ADVERTISEMENT

ಹೊಸತನದ ‘ನಾಟಕ ಬೆಂಗ್ಳೂರು’

nataka bengaluru

ಮಂಜುಶ್ರೀ ಎಂ.ಕಡಕೋಳ
Published 5 ಡಿಸೆಂಬರ್ 2018, 20:00 IST
Last Updated 5 ಡಿಸೆಂಬರ್ 2018, 20:00 IST
‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕದ ದೃಶ್ಯ
‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕದ ದೃಶ್ಯ   

ದಶಕದ ಹಿಂದಿನ ಮಾತು. ಹರಟೆಯಲ್ಲಿ ನಿರತವಾಗಿದ್ದ ಆ ಗೆಳೆಯರ ಬಳಗ ರಂಗಭೂಮಿಯ ವೈಭವದ ದಿನಗಳನ್ನು ಮೆಲುಕು ಹಾಕುತ್ತಾ, ರವೀಂದ್ರ ಕಲಾಕ್ಷೇತ್ರಕ್ಕೆ ರಂಗಪ್ರಿಯರನ್ನು ಸೆಳೆಯುವ ಚಿಂತನೆ ನಡೆಸಿತ್ತು. ಬೆಂಗಳೂರಿನ ರಂಗ ತಂಡಗಳನ್ನು ಒಂದೇ ವೇದಿಕೆಯಡಿ ತಂದು ಹೊಸ ನಾಟಕಗಳನ್ನು ಪ್ರದರ್ಶಿಸುವ ಆಶಯ ವ್ಯಕ್ತಪಡಿಸಿತ್ತು. ಆ ಕನಸು ಹರಟೆ ಕಟ್ಟೆಯಲ್ಲೇ ಮುಗಿಯಲಿಲ್ಲ. ಮುಂದೆ ಅದು ‘ನಾಟಕ ಬೆಂಗ್ಳೂರು’ ರಂಗೋತ್ಸವವಾಗಿ ಸಾಕಾರಗೊಂಡಿತು.

11ನೇ ವರ್ಷದ ಸಂಭ್ರಮದಲ್ಲಿರುವ ‘ನಾಟಕ ಬೆಂಗ್ಳೂರು’ ಆರಂಭಗೊಂಡಿದ್ದು ಹೀಗೆ. 70–80ರ ದಶಕದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಗಳದ್ದೇ ಪಾರುಪತ್ಯ. ಆದರೆ, ನಂತರದ ದಿನಗಳಲ್ಲಿ ರಂಗ ಚಟುವಟಿಕೆಗಳು ಕ್ಷೀಣಿಸತೊಡಗಿದ್ದು ರಂಗಪ್ರಿಯರನ್ನು ಆತಂಕಗೊಳಿಸಿತ್ತು. ಅದಕ್ಕೆ ಪರಿಹಾರವಾಗಿ ರೂಪುಗೊಂಡದ್ದೇ ‘ನಾಟಕ ಬೆಂಗ್ಳೂರು’.

