ADVERTISEMENT

New Year Resolution| ಪ್ರತಿ ಗ್ರಾಮಕ್ಕೂ ನಾಟಕ ತಲುಪಬೇಕು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 19:30 IST
Last Updated 31 ಡಿಸೆಂಬರ್ 2022, 19:30 IST
ಅಕ್ಷತಾ ಪಾಂಡವಪುರ
ಅಕ್ಷತಾ ಪಾಂಡವಪುರ   

‘ಲೀಕ್ ಔಟ್’ ಏಕವ್ಯಕ್ತಿ ಪ್ರದರ್ಶನ ನೀಡಲೆಂದು ನಾನು ರಾಜ್ಯದಾದ್ಯಂತ ತಿರುಗಾಡುತ್ತಿದ್ದೇನೆ. ಹೀಗೆ ಹೋದಾಗಲೆಲ್ಲ, ಜನರು ನನ್ನನ್ನು ಕೇಳುತ್ತಿದ್ದದ್ದು ಒಂದೇ ಪ್ರಶ್ನೆ- ‘ನೀವು ಡ್ಯಾನ್ಸ್‌ ಮಾಡಲೇ ಇಲ್ಲ, ಹಾಡು ಹೇಳಲೇ ಇಲ್ಲ’. ಈ ಎಲ್ಲದರಿಂದ ನನಗೆ ಅರ್ಥ ಆಗಿದ್ದು, ಜನರು ಈವರೆಗೂ ಕಂಪನಿ ನಾಟಕ, ಪೌರಾಣಿಕ ನಾಟಕಗಳ ಗುಂಗಿನಿಂದ ಹೊರಬಂದಿಲ್ಲ. ರಂಗಭೂಮಿ ಹಲವು ಸ್ಥಿತ್ಯಂತರಗಳನ್ನು ಕಂಡಿವೆ. ಆದರೆ, ಇವು ಯಾವುವೂ ಗ್ರಾಮೀಣ ಭಾಗದ ಜನರಿಗೆ ತಿಳಿದಿಲ್ಲ. ಈ ಕಾರಣಕ್ಕಾಗಿಯೇ ಬರುವ ವರ್ಷದಲ್ಲಿ ‘ಮೊಬೈಲ್‌ ಥಿಯೇಟರ್‌’ ಅನ್ನುವ ಪ್ರಯೋಗ ಮಾಡುವ ಇಚ್ಛೆಯನ್ನು ಹೊಂದಿದ್ದೇನೆ. ಮುಂದಿನ ವರ್ಷ ಇದರ ಸಾಕಾರಕ್ಕಾಗಿ ದುಡಿಯುವ ಪಣ ತೊಟ್ಟಿದ್ದೇನೆ.

ಮೊಬೈಲ್‌ ಥಿಯೇಟರ್ ಅಥವಾ ನ್ಯಾನೊ ಥಿಯೇಟರ್‌ ಅಂದರೆ ಏನು? ಒಂದೆಡೆ, ಜನರಿಗೆ ರಂಗಭೂಮಿಯ ಸಾಧ್ಯತೆಗಳ ಪರಿಚಯವಿಲ್ಲ. ಇನ್ನೊಂದೆಡೆ ಜನರ ಬಳಿಯೇ ರಂಗಭೂಮಿ ಹೋಗಬೇಕು. ಈ ಕಾರಣಕ್ಕಾಗಿ ‘ಮೊಬೈಲ್‌ ಥಿಯೇಟರ್’ ಬಹಳ ಮುಖ್ಯ ಎನಿಸುತ್ತದೆ. ಅಸ್ಸಾಂನಲ್ಲಿ ಈ ಪ್ರಯೋಗವಿದೆ. ಟೆಂಟ್‌ನಲ್ಲಿ ನಡೆಯುವ ನಾಟಕವನ್ನು ದೊಡ್ಡ ಸಂಖ್ಯೆಯಲ್ಲಿ ಜನ ನೋಡುತ್ತಾರೆ. ನನಗೆ ಇರುವುದು ದೊಡ್ಡ ಸಂಖ್ಯೆಯ ಜನರು ಒಂದೆಡೆ ಸೇರಬೇಕು ಎನ್ನುವ ಬಯಕೆ ಅಲ್ಲ. ಬದಲಿಗೆ, ಪ್ರತಿ ಗ್ರಾಮಕ್ಕೂ ನಾಟಕ ತಲುಪಬೇಕು ಎನ್ನುವುದು. ಜೊತೆಗೆ, ದೊಡ್ಡ ದೊಡ್ಡ ನಾಟಕಗಳನ್ನೂ ಒಂದು ಗಾಡಿ ತೆಗೆದುಕೊಂಡು ಹೋಗಿ ಅದರಲ್ಲೇ ಪ್ರದರ್ಶನ ನೀಡಬೇಕು. ಇದು ನನ್ನ ಸಂಕಲ್ಪ.

ರಂಗಭೂಮಿ ಅಂದರೆ ಸೇವೆ ಅಲ್ಲ. ನಿಜ ಹೇಳಬೇಕೆಂದರೆ, ಕಲೆ ಅಂದರೇನೇ ಸೇವೆ ಅಲ್ಲ. ಆದ್ದರಿಂದ ರಂಗಭೂಮಿಯ ಮೂಲಕವೂ ಜನರು ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಬೆಂಗಳೂರು ನಗರವೇ ಕೇಂದ್ರವಾಗಬಾರದು. ನನ್ನ ಈ ‘ಮೊಬೈಲ್‌ ಥಿಯೇಟರ್‌’ನ ಮೂಲಕವೂ ಜನರು ಉದ್ಯೋಗ ಪಡೆಯುವಂತಾಗಬೇಕು.

ADVERTISEMENT

ನಿರೂಪಣೆ: ಸುಕೃತ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.