ADVERTISEMENT

Kabzaa| ಸಿನಿಮಾ ವಿಮರ್ಶೆ: ಮೇಕಿಂಗ್‌ನಲ್ಲೇ ಉಸಿರಾಡಲೆತ್ನಿಸುವ ‘ಕಬ್ಜ’

ಅಭಿಲಾಷ್ ಪಿ.ಎಸ್‌.
Published 17 ಮಾರ್ಚ್ 2023, 13:07 IST
Last Updated 17 ಮಾರ್ಚ್ 2023, 13:07 IST
ಕಬ್ಜ ಪೋಸ್ಟರ್‌
ಕಬ್ಜ ಪೋಸ್ಟರ್‌   

ಸಿನಿಮಾ: ಕಬ್ಜ(ಕನ್ನಡ)

ನಿರ್ದೇಶನ: ಆರ್. ಚಂದ್ರು

ನಿರ್ಮಾಪಕರು: ಆರ್‌. ಚಂದ್ರು ಹಾಗೂ ಅಲಂಕಾರ್‌ ಪಾಂಡಿಯನ್‌

ADVERTISEMENT

ತಾರಾಗಣ: ಉಪೇಂದ್ರ, ಸುದೀಪ್‌, ಶಿವರಾಜ್‌ಕುಮಾರ್‌, ಶ್ರಿಯಾ ಸರಣ್‌, ಮುರುಳಿ ಶರ್ಮಾ, ಸುಧಾ, ನೀನಾಸಂ ಅಶ್ವಥ್‌, ಅನೂಪ್‌ ರೇವಣ್ಣ ಮತ್ತಿತರರು.

ಸಿನಿಮಾವೊಂದು ಸದೃಢವಾದ ಕಥೆಯಿಲ್ಲದೆ, ಕೇವಲ ‘ಮೇಕಿಂಗ್‌’ ಎನ್ನುವ ಅಂಶವೊಂದನ್ನಷ್ಟೇ ಹಿಡಿದು 136 ನಿಮಿಷ ಉಸಿರಾಡಲು ಪ್ರಯತ್ನಿಸಿದರೆ ಚಿತ್ರಮಂದಿರಗಳಲ್ಲಿ ವೀಕ್ಷಕರಿಗೆ ಉಸಿರುಕಟ್ಟುವುದು ಖಚಿತ. ಇದುವೇ ‘ಕಬ್ಜ’ದ ‘ಭಯಂಕರ’ ಒನ್‌ಲೈನ್‌ ಸ್ಟೋರಿ. ಟೀಸರ್‌, ಟ್ರೈಲರ್‌ನಲ್ಲಿ ಗಮನಸೆಳೆದರೂ, ‘ಕಬ್ಜ’ ಗಟ್ಟಿಯಾದ ಚಿತ್ರಕಥೆಯಿಲ್ಲದೆ ಒದ್ದಾಡುತ್ತದೆ. ಕಥೆ ಇಲ್ಲದೇ ‘ಮೇಕಿಂಗ್‌’ ಎನ್ನುವ ಮಾಯಾಲೋಕಕ್ಕೆ ಪ್ರವೇಶಿಸುವವರಿಗೆ ಈ ಸಿನಿಮಾ ಎಚ್ಚರಿಕೆಯ ಸಾಕ್ಷ್ಯವಾಗಿ ಇರಲಿದೆ.

