ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಆಯೋಜಿಸಲಾಗಿರುವ ಭಾರತ ರಂಗ ಮಹೋತ್ಸವದಲ್ಲಿ ಫೆ.6ರಂದು ಪ್ರದರ್ಶನಗೊಳ್ಳಲಿರುವ ಅಂಬೇಡ್ಕರ್ ಕೊಲಾಜ್ ನಾಟಕ.
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಭಾರತ ರಂಗ ಮಹೋತ್ಸವದ ಭಾಗವಾಗಿ ಅಂತರಾಷ್ಟ್ರೀಯ ನಾಟಕೋತ್ಸವ ಹಾಗೂ ರಂಗ ಪರಿಷೆಯನ್ನು ಫೆ.1ರಿಂದ ಆರು ದಿನ ನಗರದ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಐದು ವಿವಿಧ ವೇದಿಕೆಗಳಲ್ಲಿ 70 ತಂಡಗಳಿಂದ ನಾಟಕ ಪ್ರದರ್ಶನ ಇರಲಿದೆ. ಬ್ರೆಜಿಲ್, ಪೋಲೆಂಡ್, ದೆಹಲಿ ರಾಷ್ಟ್ರೀಯ ನಾಟಕ ಶಾಲೆ ರೆಪರ್ಟರಿ ತಂಡ, ಕೋಲ್ಕತ್ತಾದ ಭಗ್ವತಿ ನೃತ್ಯ ಮಂದಿರ, ಚೆನ್ನೈನ ಸಾಧಿರ್ ಮೇಳಂ, ಮೈಸೂರು ರಂಗಾಯಣದ ತಂಡಗಳು ಉತ್ಸವದಲ್ಲಿ ನಾಟಕ ಪ್ರದರ್ಶಿಸುತ್ತಿವೆ’ ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹಾಗೂ ರಂಗ ಉತ್ಸವದ ನಿರ್ದೇಶಕ ಬಿ.ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.1ರ ಮಧ್ಯಾಹ್ನ 3.30ಕ್ಕೆ ಕರ್ನಾಟಕ ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ರಂಗಪರಿಷೆ ಉದ್ಘಾಟಿಸುವರು. ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉತ್ಸವ ಗೌರವ ಸ್ವೀಕರಿಸುವರು. ಸಂಜೆ 5.30ಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಉತ್ಸವಕ್ಕೆ ಚಾಲನೆ ನೀಡುವರು. ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಉತ್ಸವ ಗೌರವ ಸ್ವೀಕರಿಸುವರು. ಗೊ.ರು.ಚನ್ನಬಸಪ್ಪ ಅವರು ರಂಗಪರಿಷೆ ವಿಶೇಷ ಸಂಚಿಕೆ ಜನಾರ್ಪಣೆಗೊಳಿಸಿವರು. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವೆ ಕೆ.ಟಿ.ಶಾಂತಲಾ ಭಾಗಿಯಾಗುವರು ಎಂದರು.
ಪ್ರತಿ ನಿತ್ಯ ನಾಟಕ, ಸಂವಾದ: ಕಲಾಗ್ರಾಮ ಬಯಲು ರಂಗ ಮಂದಿರದ ಗುಬ್ಬಿ ವೀರಣ್ಣ ವೇದಿಕೆಯಲ್ಲಿ ನಾಟಕೋತ್ಸವದಲ್ಲಿ ಪ್ರಮುಖ ತಂಡಗಳ ನಾಟಕ ಪ್ರದರ್ಶನ ಇರಲಿವೆ. ಸಿದ್ದಲಿಂಗಯ್ಯ ವೇದಿಕೆಯಲ್ಲಿ ಯುವ ರಂಗ ನಾಟಕೋತ್ಸವ ಇರಲಿದ್ದು, ವಿವಿಧ ಕಾಲೇಜುಗಳ ತಂಡಗಳ ನಾಟಕ ಪ್ರದರ್ಶನಗೊಳ್ಳಲಿವೆ. ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗದಲ್ಲಿ ಬೆಳಿಗ್ಗೆ 10.30ರಿಂದ ರಂಗ ಸಂವಾದ ಇರಲಿದೆ ಎಂದು ಹೇಳಿದರು.
