಹಿಡಿದ ರೀತಿ, ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಮುಖ್ಯಭೂಮಿಕೆಯಲ್ಲಿರುತ್ತವೆ. ಈ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಿ ತೆರೆಗೆ ಬಂದಿದೆ ‘#ಪಾರು ಪಾರ್ವತಿ’. ತಿಳಿಯಾದ ಹಾಸ್ಯ, ಜೀವನ ಪಾಠ, ಮನಸೆಳೆಯುವ ಛಾಯಾಚಿತ್ರಗ್ರಹಣ, ಯುವಜನತೆಗೆ ಸಂದೇಶ ಎಲ್ಲವೂ ಈ ಸಿನಿಮಾದಲ್ಲಿದ್ದರೂ ಒಟ್ಟು ಸಿನಿಮಾ ಅವಧಿ ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತದೆ.
‘ಪಾರ್ವತಿ’(ಪೂನಂ ಸರ್ನಾಯಕ್) ಬೆಂಗಳೂರಿನಲ್ಲಿ ವಾಸಿಸುತ್ತಿರುವ 62 ವರ್ಷದ ಮಹಿಳೆ. ಬಾಲ್ಯದಲ್ಲೇ ವಿವಾಹ ಬಂಧನಕ್ಕೆ ಒಳಗಾದ ಈಕೆಗೆ ಐವರು ಪುತ್ರರು. ಗಂಡನ ಜೊತೆ ಮಾತುಕತೆ ನಡೆಸದೆ ಇಪ್ಪತ್ತು ವರ್ಷಗಳು ಉರುಳಿವೆ. ಆತ ಸೇನೆಯಲ್ಲಿ ಅಧಿಕಾರಿಯಾಗಿದ್ದಾನೆ. ಮಕ್ಕಳ ಜೊತೆ ಇರದೆ ಈಕೆ ಒಬ್ಬಂಟಿಯಾಗಿಯೇ ಮನೆಯೊಂದರಲ್ಲಿ ಇದ್ದಾಳೆ. ಮಕ್ಕಳ ಅತಿಯಾದ ಕಾಳಜಿ ‘ಪಾರ್ವತಿ’ಗೆ ಕಿರಿಕಿರಿ ಎನಿಸತೊಡಗಿದೆ. ಸೊಸೆಯಂದಿರ ಚುಚ್ಚು ಮಾತುಗಳನ್ನು ಕೇಳಿ ಈಕೆಗೆ ಸಾಕಾಗಿದೆ. ಇಂತಹ ಬಂಧನದಲ್ಲಿರುವ ‘ಪಾರ್ವತಿ’ಗೆ ಹಾಯಾಗಿ ಹಾರುವ ಇಚ್ಛೆ. ಐವತ್ತನೇ ವಿವಾಹ ವಾರ್ಷಿಕೋತ್ಸವಕ್ಕೆ ಗಂಡನನ್ನು ಭೇಟಿಯಾಗಿ ಅಚ್ಚರಿ ನೀಡುವ ಆಸೆ. ‘ಜರ್ನಿ ಆ್ಯಂಡ್ ಜರ್ನಿ’ ಎಂಬ ಯುಟ್ಯೂಬ್ ಚಾನೆಲ್ ನಡೆಸುವ ಸ್ನೇಹಿತೆ ‘ಪಾಯಲ್’(ದೀಪಿಕಾ ದಾಸ್) ಬಳಿ ತನ್ನ ಆಸೆ, ಇಚ್ಛೆಯನ್ನು ‘ಪಾರ್ವತಿ’ ಹೇಳಿಕೊಂಡಾಗ ಕಥೆ ತೆರೆದುಕೊಳ್ಳುತ್ತದೆ. ಇವರಿಬ್ಬರ ಪಯಣ ಅವರ ಬದುಕಿನಲ್ಲಿ ಕಲಿಸುವ ಪಾಠವೇ ಮುಂದಿನ ಕಥೆ.