ಮುಗ್ಧ ನಾಯಕನೊಬ್ಬ ತನ್ನ ಕುಟುಂಬಕ್ಕೆ, ಪ್ರೀತಿಸುವ ಹುಡುಗಿಗೆ ತೊಂದರೆಯಾದ ಸಂದರ್ಭದಲ್ಲಿ ರೌಡಿಸಂ ಲೋಕಕ್ಕೆ ಹೆಜ್ಜೆ ಇಡುವಂಥ ಕಥೆಯ ಹಲವು ಸಿನಿಮಾಗಳು ಈಗಾಗಲೇ ತೆರೆಗಪ್ಪಳಿಸಿವೆ. ‘ಕಬ್ಜ’ ಮೊದಲ ಭಾಗದ ಕಥೆಯೂ ಇದೇ ಒನ್‌ಲೈನ್‌ ಸ್ಟೋರಿ ಹೊಂದಿದೆ. ಉತ್ತರ ಭಾರತದ ಸಂಗ್ರಾಮನಗರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ‘ಅಮರೇಶ್ವರ’ ಎಂಬಾತನ ಮಕ್ಕಳು ಸಂಕೇಶ್ವರ (ಸುನೀಲ್‌ ಪುರಾಣಿಕ್‌) ಹಾಗೂ ಅರ್ಕೇಶ್ವರ (ಉಪೇಂದ್ರ). ಅಮರೇಶ್ವರ ಹುತಾತ್ಮನಾದ ಬಳಿಕ ಆತನ ಪತ್ನಿ ತುಳಸೀದೇವಿ (ಸುಧಾ) ಮಕ್ಕಳಿಬ್ಬರನ್ನು ಕರೆದುಕೊಂಡು ಕರ್ನಾಟಕದ ಅಮರಾಪುರಕ್ಕೆ ಬರುತ್ತಾಳೆ. ಆ ಸಂದರ್ಭದಲ್ಲೇ ದೇಶಕ್ಕೆ ಸ್ವಾತಂತ್ರ್ಯ ಬರುತ್ತದೆ. ಮುಂದೆ ಮುಗ್ಧ ಅರ್ಕೇಶ್ವರ, ತನ್ನ ಅಣ್ಣ ಮಾಡಿದ ಕೊಲೆಯೊಂದರ ಕಾರಣಕ್ಕೆ ಹೇಗೆ ರಕ್ತದ ಲೋಕಕ್ಕೆ ಕಾಲಿಡುತ್ತಾನೆ ಎನ್ನುವುದೇ ಮೊದಲಾರ್ಧದ ಕಥೆ.

ನಿರೂಪಣೆ ರೂಪದಲ್ಲಿ ‘ಕಬ್ಜ’ ಸಿನಿಮಾದ ಕಥೆ ಸಾಗುತ್ತದೆ. ಚಿತ್ರದ ಆರಂಭದಲ್ಲೇ ಪೊಲೀಸ್‌ ಅಧಿಕಾರಿ ಭಾರ್ಗವ್‌ ಭಕ್ಷಿ(ಸುದೀಪ್‌) ಭರ್ಜರಿಯಾಗಿ ಪ್ರವೇಶ ನೀಡುತ್ತಾ ಭೂಗತಲೋಕದ ‘ಅರ್ಕೇಶ್ವರ’ನ ಕಥೆಯನ್ನು ಬಿಚ್ಚಿಡುತ್ತಾ ಸಾಗುತ್ತಾನೆ. ಈ ದೃಶ್ಯ ಖಂಡಿತವಾಗಿಯೂ ಸಿನಿಮಾ ಮೇಲೆ ಬಹಳ ನಿರೀಕ್ಷೆ ಹುಟ್ಟಿಸುತ್ತದೆ. ಆದರೆ ಸಮಯ ಉರುಳಿದಂತೆ ಇಡೀ ಕಥೆಯೇ ದಾರಿ ತಪ್ಪಿ, ಮೇಕಿಂಗ್‌ ಎಂಬ ಪೆಡಂಭೂತಕ್ಕೆ ಇಡೀ ಸಿನಿಮಾ ಆಹುತಿಯಾಗುತ್ತದೆ. ಮಧ್ಯಂತರದಲ್ಲಿ ‘ಕಬ್ಜ ಬಿಗಿನ್ಸ್‌’(ಕಬ್ಜ ಈಗ ಶುರು) ಎಂದು ತೆರೆ ಮೇಲೆ ಬರುವು ಹೊತ್ತಿಗೆ ವೀಕ್ಷಕನೇ ಮೊದಲಾರ್ಧದಲ್ಲಿ ಕಥೆಯೇ ಇಲ್ಲ ಎನ್ನುವುದನ್ನು ಅರಿತುಕೊಂಡಿರುತ್ತಾನೆ. ಹೀಗೆಂದು ದ್ವಿತೀಯಾರ್ಧದಲ್ಲಿ ಕಥೆ ಇದೆಯೇ ಎಂದು ನಿರೀಕ್ಷಿಸಿದರೆ ಅದೂ ಹುಸಿ.

