ADVERTISEMENT

BBK 11: ಮಂಜು–ಗೌತಮಿ ಸ್ನೇಹದಲ್ಲಿ ಬಿರುಕು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2024, 7:15 IST
Last Updated 11 ಡಿಸೆಂಬರ್ 2024, 7:15 IST
<div class="paragraphs"><p>ಉಗ್ರಂ ಮಂಜು ಮತ್ತು ಗೌತಮಿ ಜಾಧವ್</p></div>

ಉಗ್ರಂ ಮಂಜು ಮತ್ತು ಗೌತಮಿ ಜಾಧವ್

   

ಬೆಂಗಳೂರು: ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಉಗ್ರಂ ಮಂಜು ಅವರನ್ನು ಹೊರಗಿಡುವ ಮೂಲಕ ಗೌತಮಿ ಜಾಧವ್ ಅವರು ಮಂಜು ಅವರ ಸ್ನೇಹದಿಂದ ದೂರ ಸರಿಯಲು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಬಿಗ್‌ಬಾಸ್‌ ಅಭಿಮಾನಿಗಳಲ್ಲಿ ಕಾಡಿದೆ.

ಬಿಗ್‌ಬಾಸ್‌ ಪ್ರಾರಂಭದಿಂದಲೂ ಉತ್ತಮ ಸ್ನೇಹ ಕಾಪಾಡಿಕೊಂಡು ಬಂದಿರುವ ಗೌತಮಿ ಮತ್ತು ಮಂಜು ಅವರು ಬಿಗ್‌ಬಾಸ್ ಮನೆಯಲ್ಲಿ ‘ಗೆಳಯ–ಗೆಳತಿ’ ಎಂದೇ ಹೆಸರುವಾಸಿಯಾಗಿದ್ದರು. ಆದರೆ, ಗೌತಮಿ ಅವರು ಕ್ಯಾಪ್ಟನ್‌ ಆಗುತ್ತಿದ್ದಂತೆ ಇದೆಲ್ಲವೂ ಬದಲಾಗಿದೆ.

ADVERTISEMENT

ಇಂದು ಬಿಡುಗಡೆ ಮಾಡಿದ ಪ್ರೋಮೊದಲ್ಲಿ ಗೌತಮಿ ಅವರು ತಮ್ಮ ಹಳೆಯ ಗೆಳತಿ ಮೋಕ್ಷಿತಾ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ‘ಸ್ನೇಹವನ್ನು ಕಳಚಿಕೊಂಡು ಒಬ್ಬಂಟಿಯಾಗಿ ಆಡುವುದು ಅಷ್ಟು ಸುಲಭದ ಮಾತಲ್ಲ’ ಎಂದು ಮೋಕ್ಷಿತಾ ಅವರ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.

ಕಳೆದ ಹಲವು ವಾರಗಳಿಂದ ತಮ್ಮ ವಿರುದ್ಧ ಮುನಿಸಿಕೊಂಡಿದ್ದ ಮೋಕ್ಷಿತಾ ಅವರ ಬಗ್ಗೆಯೇ ಗೌತಮಿ ಅವರು ಆಡಿದ ಮಾತುಗಳು ಮನೆಯ ಸದಸ್ಯರೂ ಸೇರಿ ಬಿಗ್‌ಬಾಸ್‌ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಆ ಮೂಲಕ ಗೌತಮಿ ಅವರು ತಮ್ಮ ಆಟದ ಲಯವನ್ನು ಬದಲಿಸುತ್ತಿದ್ದಾರಾ? ಎಂಬ ಅನುಮಾನಗಳು ಶುರುವಾಗಿವೆ.

ಅಷ್ಟೇ ಅಲ್ಲದೇ ಎತ್ತರ ದನಿಯಲ್ಲಿ ಮಾತನಾಡಿದ ಗೆಳೆಯ ಮಂಜು ಅವರಿಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ‘ನಾನು ಮನೆಯ ಕ್ಯಾಪ್ಟನ್‌ ಆಗಿದ್ದಾಗ ನನ್ನ ಮೇಲೆ ಸವಾರಿ ಮಾಡಲು ಬರಬೇಡಿ. ನಿಮ್ಮ ಧ್ವನಿ ಮಧ್ಯೆ ನನ್ನ ಧ್ವನಿ ಕೇಳಿಸದಾಗಿ ಹೋಗಿದೆ’ ಎಂದು ಗುಡುಗಿದ್ದಾರೆ.

