
ವಲವಾರ ಚಿತ್ರದ ಪೋಸ್ಟರ್
ಹಳ್ಳಿಯ ಹಿನ್ನೆಲೆಯಲ್ಲಿ ಚಿತ್ರಿತವಾಗುವ ಸಿನಿಮಾಗಳ ಕಥೆ ಹಾಗೂ ಅದನ್ನು ಹೇಳುವ ರೀತಿ ಚೆನ್ನಾಗಿದ್ದರೆ ಹುಟ್ಟಿ ಬೆಳೆದ ಹಳ್ಳಿಯಲ್ಲೇ ನಡೆದ ಘಟನೆಯಂತೆ ಭಾಸವಾಗುತ್ತದೆ. ‘ವಲವಾರ’ವೂ ಇದೇ ರೀತಿ ಇದೆ. ಹೀಗಾಗಿಯೇ ಈ ಕಥೆ ಎಲ್ಲಿ ನಡೆಯುತ್ತಿದೆ ಎನ್ನುವುದನ್ನು ನಿರ್ದೇಶಕರು ಹೇಳುವುದಿಲ್ಲ. ಇದರಿಂದಾಗಿ ತಮ್ಮದೇ ಹಳ್ಳಿಯ ಲೋಕಕ್ಕೆ ವೀಕ್ಷಕರು ಇಳಿಯುತ್ತಾರೆ.
ಮಲೆನಾಡಿನ ಒಂದು ಹಳ್ಳಿ. ಅಲ್ಲೊಂದು ಬಡ ಕುಟುಂಬ. ‘ಕುಂಡೇಸಿ’(ವೇದಿಕ್) ಮತ್ತು ‘ಕೋಸುಡಿ’(ಶಯನ್) ಎಂಬ ಅಡ್ಡಹೆಸರು ಇರುವ ಅಣ್ಣತಮ್ಮಂದಿರು. ಇವರ ಅಪ್ಪ (ಮಾಲತೇಶ್) ಕೃಷಿಕ. ಅಮ್ಮ(ಹರ್ಷಿತಾ ಗೌಡ) ಮನೆಯಲ್ಲೇ ಇರುವಾಕೆ. ಅಪ್ಪನಿಗೆ ಚಿಕ್ಕ ಮಗನಾದ ‘ಕೋಸುಡಿ’ ಮೇಲೆ ಪ್ರೀತಿ ಹೆಚ್ಚು ಮತ್ತು ‘ಕುಂಡೇಸಿ’ಯನ್ನು ದ್ವೇಷಿಸುವಂತೆಯೇ ಹೊಡೆಯುವಾತ. ಅಪ್ಪನ ಈ ಸಿಟ್ಟಿಗೆ ತುಪ್ಪ ಸುರಿಯುವ ತಮ್ಮ. ಅತ್ತ ಅಮ್ಮನಿಗೆ ‘ವಲವಾರ’ವಿಲ್ಲ. ಇಬ್ಬರಿಗೂ ಪ್ರೀತಿ ಹಂಚುವಾಕೆ. ಗಂಡನ ಭಯದಲ್ಲೇ ಸಂಸಾರ ಸಾಗಿಸುವಾಕೆ. ಇಂತಹ ‘ಕುಂಡೇಸಿ’ ಹಾಗೂ ‘ಕೋಸುಡಿ’ ಮನೆಯ ಗಬ್ಬ ಹಸುವನ್ನು(ಗೌರ) ಮೇಯಿಸಿಕೊಂಡು ಹೊರಟಾಗ ಕಥೆ ತೆರೆದುಕೊಳ್ಳುತ್ತದೆ.
ಕಳೆದ ವರ್ಷ ತೆರೆಕಂಡಿದ್ದ ‘ಪಪ್ಪಿ’ ಸಿನಿಮಾದಲ್ಲೂ ಇದೇ ರೀತಿ ಉತ್ತರ ಕರ್ನಾಟಕದ ಬಾಲಕರ ಕಥೆ ಇತ್ತು. ಕಥೆ ಮಕ್ಕಳದ್ದಾದರೂ ವಿಷಯ ಜಾಗತಿಕವಾಗಿತ್ತು. ‘ವಲವಾರ’ದಲ್ಲೂ ಈ ರೀತಿಯ ಕಥೆ ಇದೆ. ಇಲ್ಲೊಂದು ಸ್ವಚ್ಛವಾದ, ಮುದವಾದ ಕಥೆಯಿದೆ. ಹದವಾಗಿರುವ ಮುಗ್ಧತೆ ಇದೆ. ಅದನ್ನು ‘ಕುಂಡೇಸಿ’ ಹಾಗೂ ಆತನ ಅಮ್ಮನ ಮೂಲಕ ತೆರೆಗೆ ತಂದಿದ್ದಾರೆ ನಿರ್ದೇಶಕರು. ಬಾಲ್ಯದ ದಿನಗಳನ್ನು ಮೆಲುಕು ಹಾಕುವಂಥ ಹಲವು ವಿಷಯಗಳು ಇಲ್ಲಿವೆ. ಈ ರೀತಿ ಕಥೆಗೊಂದು ಸುಂದರ ಪರಿಸರವನ್ನು ನೀಡಿ ‘ಕೋಪದ ಕೈಗೆ ಬುದ್ಧಿ ಕೊಡಬಾರದು, ತಾಳ್ಮೆಯಿಂದ ಬದುಕುವುದನ್ನು ಕಲಿಯಬೇಕು’ ಎಂಬುದನ್ನು ಆತುರವಿಲ್ಲದೆ ತಿಳಿಯಾಗಿ ಹೇಳಿದ್ದಾರೆ ನಿರ್ದೇಶಕ. ಬಾಲರಾಜ್ ಗೌಡ ಛಾಯಾಚಿತ್ರಗ್ರಹಣ ಇದಕ್ಕೆ ಸಾಥ್ ಕೊಟ್ಟಿದೆ.
ಅಪ್ಪನ ಕೋಪವನ್ನು ನೆನೆಸಿಕೊಂಡೇ ನಡುಗುವ, ತನ್ನೊಳಗಿನ ದುಗುಡವನ್ನು ಹೊರಹಾಕಲು ಕಷ್ಟಪಡುವ ‘ಕುಂಡೇಸಿ’ಯಾಗಿ ವೇದಿಕ್ ಜೀವಿಸಿದ್ದಾರೆ. ಕೆಲವೆಡೆ ವಯಸ್ಸಿಗೆ ಮೀರಿದಂಥ ಸಂಭಾಷಣೆಯನ್ನು ‘ಕುಂಡೇಸಿ’ ಪಾತ್ರಕ್ಕೆ ಬರೆಯಲಾಗಿದೆ. ಇದನ್ನು ಗಮನಿಸಬಹುದಿತ್ತು. ದ್ವಿತೀಯಾರ್ಧದಲ್ಲಿ ‘ಕುಂಡೇಸಿ’ಯೊಂದಿಗೇ ಹೆಜ್ಜೆ ಹಾಕುವ ‘ಯದು’ವಾಗಿ ಅಭಯ್ ನಟನೆ ಚೆನ್ನಾಗಿದೆ. ಮಾಲತೇಶ್, ಹರ್ಷಿತಾ ಅವರದ್ದು ಸಹಜವೆನ್ನುವಂಥ ನಟನೆ. ಕದ್ರಿ ಮಣಿಕಾಂತ್ ಸಂಗೀತ ಕಥೆಯ ಏರಿಳಿತವನ್ನು ಮುಟ್ಟಿಸಿದೆ.
ನೋಡಬಹುದಾದ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.