ಅನನುಕ್ರಮಣಿಕೆಯ(non-linear) ನಿರೂಪಣೆಯಲ್ಲಿ ಈ ಚಿತ್ರದ ಕಥೆಯಿದೆ. ಟ್ರಾವೆಲ್ ಆಧಾರಿತ ಸಿನಿಮಾದ ಚಿತ್ರಕಥೆಯಲ್ಲಿ ಈ ಮಾದರಿಯ ಬಳಕೆ ಸಾಮಾನ್ಯ. ಇದು ಪ್ರೇಕ್ಷಕನನ್ನು ಕಥೆಯಲ್ಲಿ ಹಿಡಿದಿಡುವ ಸಾಧನವೂ ಹೌದು. ಹಾಲಿವುಡ್‌ನ ‘ಇನ್‌ಟು ದ ವೈಲ್ಡ್’ ಸಿನಿಮಾಗೆ ಹೋಲುವ ಎಳೆಯನ್ನು ‘#ಪಾರು ಪಾರ್ವತಿ’ ಹೊಂದಿದೆ. ಅಲ್ಲಿ ನಾಯಕ ಸಾಹಸವನ್ನರಿಸಿ ಒಬ್ಬಂಟಿಯಾಗಿ ಹೆಜ್ಜೆ ಇಟ್ಟರೆ, ಇಲ್ಲಿ ಇಬ್ಬರು ‘ಸೋಲೋ ಟ್ರಾವೆಲ್’ ಮಾದರಿಯಲ್ಲಿ ಮಾಡುವ ಪ್ರಯಾಣ ಹೊಸ ಲೋಕ ಸೃಷ್ಟಿಸಿದೆ. ‘ಫೋಟೋ’ ಸಿನಿಮಾ ಮಾದರಿಯ ಕೆಲವು ಟ್ರಾವೆಲ್ ಕಥೆಗಳು ವ್ಯಥೆಗಳನ್ನು ಬಿಚ್ಚಿಟ್ಟರೆ, ಇಂತಹ ಟ್ರಾವೆಲ್ ಕಥೆಗಳು ಜೀವನೋತ್ಸಾಹ ತುಂಬುತ್ತವೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಸಿನಿಮಾ ಹಾಗೂ ಪ್ರಯತ್ನ. ಚಿತ್ರಕಥೆಯನ್ನು ಕೆಲವೆಡೆ ಇನ್ನಷ್ಟು ಬಿಗಿಯಾಗಿಸಿದ್ದರೆ ಸಿನಿಮಾದ ಅವಧಿ ಇಳಿಸಲು ಅವಕಾಶವಿತ್ತು. ಹಲವು ದೃಶ್ಯಗಳು ಅನಗತ್ಯ ಎಂದೆನಿಸುತ್ತವೆ.
ಚಿತ್ರಕಥೆ ಪೇಲವವಾಗಿರುವ ದೃಶ್ಯಗಳನ್ನು ಅಬಿನ್ ರಾಜೇಶ್ ಛಾಯಾಚಿತ್ರಗ್ರಹಣ ಹಾಗೂ ಆರ್.ಹರಿ ಸಂಗೀತ ಮರೆಮಾಚಿದೆ. ಮಥುರದಲ್ಲಿನ ಹಾಡು, ಅದನ್ನು ಸೆರೆಹಿಡಿದಿರುವ ರೀತಿ ಅದ್ಭುತವಾಗಿದೆ. ಪಯಣದಲ್ಲಿ ಪ್ರಕೃತಿಯ ದೃಶ್ಯಗಳು ಕಣ್ಣಿಗೆ ತಂಪು ತರುತ್ತವೆ. ನಟನೆಯಲ್ಲಿ ಪೂನಂ ಹೆಚ್ಚಿನ ಅಂಕ ಗಳಿಸುತ್ತಾರೆ. ಆಂಗಿಕ ಅಭಿನಯದಲ್ಲಿ ಪಳಗಿರುವಂತೆ ಅವರು ಕಾಣಿಸುತ್ತಾರೆ. ಅವರ ಪಾತ್ರದ ಡಬ್ಬಿಂಗ್ ಕೊಂಚ ಹೆಚ್ಚು ಕಡಿಮೆಯಾಗಿದೆ ಎಂದೆನಿಸಿದರೂ ಸಮಯ ಉರುಳಿದಂತೆ ಪಾತ್ರಕ್ಕೆ ಒಗ್ಗಿಕೊಳ್ಳಲಾರಂಭಿಸುತ್ತದೆ. ದೀಪಿಕಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಮಿಂಚಿದ್ದಾರೆ. ಫವಾಜ್ ಅಶ್ರಫ್ ನಿಭಾಯಿಸಿದ ‘ಮಿದುನ್’ ಎಂಬ ‘ಹಾಫ್ ಕನ್ನಡಿಗ’ ಹುಡುಗನ ಪಾತ್ರಕ್ಕೆ ಇನ್ನಷ್ಟು ವಿಸ್ತರಣೆ ಹಾಗೂ ತೆರೆ ಅವಧಿ ನೀಡಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.