ಕಂಬಳ ಸಿನಿಮಾ
ಚಿತ್ರದ ಶೀರ್ಷಿಕೆಯೇ ಹೇಳುವಂತೆ ಪೂರ್ತಿಯಾಗಿ ಕಂಬಳದ ಸುತ್ತ ಸುತ್ತುವ ಕಥೆ ‘ವೀರ ಕಂಬಳ’. ತುಳುನಾಡಿಗೂ ದುಬೈಗೂ ಎಲ್ಲಿಲ್ಲದ ನಂಟು. ಬಹುತೇಕ ಕೊಲ್ಲಿ ರಾಷ್ಟ್ರಗಳಲ್ಲಿ ತುಳುನಾಡು, ಕೇರಳದವರೇ ಹೆಚ್ಚಾಗಿ ಕಾಣಸಿಗುತ್ತಾರೆ. ತುಳುನಾಡಿನಲ್ಲಿ ನಡೆಯುವ ಕಂಬಳವನ್ನು ನಿಯಂತ್ರಿಸುವುದು ದುಬೈನಲ್ಲಿ ಕುಳಿತ ಮಾಯಾಜಾಲವೆಂಬ ಕಾಲ್ಪನಿಕ ಕಥೆಯೊಂದಿಗೆ ದುಬೈನಿಂದಲೇ ಚಿತ್ರ ಪ್ರಾರಂಭವಾಗುತ್ತದೆ. ಕಂಬಳವನ್ನು ಬೆಟ್ಟಿಂಗ್ ಜಾಲದವರ ನಿಯಂತ್ರಣದಿಂದ ಹೊರಗೆ ತರಬೇಕೆಂದು ಕಥಾನಾಯಕ ಸತ್ಯ ದುಬೈನಲ್ಲಿ ಹೋರಾಡುತ್ತಾನೆ.
ಸತ್ಯನ ಮೂಲ ಕುಟುಂಬವಿರುವುದು ತುಳುನಾಡಿನಲ್ಲಿ. ಈತನ ಮಂಜೊಟ್ಟಿ ಗುತ್ತು ಮನೆತನ ಕಥೆಯೊಂದಿಗೆ ಕಂಬಳದ ಲೋಕ ತೆರೆದುಕೊಳ್ಳುತ್ತದೆ. ದುಬೈನಲ್ಲಿ ನಡೆಯುವ ಕಾಳಗಕ್ಕೂ ಇಲ್ಲಿನ ಶಿವರಾಮಣ್ಣನ ಕುಟುಂಬದ ಕಥೆಗೂ ಒಂದು ಕೊಂಡಿಯಿದೆ. ಹೀಗಾಗಿ ಅಲ್ಲಿನ ಕಾಳಗದ ಬಿಸಿ ಇಲ್ಲಿಗೂ ತಟ್ಟುತ್ತದೆ. 68 ವರ್ಷಗಳ ಹಿಂದೆ ಎರಡು ಕುಟುಂಬಗಳ ನಡುವಿನ ಕಲಹದಿಂದ ನಿಂತಿದ್ದ ಮಂಜೊಟ್ಟಿ ಗುತ್ತಿನ ಕಂಬಳವೇ ನಡೆಯುತ್ತಿರುವ ಅನಾಹುತಗಳಿಗೆ ಕಾರಣವೆಂಬುದು ದೈವದಲ್ಲಿ ಪ್ರಶ್ನೆಯಿಟ್ಟಾಗ ಗೊತ್ತಾಗುತ್ತದೆ. ಮಂಜೊಟ್ಟಿ ಗುತ್ತಿನ ಶಿವರಾಮಣ್ಣ ತಮ್ಮ ಪೂರ್ವಿಕರ ಕಂಬಳವನ್ನು ಮತ್ತೆ ಪ್ರಾರಂಭಿಸಲು ತಯಾರಾಗುತ್ತಾನೆ. ಆಗ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಒಟ್ಟಾರೆ ಕಥೆ.
