ADVERTISEMENT

ಶಭಾಷ್‌ ಬಡ್ಡಿಮಗ್ನೆ ಸಿನಿಮಾ ವಿಮರ್ಶೆ: ಸಿದ್ಧಸೂತ್ರ ಬಿಟ್ಟು ಕದಲದ ಸಿನಿಮಾ

ಅಭಿಲಾಷ್ ಪಿ.ಎಸ್‌.
Published 28 ಫೆಬ್ರುವರಿ 2025, 10:01 IST
Last Updated 28 ಫೆಬ್ರುವರಿ 2025, 10:01 IST
ಆದ್ಯಪ್ರಿಯಾ, ಪ್ರಮೋದ್‌ ಶೆಟ್ಟಿ 
ಆದ್ಯಪ್ರಿಯಾ, ಪ್ರಮೋದ್‌ ಶೆಟ್ಟಿ    

ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಸಿನಿಮಾವಿದು. ಸಿದ್ಧಸೂತ್ರದಲ್ಲೇ ಕಟ್ಟಿಕೊಡಲಾಗಿರುವ ಈ ಸಿನಿಮಾದಲ್ಲಿ ಪೊಲೀಸ್‌ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ ಪ್ರಮೋದ್‌ ಶೆಟ್ಟಿ. ‘ಲಾಫಿಂಗ್‌ ಬುದ್ಧ’ ಸಿನಿಮಾದಲ್ಲಿ ತಿಂಡಿಪೋತ ಪೊಲೀಸ್‌ ಆಗಿದ್ದ ಪ್ರಮೋದ್‌ ಇಲ್ಲಿ ಸೋಂಬೇರಿ ಪೊಲೀಸ್‌ ಆಗಿದ್ದಾರೆ. 

ಇದು ಶತಸೋಂಬೇರಿಯಾಗಿರುವ ಸಬ್‌ಇನ್‌ಸ್ಪೆಕ್ಟರ್‌ ಹೇಮಂತ್‌ ಕುಮಾರ್‌(ಪ್ರಮೋದ್‌ ಶೆಟ್ಟಿ) ಕಥೆ. ಯಾವುದೇ ಅಪರಾಧ ನಡೆಯದ ತನ್ನೂರಿನಲ್ಲೇ ಸಬ್‌ಇನ್‌ಸ್ಪೆಕ್ಟರ್‌ ಆಗಿ ಕೆಲಸಕ್ಕೆ ಸೇರುತ್ತಾನೆ ಹೇಮಂತ್‌. ಆ ಠಾಣೆಯಲ್ಲಿ ಹೇಮಂತ್‌ನ ಅಪ್ಪನೇ ಹೆಡ್‌ಕಾನ್‌ಸ್ಟೆಬಲ್‌. ಕರ್ತವ್ಯಕ್ಕಿಂತ ಹೆಂಡತಿಯ ಸೆರಗಿನಲ್ಲೇ ಹೆಚ್ಚಿನ ಸಮಯ ಜೋತಾಡುವ ಹೇಮಂತ್‌ ವೃತ್ತಿ ಬದುಕನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಆ ಊರಿನಲ್ಲಿ ಕೊಲೆಯೊಂದು ನಡೆಯುತ್ತದೆ. ಈ ಪ್ರಕರಣವನ್ನು ಆಲಸಿಯಾದ ಹೇಮಂತ್‌ ಹೇಗೆ ಭೇದಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. 

ಪೇಲವವಾಗಿರುವ ಕಥೆ ಹಾಗೂ ಚಿತ್ರಕಥೆ ಹೊಂದಿರುವ ಈ ಸಿನಿಮಾದುದ್ದಕ್ಕೂ ಲಾಜಿಕ್‌ ಇಲ್ಲದ ದೃಶ್ಯಗಳ ಸರಮಾಲೆಯೇ ಇದೆ. ಚಿತ್ರಕಥೆ ಬರೆಯುವ ಮುನ್ನ ಪೊಲೀಸ್‌ ವ್ಯವಸ್ಥೆ ಹಾಗೂ ಅದರ ಕಾರ್ಯನಿರ್ವಹಿಸುವಿಕೆಯ ಬಗ್ಗೆ ಅರಿತು ಚಿತ್ರವನ್ನು ಕಟ್ಟಿಕೊಡಬಹುದಿತ್ತು. ಹಾಸ್ಯಪ್ರಧಾನ ಸಿನಿಮಾದಲ್ಲಿ ಸಂಭಾಷಣೆಗಳೇ ಬಹುಮುಖ್ಯ. ಇಲ್ಲಿ ಸಂಭಾಷಣೆಗಳು ಹಾಗೂ ದೃಶ್ಯಗಳ ಕಟ್ಟುವಿಕೆ ಕೃತಕವಾಗಿದೆ. ಹೇಮಂತ್‌ ವೈಯಕ್ತಿಕ ಬದುಕಿನಲ್ಲಿ ಹೆಚ್ಚು ಆಸಕ್ತಿಯುಳ್ಳವ ಎನ್ನುವುದನ್ನು ತೋರಿಸುವುದಕ್ಕೇ ಹೆಚ್ಚಿನ ತೆರೆ ಅವಧಿಯನ್ನು ನಿರ್ದೇಶಕರು ಮೀಸಲಿಟ್ಟಿದ್ದಾರೆ. ಇದು ತಾಳ್ಮೆ ಪರೀಕ್ಷಿಸುತ್ತದೆ. ಅನಗತ್ಯವಾದ ಹಾಡುಗಳು ಸಿನಿಮಾ ಅವಧಿ ಹೆಚ್ಚಿಸಿದೆ. 

ADVERTISEMENT

‘ಲಾಫಿಂಗ್‌ ಬುದ್ಧ’ದಲ್ಲಿ ‘ಗೋವರ್ಧನ’ನಂಥ ಪಾತ್ರವನ್ನು ಪ್ರಮೋದ್‌ ನಿಭಾಯಿಸಿದ್ದಾರೆ. ಆದರೆ ಕಥೆ, ಚಿತ್ರಕಥೆಯ ಕೊರತೆಯಿಂದ ಈ ಸಿನಿಮಾದಲ್ಲಿ ಅವರ ಪಾತ್ರ ಬಹಳ ಕೃತಕವಾಗಿ ಕಾಣಿಸುತ್ತದೆ. ಶಂಕರ್‌ ಅಶ್ವಥ್‌, ಆದ್ಯಪ್ರಿಯಾ, ಕಾವ್ಯಪ್ರಕಾಶ್‌ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿಕ್ಕಮಗಳೂರು ಪ್ರಕೃತಿಯನ್ನು ಅಣಜಿ ನಾಗರಾಜ್‌ ಸುಂದರವಾಗಿ ಸೆರೆಹಿಡಿದಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.