ADVERTISEMENT

ಸ್ಪೂಕಿ ಕಾಲೇಜ್‌ ಸಿನಿಮಾ ವಿಮರ್ಶೆ: ಕಾಲೇಜು ಮುಚ್ಚುವವರೆಗೆ ದೆವ್ವದ ಕಿತಾಪತಿ

ಶರತ್‌ ಹೆಗ್ಡೆ
Published 6 ಜನವರಿ 2023, 10:25 IST
Last Updated 6 ಜನವರಿ 2023, 10:25 IST
‘ಸ್ಪೂಕಿ ಕಾಲೇಜ್‌’ ವಿವೇಕ್‌ ಸಿಂಹ, ಖುಷಿ ರವಿ
‘ಸ್ಪೂಕಿ ಕಾಲೇಜ್‌’ ವಿವೇಕ್‌ ಸಿಂಹ, ಖುಷಿ ರವಿ   

ಚಿತ್ರ: ಸ್ಪೂಕಿ ಕಾಲೇಜ್‌
ನಿರ್ದೇಶನ: ಭರತ್‌ ಜಿ.
ನಿರ್ಮಾಣ: ಎಚ್‌.ಕೆ. ಪ್ರಕಾಶ್‌
ಸಂಗೀತ: ಅಜನೀಶ್‌ ಲೋಕನಾಥ್‌
ತಾರಾಗಣ: ವಿವೇಕ್‌ ಸಿಂಹ, ಖುಷಿ, ರೀಷ್ಮಾ ನಾಣಯ್ಯ, ಪೃಥ್ವಿ ರಾಷ್ಟ್ರಕೂಟ, ಹನುಮಂತೇಗೌಡ

***

ಪ್ರಿಯತಮನಿಂದ ಮೋಸ ಹೋದೆ ಎಂದು ಭಾವಿಸಿ ಒಂದು ವರ್ಷದ ಬಳಿಕ ಮತ್ತೆ ಕಾಲೇಜಿಗೆ ಸೇರುವ ನಾಯಕಿ. ನಾನು ಪ್ರಾಮಾಣಿಕ ಎಂದು ದೆವ್ವವಾಗಿ ಬಂದು ನಾಯಕಿಗೆ ಮಾತ್ರ ಕಾಣಿಸಿಕೊಂಡು ಹೇಳಿಕೊಳ್ಳುವ ನಾಯಕ. ಅದಕ್ಕಾಗಿ ಮಾಟ ಮಂತ್ರ ಕಲಿತು ಅನುಷ್ಠಾನಗೊಳಿಸುವ ನಾಯಕಿ. ನಾಯಕಿಗೆ ಅವನ ಪ್ರಾಮಾಣಿಕತೆ ಅರ್ಥವಾದ ಬಳಿಕ ಮೋಕ್ಷ ಪಡೆಯುವ ಆತ್ಮ... ಈ ನಡುವೆ ಒಂದಿಷ್ಟು ನಿಗೂಢ ಸಾವುಗಳು, ನಾಟಕಗಳು... ಉತ್ತರ ಸಿಗದ ಪ್ರಶ್ನೆಗಳು...

ADVERTISEMENT

ಇದು ‘ಸ್ಪೂಕಿ ಕಾಲೇಜ್‌’ನ ಒಂದು ಸಾಲಿನ ಭಯಾನಕ (!?) ಕಥೆ. ಒಂದೇ ಸನ್ನಿವೇಶದಲ್ಲಿ ಯಾವುದೇ ಅಬ್ಬರವಿಲ್ಲದೆ ಸರಳವಾಗಿ ಒಂದು ದೆವ್ವದ ಕಥೆಯನ್ನು ಹೇಳುವ ಪ್ರಯತ್ನ ಇಲ್ಲಿದೆ. ಒಂದಿಷ್ಟು ಹೊಸಬರನ್ನೇ ಹಾಕಿಕೊಂಡು ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ.

ಆದರೆ... ಇದನ್ನೇ ಇನ್ನೊಂದಿಷ್ಟು ಗಟ್ಟಿಯಾಗಿ ಕಟ್ಟಿಕೊಡಬಹುದಿತ್ತೇ ಎಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ. ಏಕೆಂದರೆ ಚಿತ್ರದ ಮೊದಲಾರ್ಧ ಜಾಳುಜಾಳಾಗಿದೆ. ಅತೀಂದ್ರೀಯ ಶಕ್ತಿಗಳನ್ನು ತೋರಿಸುವಲ್ಲಿ ಮೊಳಗುವ ಒಂದಿಷ್ಟು ಕರ್ಕಶ ಸಂಗೀತ ತೆರೆಯ ಮೇಲೆ ಬರಬಹುದಾದ ದೆವ್ವವನ್ನು ಓಡಿಸಿ ತಾನೇ ಕೂತುಬಿಡುತ್ತದೆ. ಭಯ ಅನ್ನುವುದಂತೂ ದೂರದ ಮಾತು. ದ್ವಿತೀಯಾರ್ಧದಲ್ಲಿ ಕಥೆ ತೆರೆದುಕೊಳ್ಳುತ್ತದೆ. ಕೊನೆಗೂ ದೆವ್ವ ಇದೆ. ಮಾಟ ಮಂತ್ರಗಳೂ ನಡೆಯುತ್ತವೆ. ಮೃತದೇಹವೂ ಮಾತನಾಡಬಲ್ಲದು ಎನ್ನುವಲ್ಲಿಗೆ ಕಥೆ ಶುಭಂ.