‘ನಾವಿಬ್ಬರೇ ಯಾವಾಗಲೂ ಮಾತನಾಡುತ್ತೇವೆ ಎಂದು ಮೋಕ್ಷಿತಾ ಹೇಳಿದ್ದರು. ಇದೀಗ ಈ ಆರೋಪ ಸರಿ ಅನಿಸುತ್ತಿದೆ. ನಾನು ಮತ್ತು ನೀವು ಇರುವಾಗಲೂ ನೀವೇ ಹೆಚ್ಚು ಮಾತನಾಡುತ್ತೀರಿ. ನೀವು ನೋಡಿದ ಹಾಗೆ ಇಲ್ಲ’ ಎಂದು ಖಡಕ್‌ ಆಗಿ ಮಂಜುಗೆ ಹೇಳಿದ್ದಾರೆ.

ಬಿಗ್‌ಬಾಸ್ ಆರಂಭದ ದಿನಗಳಲ್ಲಿ ಮೋಕ್ಷಿತಾ ಮತ್ತು ಗೌತಮಿ ಉತ್ತಮ ಸ್ನೇಹಿತರಾಗಿದ್ದರು. ನಂತರ ದಿನಗಳಲ್ಲಿ ಈ ಸ್ನೇಹಿತರ ಮಧ್ಯೆ ಮಂಜು ಅವರು ನುಸುಳಿದ್ದು, ಮೂವರು ಸ್ನೇಹವನ್ನು ಮುಂದುವರಿಸಿಕೊಂಡು ಹೋಗಿದ್ದರು. ಕೆಲ ವಾರಗಳ ಬಳಿಕ ‘ನನ್ನನ್ನು ಕಡೆಗಣಿಸುತ್ತಿದ್ದಾರೆ’ ಎಂಬ ಕಾರಣ ನೀಡಿ ಮಂಜು–ಗೌತಮಿ ಸ್ನೇಹದಿಂದ ಮೋಕ್ಷಿತಾ ಅವರು ಕಳಚಿಕೊಂಡಿದ್ದರು.

ಮೊದ ಮೊದಲು ಸುಪ್ತವಾಗಿದ್ದ ಮುನಿಸು ಬರಬರುತ್ತಾ ಹೆಚ್ಚಾಗುತ್ತಾ ಹೋಯಿತು. ಮಂಜು ಮತ್ತು ಗೌತಮಿ ಸ್ನೇಹದ ಬಗ್ಗೆ ತಮಗಿರುವ ಅಸಹನೆಯನ್ನು ಮೋಕ್ಷಿತಾ ಅವರು ಮುಕ್ತವಾಗಿಯೇ ಹೇಳುತ್ತಿದ್ದರು. ಎಷ್ಟರಮಟ್ಟಿಗೆ ಎಂದರೆ ಗೌತಮಿ– ಮಂಜು ಅವರ ಬಳಿ ಸಹಾಯ ಕೇಳಲು ನಿರಾಕರಿಸಿದ್ದ ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್‌ನಿಂದಲೇ ಹೊರನಡೆದಿದ್ದರು.

ನಿನ್ನೆ ನಡೆದ ನಾಮಿನೇಷನ್ ಟಾಸ್ಕ್‌ನಲ್ಲಿ ಮೋಕ್ಷಿತಾರನ್ನೇ ನಾಮಿನೇಟ್ ಮಾಡಿ ಅವರ ಮೇಲೆ ಕರಿನೀರು ಸುರಿಸಿದ್ದ ಗೌತಮಿ, ಇಂದು ಏಕಾಏಕಿ ಮೋಕ್ಷಿತಾರನ್ನು ಹೊಗಳಿ ಮಂಜು ವಿರುದ್ಧ ತಿರುಗಿ ಬೀಳಲು ಕಾರಣವೇನು? ಅಥವಾ ಇದು ಮೋಕ್ಷಿತಾ ಎದುರು ಮಂಜು ಗೌತಮಿ ಆಡುತ್ತಿರುವ ಹೊಸ ತಂತ್ರ ಇರಬಹುದೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.