ದ್ವಿತೀಯಾರ್ಧದಲ್ಲಿ ರಕ್ತದ ಕೋಡಿಯಲ್ಲ, ಸಮುದ್ರವೇ ಹರಿಯುತ್ತದೆ. ಗುಂಡಿನ ಚಕಮಕಿಯಲ್ಲ, ಸುರಿಮಳೆಯೇ ತುಂಬಿದೆ. ‘ಕಬ್ಜ’ ಮಾಡುವುದಷ್ಟೇ ನಾಯಕನ ಗುರಿಯಾಗಿ, ತರ್ಕಕ್ಕೆ ನಿಲುಕದ ದೃಶ್ಯಗಳು ಇಲ್ಲಿ ತುಂಬಿವೆ(ಕಥೆ ಇದ್ದರಲ್ಲವೇ ದೃಶ್ಯಗಳು ತರ್ಕಕ್ಕೆ ಸಿಗುವುದು). ‘ಬಾಲಿ’ ಎಂಬ ಬಿಲ್ಡ್‌ಅಪ್‌ ಪಾತ್ರವೊಂದು ಅರ್ಕೇಶ್ವರನನ್ನು ಕೊಲ್ಲಲು ಹೆಲಿಕಾಪ್ಟರ್‌ನಲ್ಲಿ ಬಂದು ಕೊಲೆಯಾಗಿ ಹೋಗುವ ದೃಶ್ಯ ಒಂದೇ ಸಾಕು ಈ ಮಾತಿಗೆ ಸಾಕ್ಷ್ಯವಾಗಿ. ಇಲ್ಲಿ ಬರುವ ಸಾಲು ಸಾಲು ಪಾತ್ರಗಳಿಗೆ ಅಂತ್ಯವಿಲ್ಲ, ತರ್ಕವಿಲ್ಲ.

ಕೆ.ಜಿ.ಎಫ್‌ ಇತರೆ ಸಿನಿಮಾಗಳಿಗೆ ಪ್ರೇರಣೆಯಾದರೆ ಸಮಸ್ಯೆ ಇಲ್ಲ. ಆದರೆ ಪ್ರೇರಣೆ ಪಡೆದ ಸಿನಿಮಾವೇ ಕೆ.ಜಿ.ಎಫ್‌ ರೀತಿ ಆಗಬಾರದು. ಕೆ.ಜಿ.ಎಫ್‌ ಸ್ಕ್ರೀನ್‌ಪ್ಲೇಯನ್ನೇ ‘ಕಬ್ಜ’ ಸಿನಿಮಾದುದ್ದಕ್ಕೂ ಬಳಸಿಕೊಳ್ಳಲಾಗಿದೆ. ದೃಶ್ಯಗಳ ನಡುವೆ ಫೇಡ್‌ ಇನ್‌ ಫೇಡ್‌ ಔಟ್‌ ವೀಕ್ಷಕರಿಗೇ ಕಿರಿಕಿರಿಯಾಗುವಷ್ಟು ಇದೆ. ರವಿ ಬಸ್ರೂರು ನೀಡಿರುವ ಹಿನ್ನೆಲೆ ಸಂಗೀತ(ಬಿಜಿಎಂ) ಅವರ ಎಲ್ಲ ಪ್ರಾಜೆಕ್ಟ್‌ಗಳ ಚೌಚೌಬಾತ್‌! ಕೆ.ಜಿ.ಎಫ್‌ ಸಿನಿಮಾವೇ ರಿರಿಲೀಸ್‌ ಆಗಿದೆಯೇ ಎಂದೊಮ್ಮೆ ಅನಿಸಿದರೆ ತಪ್ಪೇನಿಲ್ಲ!