ಕಂಬಳದ ದೃಶ್ಯ ವೈಭವ ಕಣ್ತುಂಬಿಕೊಳ್ಳುವುದು ಬಹಳ ಸುಲಭ. ಆದರೆ ಕಂಬಳ ಸುಲಭಕ್ಕೆ ನಡೆಯುವುದಿಲ್ಲ. ಅದರ ಹಿಂದಿನ ಪರಿಶ್ರಮ ಸಾಕಷ್ಟಿದೆ. ಅದಕ್ಕೆ ಕೋಣಗಳನ್ನು ಸಿದ್ಧಗೊಳಿಸುವ ವಿಧಾನ ಬಹಳ ಸೊಗಸಾಗಿದೆ. ಕಂಬಳದ ಪೂರ್ವತಯಾರಿ, ಅದರ ಹಿಂದಿನ ನಂಬಿಕೆ, ಆಚರಣೆಗಳನ್ನು ನಿರ್ದೇಶಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆಜೊತೆಗೆ ತುಳುನಾಡಿನ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುತ್ತ ಹೋಗಿದ್ದಾರೆ. ಈ ಪಯಣದಲ್ಲಿ ಅಲ್ಲಲ್ಲಿ ಸಾಕ್ಷ್ಯಚಿತ್ರದ ಅನುಭವ ನೀಡುವ ಕಥೆಯನ್ನು ಇನ್ನಷ್ಟು ಸಿನಿಮೀಯವಾಗಿಸುವ ಅವಕಾಶ ನಿರ್ದೇಶಕರಿಗಿತ್ತು.
ಕಂಬಳದ ಹಿಂದಿರುವ ಸ್ಥಳೀಯ ರಾಜಕೀಯ, ಈ ಕ್ರೀಡೆಯನ್ನು ನಿಲ್ಲಿಸಲು ಪ್ರಾಣಿ ದಯಾ ಸಂಘದವರ ಕಾನೂನು ಹೋರಾಟ, ಜಾತಿ ರಾಜಕೀಯ, ಬೆಟ್ಟಿಂಗ್ ಜಗತ್ತು, ಸ್ಥಳೀಯ ಹಾಸ್ಯ ಮುಂತಾದ ಅಂಶಗಳನ್ನು ಕಥೆಯಲ್ಲಿ ತಂದಿದ್ದಾರೆ. ಕಂಬಳ ನಿಲ್ಲಿಸಬೇಕೆಂದು ಪ್ರಾಣಿ ದಯಾ ಸಂಘದವರ ನ್ಯಾಯಾಲಯದ ಮೆಟ್ಟಿಲು ಏರಿದಾಗ ನ್ಯಾಯವಾದಿಗಳಾಗಿ ಪ್ರಕಾಶ್ ರಾಜ್, ರವಿಶಂಕರ್ ನಡೆಸುವ ವಾದ–ವಿವಾದ ಒಂದಷ್ಟು ವಿಚಾರಗಳನ್ನು ಹೇಳುತ್ತ ಪ್ರೇಕ್ಷಕರನ್ನು ರಂಜಿಸುತ್ತದೆ. ಕೋಣ ಓಡಿಸುವ ಸಮುದಾಯದ ಯುವಕರಿಬ್ಬರ ಪ್ರೇಮಕಥೆಯ ಸನ್ನಿವೇಶಗಳು, ಅಲ್ಲಿ ಬರುವ ಹಾಡುಗಳು ಮುಖ್ಯ ಕಥೆಗೆ ಹೆಚ್ಚು ಕೊಡುಗೆ ನೀಡದೆ ಅನವಶ್ಯ ಎಂಬ ಭಾವನೆ ಮೂಡಿಸುತ್ತವೆ.
ಜನಪ್ರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ. ಆದರೆ ಬಹುತೇಕರು ಅತಿಥಿ ಪಾತ್ರದಲ್ಲಿ ಬರುತ್ತಾರೆ. ಹೀಗಾಗಿ ಯಾವ ಪಾತ್ರವೂ ನೆನಪಿನಲ್ಲಿ ಉಳಿಯುದಿಲ್ಲ. ಹಿನ್ನೆಲೆ ಸಂಗೀತ, ಛಾಯಾಚಿತ್ರಗ್ರಹಣದಲ್ಲಿ ಹೊಸತನ ಕಾಣಿಸುವುದಿಲ್ಲ. ಕಂಬಳದ ಜಗತ್ತಿನ ದೃಶ್ಯ ವೈಭವವನ್ನು ಇನ್ನಷ್ಟು ಸೊಗಸಾಗಿ ತೋರಿಸುವ ಅವಕಾಶ ಛಾಯಾಚಿತ್ರಗ್ರಾಹಕರಿಗಿತ್ತು. ಒಟ್ಟಾರೆ ಕಥೆಗೆ ಇನ್ನಷ್ಟು ಸಿನಿಮೀಯ ಸ್ಪರ್ಶ ನೀಡಿ, ಚಿತ್ರಕಥೆಯನ್ನು ಬಿಗಿಗೊಳಿಸಿದ್ದರೆ, ತುಳುನಾಡಿನವರಲ್ಲದವರಿಗೂ ಸಿನಿಮಾ ಬಹಳ ರುಚಿಸುವ ಸಾಧ್ಯತೆಯಿತ್ತು.
ನೋಡಬಹುದಾದ ಸಿನಿಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.