ADVERTISEMENT

ಜೂನಿಯರ್‌ ರಾಜಕುಮಾರ್‌ ಖ್ಯಾತಿಯ ಜಯಕುಮಾರ್‌ ಹೃದಯಾಘಾತದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 15:32 IST
Last Updated 6 ಅಕ್ಟೋಬರ್ 2020, 15:32 IST
ಕೊಡಗನೂರು ಜಯಕುಮಾರ್
ಕೊಡಗನೂರು ಜಯಕುಮಾರ್   

ದಾವಣಗೆರೆ: ‘ಜೂನಿಯರ್‌ ರಾಜ್‌ಕುಮಾರ್‌’ ಎಂದೇ ಪ್ರಸಿದ್ಧರಾಗಿದ್ದ ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಕಲಾವಿದ ಕೊಡಗನೂರು ಜಯಕುಮಾರ್‌ (70) ಅವರು ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದು, ಐದು ದಶಕಗಳ ತಮ್ಮ ‘ರಂಗ ಪಯಣ’ಕ್ಕೆ ಅವರು ತೆರೆ ಎಳೆದರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ತಿಂಗಳುಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಸಿಕೊಂಡಿದ್ದ ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.

ಅವರಿಗೆಇಬ್ಬರುಪತ್ನಿಯರು, ಐವರುಪುತ್ರರು, ಇಬ್ಬರುಪುತ್ರಿಯರು ಇದ್ದಾರೆ.

ADVERTISEMENT

ಬಣ್ಣದ ಬದುಕು: ರಂಗಭೂಮಿಯಲ್ಲಿಯೇ ಬದುಕು ಸವೆಸಿರುವಜಯಕುಮಾರ್‌ ಅವರು ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಛಾಪು ಮೂಡಿಸಿದ್ದರು. ಅವರ ಅಭಿನಯ ನೋಡಿ ಅಭಿಮಾನಿಗಳು ಅವರನ್ನು ‘ಜೂನಿಯರ್‌ ರಾಜ್‌ಕುಮಾರ್‌’ ಎಂದೇ ಕರೆಯುತ್ತಿದ್ದರು. ವರನಟ ಡಾ. ರಾಜ್‌ಕುಮಾರ್‌ ಅವರೂ ಇವರ ಅಭಿನಯವನ್ನು ಮೆಚ್ಚಿ ಮನೆಗೆ ಕರೆಸಿಕೊಂಡು ಸತ್ಕರಿಸಿದ್ದರು ಎಂದು ರಂಗಕರ್ಮಿಗಳು ಈಗಲೂ ಸ್ಮರಿಸುತ್ತಾರೆ.

ದಾವಣಗೆರೆ ತಾಲ್ಲೂಕಿನ ಕೊಡಗನೂರಿನಲ್ಲಿ ಜನಿಸಿದ್ದ ಜಯಕುಮಾರ್‌ ಅವರು ಬುದ್ಧಿ ತಿಳಿಯುವ ಮೊದಲೇ ತಂದೆ ಹನುಮಂತಪ್ಪ ಅವರನ್ನು ಕಳೆದುಕೊಂಡು, ಬಡತನದಲ್ಲಿಯೇ ತಾಯಿ ಗಂಗಮ್ಮ ತೋಳಸಮ್ಮರನವರ ಆಸರೆಯಲ್ಲೇ ಬೆಳೆದಿದ್ದರು. ಮಗ ಚೆನ್ನಾಗಿ ವಿದ್ಯೆ ಕಲಿತು ದೊಡ್ಡ ಮನುಷ್ಯನಾಗಲಿ ಎಂಬ ತಾಯಿಯ ಆಸೆಗೆ ವಿರುದ್ಧವಾಗಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದರು.