ಮಳವಳ್ಳಿ ಸುಂದರಮ್ಮ ವೇದಿಕೆಯಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿಯನ್ನು ಪ್ರತಿ ದಿನ ಸಂಜೆ 4ರಿಂದ ಆಯೋಜಿಸಲಾಗಿದೆ. ಯುವಕವಿಗಳು ಸೇರಿ ಆಡಿನ ಹೆಸರಾಂತ ಕವಿಗಳು ಭಾಗವಹಿಸುವರು ಎಂದು ತಿಳಿಸಿದರು.
ರಂಗಗೀತೆ, ಬೀದಿ ನಾಟಕ: ಶ್ರೀರಂಗ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 4ರಿಂದ 6.30ರವರೆಗೆ ರಂಗತಂಡಗಳಿಂದ ರಂಗ ಗೀತೆಗಳ ಗಾಯನ, ಬೀದಿ ನಾಟಕ, ಕಿರುನಾಟಕ, ಪ್ರದರ್ಶನಗೊಳ್ಳಲಿವೆ. 40 ವರ್ಷ ಕಾಲ ರಂಗ ಚಟುವಟಿಕೆಯಲ್ಲಿ ನಿರತವಾದ 12 ರಂಗತಂಡಗಳಿಗೆ ರಂಗಗೌರವವನ್ನು ನೀಡಲಾಗುತ್ತದೆ ಎಂದರು.
ಉತ್ಸವದ ಭಾಗವಾಗಿ ನಡೆಯುವ ರಂಗ ಪರಿಷೆಯಲ್ಲಿ ನಾಟಕದ ಪರಿಕರಗಳು, ರಂಗ ಸಜ್ಜಿಕೆ, ವೇಷ ಭೂಷಣಗಳು, ರಂಗದಿಗ್ಗಜರ ಛಾಯಾಚಿತ್ರ, ನಾಟಕಗಳ ದೃಶ್ಯಾವಳಿಯನ್ನು ಪ್ರದರ್ಶಿಸಲಿವೆ. ಪುಸ್ತಕ ಮಳಿಗೆ, ಆಹಾರ ಮಳಿಗೆಗಳೂ ಇರಲಿವೆ ಎಂದು ರಂಗ ಪರಿಷೆ ಸಂಯೋಜಕ ಶಶಿಧರ ಬಾರಿಘಾಟ್ ತಿಳಿಸಿದರು.
ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ನಿರ್ದೇಶಕಿ ವೀಣಾ ಶರ್ಮ ಭೂಸನೂರಮಠ, ಅಕಾಡೆಮಿ ಸದಸ್ಯರಾದ ರವೀಂದ್ರನಾಥ ಸಿರಿವಾರ, ಟಿ.ಎಚ್.ಲವಕುಮಾರ್, ರಿಜಿಸ್ಟ್ರಾರ್ ಬಿ.ನೀಲಮ್ಮ ಹಾಜರಿದ್ದರು.
ಪ್ರವೇಶ ಉಚಿತ, ಪಾಸ್ ಉಂಟು
‘ಎಲ್ಲಾ ವೇದಿಕೆಗಳಲ್ಲಿ ನಾಟಕ ವೀಕ್ಷಣೆಗೆ ಪ್ರವೇಶ ಉಚಿತ. ಆದರೆ ಆಯಾ ದಿನದ ನಾಟಕಗಳಿಗೆ ಮಧ್ಯಾಹ್ನ 3.30ಕ್ಕೆ ಕಲಾ ಗ್ರಾಮದಲ್ಲಿಯೇ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತದೆ’ ಎಂದು ಬಿ.ಸುರೇಶ್ ತಿಳಿಸಿದರು.
ಉತ್ಸವಕ್ಕೆ ₹1 ಕೋಟಿ ಬೇಕು. ಅಕಾಡೆಮಿಯಲ್ಲಿ ₹20 ಲಕ್ಷ ಲಭ್ಯವಿದೆ. ಉತ್ಸವಕ್ಕೆ ನೆರವು ನೀಡುವಂತೆ ಕ್ರಿಯಾಯೋಜನೆ ಸಲ್ಲಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಮತಿಗೆ ಕಾಯುತ್ತಿದ್ದೇವೆ.
ಕೆ.ವಿ.ನಾಗರಾಜಮೂರ್ತಿ, ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.