ಉಪೇಂದ್ರ ಅವರು ಇಂಥ ಔಟ್‌ ಆ್ಯಂಡ್‌ ಔಟ್‌ ರೌಡಿ ಪಾತ್ರಗಳಿಗೆ ಸೂಕ್ತವಾಗುವವರಲ್ಲ ಎನ್ನುವುದು ಇಲ್ಲಿ ಅಷ್ಟೇ ಸ್ಪಷ್ಟ. ಅವರು ಪಾತ್ರದೊಳಗೆ ಜೀವಿಸಿದ್ದರೂ, ಕಥೆ ಇಲ್ಲದೆ ನರಳಾಡಿದ್ದಾರೆ. ಅಮರಾಪುರದ ವೀರ ಬಹದ್ದೂರ್‌ ಪಾತ್ರದಲ್ಲಿ ಮುರಳಿ ಶರ್ಮಾ ನಟನೆ ಕೃತಕವಾಗಿದೆ. ಸುನೀಲ್‌ ಪುರಾಣಿಕ್‌, ‘ಮಧುಮತಿ’ಯಾಗಿ ಶ್ರಿಯಾ ಸರಣ್‌, ಸುಧಾ ತಮ್ಮ ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ. ಬಾಲಿವುಡ್‌ನ ಅಗ್ನಿಪಥ್‌ ಸಿನಿಮಾದ ‘ಕಾಂಚ’ ಪಾತ್ರದ ರೂಪವೊಂದನ್ನು ನೀನಾಸಂ ಅಶ್ವಥ್‌ ಅವರ ಪಾತ್ರದಲ್ಲಿ ಕಾಣಬಹುದು! ಸುದೀಪ್‌ ಅವರು ತೆರೆ ಮೇಲೆ ಕಾಣಿಸಿಕೊಳ್ಳುವುದು ಕೆಲ ನಿಮಿಷಗಳಷ್ಟೇ. ಆದರೆ ಅವರ ಧ್ವನಿ ಕಥೆಯ ಹಿನ್ನೆಲೆಯಲ್ಲಿದೆ. ಉಳಿದಂತೆ ಚಂದ್ರು ಅವರು ಸೃಷ್ಟಿಸಿದ ಉಳಿದೆಲ್ಲ ಪಾತ್ರಗಳು ನಿರ್ಜೀವ. ಕ್ಲೈಮ್ಯಾಕ್ಸ್‌ನಲ್ಲಿ ತಮಿಳಿನ ‘ವಿಕ್ರಮ್‌’ನ ‘ರೋಲೆಕ್ಸ್‌’ನಂತೇ ಪ್ರವೇಶ ನೀಡುವ ಶಿವರಾಜ್‌ಕುಮಾರ್‌ ಅವರ ಪಾತ್ರದ ಗುಟ್ಟು ಎರಡನೇ ಭಾಗ ಬಂದಾದ ಮೇಲಷ್ಟೇ ತಿಳಿಯಲಿದೆ.

ಪುನೀತ್ ರಾಜ್‌ಕುಮಾರ್‌ ಅವರಿಗೆ ಚೆಂದದ ಗೌರವವೊಂದನ್ನು ವಿಡಿಯೊ ಮೂಲಕ ಆರಂಭದಲ್ಲೇ ಚಿತ್ರತಂಡ ನೀಡಿದೆ. ಕೊನೆಯಲ್ಲಿ; ‘ಇದು ಮೇಕಿಂಗ್‌ ಸಿನಿಮಾ’ ಎಂದು ಚಿತ್ರತಂಡ ಹೇಳುತ್ತಲೇ ಇದೆ. ಹೌದು, ಆದರೆ ‘ಮೇಕಿಂಗ್‌’, ‘ಪ್ಯಾನ್‌ ಇಂಡಿಯಾ’ ಎಂಬ ಹಣೆಪಟ್ಟಿಯೊಂದೇ ಸಿನಿಮಾ ಆಗುವುದಿಲ್ಲ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.