ADVERTISEMENT

BiggBossKannada ಬಿಗ್‌ಬಾಸ್‌ ಒಟಿಟಿ ಸೀಸನ್‌: ವೂಟ್‌ನಲ್ಲಿ ಸಾವಿರ ಗಂಟೆ ಲೈವ್‌

ಸೆಲಿಬ್ರಿಟಿ ಸೀಸನ್‌ ಆಗಿರಲಿದೆ ಮೊದಲ ಒಟಿಟಿ ಸೀಸನ್‌

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 15:48 IST
Last Updated 1 ಆಗಸ್ಟ್ 2022, 15:48 IST
ಸುದೀಪ್‌ 
ಸುದೀಪ್‌    

ಬೆಂಗಳೂರು:ಬಿಗ್‌ಬಾಸ್‌ ಇತಿಹಾಸದಲ್ಲೇ ಮೊದಲ ‘ಬಿಗ್‌ಬಾಸ್‌ ಒಟಿಟಿ ಆವೃತ್ತಿ’ಯನ್ನು ಕಲರ್ಸ್‌ ಕನ್ನಡ ಆರಂಭಿಸಲು ಸಜ್ಜಾಗಿದ್ದು, ಆ.6ರಿಂದ ಆರು ವಾರಗಳ ಕಾಲ ವೂಟ್‌ನಲ್ಲಿ ಇದರ ಲೈವ್‌ ಆರಂಭವಾಗಲಿದೆ. ‘ಮೊದಲ ಒಟಿಟಿ ‌ಆವೃತ್ತಿಯಲ್ಲಿ ಕೇವಲ ಸೆಲಿಬ್ರಿಟಿಗಳು ಇರಲಿದ್ದಾರೆ’ ಎಂದುಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಂಡ್ಕಲ್‌, ‘ಇಲ್ಲಿಯವರೆಗೆ ವೂಟ್‌ನಲ್ಲಿ ಬಿಗ್‌ಬಾಸ್‌ ಕಂತುಗಳನ್ನು ನೋಡಲು ಅವಕಾಶವಿತ್ತು. ಆ.6ರಿಂದ ವಿಶೇಷ ಒಟಿಟಿ ಆವೃತ್ತಿ ಆರಂಭವಾಗಲಿದೆ. ಇಲ್ಲಿ 16 ಸ್ಪರ್ಧಿಗಳಿರಲಿದ್ದು, ಆರು ವಾರ ಎಂದರೆ 42 ದಿನ ದಿನದ 24 ಗಂಟೆಯೂ ಬಿಗ್‌ಬಾಸ್‌ ಮನೆಯಿಂದ ವೂಟ್‌ ಆ್ಯಪ್‌ ಮೂಲಕ ಮೂಲಕ ಲೈವ್‌ ನೋಡಬಹುದಾಗಿದೆ. ಸುಮಾರು ಸಾವಿರಕ್ಕೂ ಅಧಿಕ ಗಂಟೆ ಲೈವ್‌ ಇರಲಿದ್ದು, ಇದು ಬಿಗ್‌ಬಾಸ್‌ ಮಾದರಿಯಲ್ಲೇ ಇತಿಹಾಸ. ಲೈವ್‌ನಲ್ಲಿ ಬಂದ ವಿಡಿಯೊದ ಪ್ರಮುಖ ತುಣುಕುಗಳನ್ನು ಪ್ರತಿದಿನ ರಾತ್ರಿ ಒಂದೂವರೆ ಗಂಟೆಗಳ ಕಾಲ ಕಲರ್ಸ್‌ ಕನ್ನಡ ಚಾನೆಲ್‌ನಲ್ಲೂ ಪ್ರಸಾರ ಮಾಡಲಾಗುವುದು’ ಎಂದರು.

ಒಟಿಟಿ ಆವೃತ್ತಿಯಲ್ಲಿ ಬಹುತೇಕ ಸಾಮಾಜಿಕ ಜಾಲತಾಣ, ಡಿಜಿಟಲ್‌ ಕ್ಷೇತ್ರದಲ್ಲಿ ಹೆಸರು ಮಾಡಿರುವ 15 ರಿಂದ 40 ವರ್ಷದ ಒಳಗಿನ ಸ್ಪರ್ಧಿಗಳೇ ಇರಲಿದ್ದಾರೆ ಎನ್ನುವ ಸಣ್ಣ ಸುಳಿವೊಂದನ್ನು ಗುಂಡ್ಕಲ್‌ ನೀಡಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ 9ನೇ ಆವೃತ್ತಿ ಯಾವಾಗಿನಿಂದ ಆರಂಭವಾಗಲಿದೆ ಎನ್ನುವುದನ್ನು ಆ.6ರಂದು ಘೋಷಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ADVERTISEMENT

ಇಲ್ಲಿಂದಲೇ 9ನೇ ಆವೃತ್ತಿಗೆ ಆಯ್ಕೆ

‘ಬಿಗ್‌ಬಾಸ್‌ ಒಟಿಟಿ ಆವೃತ್ತಿ ಪೂರ್ಣಗೊಂಡ ಕೂಡಲೇ ಟಿ.ವಿಯಲ್ಲಿ ಬಿಗ್‌ಬಾಸ್‌ 9ನೇ ಆವೃತ್ತಿ ಆರಂಭವಾಗಲಿದೆ. ಇದಕ್ಕೆ ಪ್ರತ್ಯೇಕ ಸ್ಪರ್ಧಿಗಳಿರಲಿದ್ದು, ಜೊತೆಗೆ ಒಟಿಟಿ ಆವೃತ್ತಿಯಲ್ಲಿ ಉತ್ತಮವಾಗಿ ಆಟವಾಡಿದ ಆಯ್ದ ಸ್ಪರ್ಧಿಗಳೂ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಒಟಿಟಿ ಆವೃತ್ತಿಯಲ್ಲಿ ಕೇವಲ ಒಬ್ಬ ವಿಜೇತ ಎಂದಿಲ್ಲ. ಕೊನೆಯ ಸುತ್ತಿಗೆ ಬಂದ ಎಲ್ಲರೂ ವಿಜೇತರೇ. ಟಿ.ವಿ ಆವೃತ್ತಿಯಂತೆ ಒಟಿಟಿ ಆವೃತ್ತಿಯಲ್ಲೂ ಜನರಿಗೆ ಮತ ಹಾಕುವ ಅವಕಾಶವಿದೆ. ಒಟಿಟಿ ಆವೃತ್ತಿಯಲ್ಲೂ ಪ್ರತಿ ಶನಿವಾರ ಸುದೀಪ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದು ಗುಂಡ್ಕಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.