ಬೆಂಗಳೂರಿನಲ್ಲಿರುವ ವೃತ್ತಿ–ಹವ್ಯಾಸ ನಾಟಕ ತಂಡಗಳು ಹಳೇ ನಾಟಕಗಳ ಬದಲಿಗೆ ಹೊಸ ನಾಟಕಗಳು ಪ್ರದರ್ಶಿಸುವಂತಾಗಬೇಕು. ಆ ಮೂಲಕ ರಂಗದಲ್ಲಿ ಹೊಸ ಫಸಲು ಕಾಣಬೇಕೆಂಬ ಸದಾಶಯದ ಉದ್ದೇಶ ‘ನಾಟಕ ಬೆಂಗ್ಳೂರು’ ಸಂಘಟನೆಯ ಉದ್ದೇಶವಾಗಿತ್ತು. ವರ್ಷದಲ್ಲಿ ಕನಿಷ್ಠ 15 ತಂಡಗಳು ಹೊಸ ನಾಟಕಗಳನ್ನು ಪ್ರದರ್ಶಿಸಿದರೆ 150ರಿಂದ 200 ಪ್ರದರ್ಶನಗಳನ್ನು ಕಾಣಬಹುದು. ಆ ಮೂಲಕ ಹೊಸ ನಾಟಕಕಾರರು, ನಿರ್ದೇಶಕರು, ಕಲಾವಿದರು ರಂಗಭೂಮಿಗೆ ಬರುತ್ತಾರೆ ಎಂಬುದು ಈ ರಂಗೋತ್ಸವದ ಹಿಂದಿದ್ದ ಆಶಯವಾಗಿತ್ತು. ಅದಕ್ಕೆ ತಕ್ಕಂತೆ 2008ರಲ್ಲಿ ಮೊದಲ ಬಾರಿಗೆ ಆರಂಭವಾದ ‘ನಾಟಕ ಬೆಂಗ್ಳೂರು’ ಉತ್ಸವಕ್ಕೆ 17 ತಂಡಗಳು ಹೆಸರು ನೋಂದಾಯಿಸಿದ್ದವು. ಆರಂಭದಲ್ಲೇ ರಂಗತಂಡಗಳಲ್ಲಿ ಹೊಸ ನಾಟಕ ಪ್ರದರ್ಶಿಸುವ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿತು. ಅಲ್ಲಿಂದ ಹಿಂದೆ ತಿರುಗಿ ನೋಡದ ‘ನಾಟಕ ಬೆಂಗ್ಳೂರು’ ಈಗ 11ನೇ ವರ್ಷದ ಸಂಭ್ರಮದಲ್ಲಿದೆ.

ADVERTISEMENT

‘ಇದೊಂದು ಸಹಕಾರ ಚಳವಳಿಯ ಮಾದರಿಯಲ್ಲಿರುವ ರಂಗೋತ್ಸವ. ಇಲ್ಲಿ ರಂಗತಂಡಗಳೇ ದುಡ್ಡು ಹಾಕಿಕೊಂಡು ರಂಗೋತ್ಸವದಲ್ಲಿ ಭಾಗಿಯಾಗುತ್ತವೆ. 70ರ ದಶಕದಲ್ಲಿ ಅನೇಕ ರಂಗ ತಂಡಗಳು ಸಕ್ರಿಯವಾಗಿದ್ದವು. ಆಗ ನಾವೆಲ್ಲಾ ಯುವಕರು. ಈಗ ನಾವು ಹಿರಿಯರಾಗಿದ್ದೇವ. ಈ ರಂಗ ಪರಂಪರೆಯನ್ನು ಇಂದಿನವರಿಗೆ ದಾಟಿಸುವ ಜವಾಬ್ದಾರಿ ನಮ್ಮದು. ಹಾಗಾಗಿ, ಈ ರಂಗೋತ್ಸವದ ಮೂಲಕ ಹಿರಿಯ–ಕಿರಿಯರನ್ನು ಒಂದುಗೂಡಿಸಿ ಅನುಭವ, ಆಲೋಚನೆಗಳ ಕೊಡು–ಕೊಳ್ಳುವಿಕೆ ನಡೆಯುತ್ತದೆ. ಹಳಬರ ಅನುಭವ, ಹೊಸಬರ ಉತ್ಸಾಹ ಇಲ್ಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಂಗಭೂಮಿಗೆ ಬರುತ್ತಿರುವುದು ವಿಶೇಷ. ಇದಕ್ಕೆಲ್ಲಾ ಸರ್ಕಾರದ ಸಹಾಯವೂ ದೊರೆತರೆ ಒಳಿತು’ಎನ್ನುತ್ತಾರೆ ‘ನಾಟಕ ಬೆಂಗ್ಳೂರು’ ಸಂಚಾಲನ ಸಮಿತಿ ಸದಸ್ಯರಲ್ಲೊಬ್ಬರಾದ ಹಿರಿಯ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ.