ಪ್ರೌಢಶಾಲೆಯಲ್ಲಿ ಓದುವಾಗಲೇ ‘ತಾಯಿ ಕರುಳು’ ಎಂಬ ನಾಟಕದಲ್ಲಿ ಪಾತ್ರ ಮಾಡಿದ ಅವರು, ‘ಸದಾರಮೆ’ ಮೂಲಕ ಹಳ್ಳಿ ನಾಟಕದಿಂದ ವೃತ್ತಿ ರಂಗಭೂಮಿಗೆ ಕಾಲಿಟ್ಟಿದ್ದರು.

‘ಪೊಲೀಸನ ಮಗಳು’ ನಾಟಕದ ಅವರ ಅಭಿನಯ ನೋಡಿದ ಡಾ. ರಾಜ್‌ಕುಮಾರ್‌ ಅವರು ಶಿವರಾಜ್‌ಕುಮಾರ್‌ ಅವರ‘ಜನುಮದ ಜೋಡಿ’ಯಲ್ಲಿ ಪಾತ್ರ ನೀಡಿದ್ದರು.‘ತಾಯಿಗೊಬ್ಬ ಕರ್ಣ’, ‘ಕಿಟ್ಟಿ’, ‘ಹೃದಯ ಹೃದಯ’, ‘ರಾಜ’, ‘ಜಾಕಿ’, ‘ಯುವ’ ಹೀಗೆ ಸುಮಾರು 140 ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಮಹಾನದಿ’, ‘ಸಂಕ್ರಾಂತಿ’, ‘ಪಾಪ ಪಾಂಡು’, ‘ಸಿಲ್ಲಿ ಲಲ್ಲಿ’ ಸೇರಿ ಸುಮಾರು 500 ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದರು.

2019ನೇ ಸಾಲಿನಲ್ಲಿ ‘ಕಿರುತೆರೆ’ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾಗ ಜಯಕುಮಾರ್‌ ಅವರು, ‘ಮದಕರಿ ನಾಯಕ, ಟಿಪ್ಪು ಸುಲ್ತಾನ್‌, ಲವಕುಶ ಸೇರಿ ಎಲ್ಲ ಪಾತ್ರಗಳು ಖುಷಿ ಕೊಟ್ಟಿವೆ. ಆದರೆ, ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ನಾಟಕದಲ್ಲಿ ಮಾಡಿದ ತಿಪ್ಪೇರುದ್ರಸ್ವಾಮಿ ಪಾತ್ರ ಮಾತ್ರ ಎಲ್ಲದಕ್ಕಿಂತ ದೊಡ್ಡದು’ ಎಂದು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡಿದ್ದರು.

ಐದು ದಶಕಗಳ ಕಾಲ ರಂಗಭೂಮಿಯಲ್ಲಿ ದುಡಿದಿದ್ದರೂ ಬಡತನ ಮಾತ್ರ ಇವರ ಬೆನ್ನು ಬಿಟ್ಟಿರಲಿಲ್ಲ. ಕೆಲ ತಿಂಗಳುಗಳ ಹಿಂದೆ ತಮಗೆ ಸರ್ಕಾರದಿಂದ ನಿವೇಶನ ಕೊಡಿಸುವಂತೆ ಜಯಕುಮಾರ್‌ ಅವರು ‘ಜನಸ್ಪಂದನ’ ಸಭೆಗೆ ಅರ್ಜಿ ಹಿಡಿದು ಬಂದಿದ್ದಾಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರೇ ಎದ್ದು ನಿಂತು ಈ ಹಿರಿಯ ಕಲಾವಿದರಿಗೆ ನಮಸ್ಕರಿಸಿ, ನಿವೇಶನ ಮಂಜೂರು ಮಾಡಿಸಲು ಯತ್ನಿಸುವುದಾಗಿ ಭರವಸೆ ನೀಡಿದ್ದರು. ಆದರೆ, ನಿವೇಶನ ಪಡೆಯಬೇಕು ಎಂಬ ಅವರ ಕನಸು ನನಸಾಗುವ ಮುನ್ನವೇ ಅವರು ಈ ಬದುಕಿನ ಪಯಣವನ್ನು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.