ಚಿತ್ರದಲ್ಲಿರುವ ಪ್ಲಸ್‌ ಪಾಯಿಂಟ್‌ಗಳೆಂದರೆ ಎಲ್ಲ ಕಲಾವಿದರ ಅಭಿನಯ ಹದವಾಗಿದೆ. ಇದು ನಾಯಕಿ ಪ್ರಧಾನ ಚಿತ್ರ. ಆದರೆ, ಕಾಣದ ದೆವ್ವವೂ ಕುತೂಹಲ ಉಳಿಸುತ್ತದೆ. ನಾಯಕ ವಿವೇಕ್‌ ಸಿಂಹ, ನಾಯಕಿ ಖುಷಿಯಷ್ಟೇ ಮಹತ್ವ ರೀಷ್ಮಾ ನಾಣಯ್ಯ, ಪೃಥ್ವಿ ರಾಷ್ಟ್ರಕೂಟ, ಹನುಮಂತೇಗೌಡ, ವಿಜಯ್‌ ಚೆಂಡೂರ್‌, ಎಂ.ಕೆ. ಮಠ ಸಹಿತ ಎಲ್ಲ ಪಾತ್ರಧಾರಿಗಳಿಗೂ ಸಮಾನವಾಗಿ ಸಿಕ್ಕಿದೆ. ಒಂದೆರಡು ದೃಶ್ಯಗಳಲ್ಲಿ ಬಂದು ಕೀಟಲೆ ಮಾಡಿ, ಭಾವುಕತೆಗೆ ತಿರುಗಿ ಹೋಗುವ ಉಮೇಶ್‌ ಕಿನ್ನಾಳ್‌ ಪಾತ್ರ ನೆನಪಿನಲ್ಲಿ ಉಳಿಯುತ್ತದೆ. ಛಾಯಾಗ್ರಹಣ, ಹಳೆಯ ಹಾಡುಗಳಿಗೆ ಹೊಸ ಸ್ಪರ್ಶ ಕೊಟ್ಟು ದೃಶ್ಯ ರೂಪಿಸಿದ್ದು (ಬಹುಶಃ ಉಳಿತಾಯದ ದೃಷ್ಟಿಯೂ ಇರಬಹುದು.), ದೆವ್ವದ ಅಸ್ತಿತ್ವ ಸಾಕ್ಷೀಕರಿಸುವ ದೃಶ್ಯ ನಿರ್ಮಾಣ, ವಿಶೇಷ ಪರಿಣಾಮ, ಅಲ್ಲಲ್ಲಿ ಬಳಸಿದ ಬೆಳಕಿನ ತಂತ್ರ, ಗ್ರಾಫಿಕ್‌ ಇತ್ಯಾದಿ ಚೆನ್ನಾಗಿವೆ.

ಮೊದಲ ಮೂರು ದೃಶ್ಯಗಳಷ್ಟೇ ಬಿಗಿತನ ಉಳಿದ ಕಡೆಯೂ ಇರಬೇಕಿತ್ತು. ತುದಿಗಾಲಿನಲ್ಲಿ ಕೂರಿಸುವ ಚಿತ್ರಕಥೆ ಮತ್ತು ನಿರೂಪಣೆ ಇಂಥ ವಸ್ತುವುಳ್ಳ ಕಥೆಗಳಿಗೆ ಅಗತ್ಯವಿದೆ. ದೆವ್ವವೂ ಕಾಲೇಜೊಂದನ್ನು ಮುಚ್ಚಿಸುವ ಹಂತದವರೆಗೆ ಕಿತಾಪತಿ ಮಾಡಬಲ್ಲದೇ ಎಂಬ ಕುತೂಹಲ ಹಾಗೇ ಉಳಿಯುತ್ತದೆ. ಇನ್ನೂ ಅರ್ಧಗಂಟೆ ಇಳಿಸಿದ್ದರೆ ಪ್ರೇಕ್ಷಕನ ತಾಳ್ಮೆ ಮತ್ತು ಸಮಯ ಉಳಿಯುತ್ತಿತ್ತು. ಸಿನಿಮಾ ವೇಗ ಪಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.