‘ಆಯಾ ತಂಡಗಳ ಹೊಸ ನಾಟಕಗಳಿಗೆ ಇದು ಉತ್ತಮ ವೇದಿಕೆ. ಇಲ್ಲಿ ಹಿರಿಯರು–ಕಿರಿಯರು ಎನ್ನುವ ಭೇದವಿಲ್ಲ. ಆಯಾ ತಂಡಗಳೇ ರವೀಂದ್ರ ಕಲಾಕ್ಷೇತ್ರದ ಆಯಾ ದಿನದ ಬಾಡಿಗೆ ಕಟ್ಟುತ್ತವೆ. ಸಂಚಾಲನಾ ಸಮಿತಿ ಪ್ರಚಾರ, ಜಾಹೀರಾತು ಮತ್ತು ಉದ್ಘಾಟನಾ ಸಮಾರಂಭದ ಜವಾಬ್ದಾರಿ ನಿಭಾಯಿಸುತ್ತದೆ. ಈ ಬಾರಿ ಹಿರಿಯ ರಂಗಕರ್ಮಿಗಳನ್ನು ಸ್ಮರಿಸುವ ಕೆಲಸವೂ ನಡೆಯಲಿದೆ. ಹೊಸ ನಾಟಕಗಳು ಬರುವುದರಿಂದ ಹೊಸ ನಾಟಕಕಾರರು, ನಿರ್ದೇಶಕರು, ಕಲಾವಿದರು ಮುಂಚೂಣಿಗೆ ಬರುತ್ತಾರೆ’ ಹಿರಿಯ ರಂಗಕರ್ಮಿ ಸಿ.ವಿ.ನಾಗೇಶ್.

ಈ ಬಾರಿಯ ‘ನಾಟಕ ಬೆಂಗ್ಳೂರು’ ರಂಗೋತ್ಸವ ಡಿಸೆಂಬರ್ 10ರಿಂದ 26ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, 14 ತಂಡಗಳು 14 ನಾಟಕಗಳನ್ನು ಪ್ರದರ್ಶಿಸಲಿವೆ.

ರಂಗ ಸಮೃದ್ಧಿಯ ದ್ಯೋತಕ

‘ಈ ರೀತಿಯ ರಂಗೋತ್ಸವಗಳು ಅಗತ್ಯ. ಒಂದೊಂದೇ ತಂಡಗಳು ಪ್ರತ್ಯೇಕವಾಗಿ ನಾಟಕ ಪ್ರದರ್ಶಿಸುವುದಕ್ಕಿಂತ ಒಂದೇ ವೇದಿಕೆಯಲ್ಲಿ ಬೆಂಗಳೂರಿನ ಬೇರೆಬೇರೆ ತಂಡಗಳು ಕುಟುಂಬದ ಮಾದರಿಯಲ್ಲಿ ಮಿಳಿತಗೊಂಡು ನಾಟಕ ಪ್ರದರ್ಶಿಸುವುದು ಒಳ್ಳೆಯ ಬೆಳವಣಿಗೆ. ಹಳಬರ ಅನುಭವ, ಹೊಸಬರ ಆಲೋಚನೆ ಎಲ್ಲವೂ ಮಿಳಿತಗೊಂಡು ರಂಗಭೂಮಿ ಸಮೃದ್ಧಿಯಾಗುತ್ತದೆ. ಎಲ್ಲರೂ ಸೇರಿ ಮುಂದುವರಿಯುವುದು ಆರೋಗ್ಯಕರ ಬೆಳವಣಿಗೆ. ‘ದೃಶ್ಯ’ ತಂಡ ಪ್ರತಿವರ್ಷ ‘ನಾಟಕ ಬೆಂಗ್ಳೂರು’ ರಂಗೋತ್ಸವದಲ್ಲಿ ಹೊಸ ನಾಟಕ ಪ್ರದರ್ಶಿಸುತ್ತಾ ಬಂದಿದೆ.

–ದಾಕ್ಷಾಯಣಿ ಭಟ್, ನಿರ್ದೇಶಕಿ, ದೃಶ್ಯ ರಂಗತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.