ADVERTISEMENT

ಬಿಗ್‌ಬಾಸ್‌ ಮನೆಯಲ್ಲಿ ಹಳ್ಳಿಕಾರ್‌ ಪಯಣ: ಅನುಭವ ಹಂಚಿಕೊಂಡ ವರ್ತೂರು ಸಂತೋಷ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2024, 12:58 IST
Last Updated 30 ಜನವರಿ 2024, 12:58 IST
<div class="paragraphs"><p>ವರ್ತೂರು ಸಂತೋಷ್‌</p></div>

ವರ್ತೂರು ಸಂತೋಷ್‌

   

ಬಿಗ್‌ಬಾಸ್ ಕನ್ನಡದ ಈ ಸೀಸನ್‌ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ವರ್ತೂರು ಸಂತೋಷ್. ಕೆಲವು ಕಹಿಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಟದಲ್ಲಿ ತೊಡಗಿಸಿಕೊಂಡು ವರ್ತೂರು ಅವರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. 

ಹಳ್ಳಿಕಾರ್‌ ವರ್ತೂರು ಸಂತೋಷ್‌ ಜಿಯೊ ಸಿನಿಮಾದ ಸಂದರ್ಶನಲ್ಲಿ ಭಾಗವಹಿಸಿ ಮಾತನಾಡಿದ್ದಾರೆ, ‘ನನಗಂತೂ ರಿಯಾಲಿಟಿ ಷೋಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬಿಗ್‌ಬಾಸ್ ಅಂದರೆ ವ್ಯಕ್ತಿತ್ವದ ಆಟ. ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ಹೊರಜಗತ್ತಿಗೆ ತೋರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಒಂದು ರಿಯಾಲಿಟಿ ಷೋ ಪೂರ್ತಿಯಾಗುವುದು ಆಗುವುದು ಮೊದಲ ದಿನದಿಂದ ಕೊನೆಯವರೆಗೂ ಇದ್ದರೆ ಮಾತ್ರ. ವೀಕೆಂಡ್‌ನಲ್ಲಿ ಎಲಿಮಿನೇಟ್ ಆಗುವುದು, ಮಿಡ್‌ವೀಕ್ ಎಲಿಮಿನೇಟ್ ಆಗುವುದೆಲ್ಲ ಇನ್ನೊಂದು ರೀತಿ. ಆದರೆ ಇಡೀ ಸೀಸನ್‌ ಕಂಪ್ಲೀಟ್ ಮಾಡುವುದು ಬೆರಳೆಣಿಕೆಯಷ್ಟು ಸ್ಪರ್ಧಿಗಳು. ಅವರಲ್ಲಿ ನಾನು ಒಬ್ಬನಾಗಿದ್ದೇನೆ.

ADVERTISEMENT

ಸೋಲು ಗೆಲುವು ಎರಡನ್ನೂ ಒಂದೇ ರೀತಿ ತೆಗೆದುಕೊಳ್ಳಬೇಕು. ಒಬ್ಬರು ಸೋತಾಗಲೇ ಗೆಲ್ಲಬೇಕು ಅನ್ನೋ ಛಲ ಬಂದಿರೋದು. ನಾನು ಈ ಸೀಸನ್‌ನ ಗೆಲ್ಲದೇ ಇರಬಹುದು. ಆದ್ರೆ ಕರ್ನಾಟಕದ ಪ್ರತಿಯೊಬ್ಬರ ಮನೆಮಗನಾಗಿ ಮನಸ್ಸು ಗೆದ್ದಿದ್ದೇನೆ. ಅದರ ಬಗ್ಗೆ ಖುಷಿಯಿದೆ. ನಾನು ಜನರಿಂದ ಬೆಳೆದವನು, ಜನರಿಗೋಸ್ಕರ ಜನರ ಜೊತೆಗೇ ಇರುವವನು.

ನಾನು ಈ ಬಿಗ್‌ಬಾಸ್ ಮನೆಯಲ್ಲಿ, ಏನಾದ್ರೂ ಹೊರಗಡೆ ತೆಗೆದುಕೊಂಡು ಹೋಗ್ತಿದೀನಿ ಅಂದ್ರೆ ಅದು ಉತ್ತಮ ಸ್ನೇಹ. ಎಲ್ಲ ಸ್ನೇಹಿತರಿಂದಲೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಆದರೆ ತುಕಾಲಿ ಅವರ ಕಡೆಯಿಂದ ಒಂದು ಸಹೋದರ ಸ್ನೇಹವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಯಾಕೆಂದರೆ ನನ್ನ ನಗು, ದುಃಖ ಎಲ್ಲವನ್ನೂ ಅವರ ಜೊತೆಗೆ ಹಂಚಿಕೊಂಡಿದ್ದೀನಿ. ಅದಕ್ಕೆ ವಿಶೇಷ ಸ್ಥಾನವಿದೆ. ಮನೆಯ ಸದಸ್ಯರು, ಸುದೀಪಣ್ಣ ಅಷ್ಟೇ ಏಕೆ, ಬಿಗ್‌ಬಾಸ್‌ ಕೂಡ ನಮ್ಮ ಸ್ನೇಹದ ಮೇಲೆ ಯಾರ ಕಣ್ಣೂ ಬೀಳದೆ ಇರಲಿ ಎಂದು ಹಾರೈಸಿದರು.

ನನ್ನ ಇಷ್ಟದ ಕ್ಷಣಗಳೆಂದರೆ ಬಿನ್‌ಬ್ಯಾಗ್‌ ಮೇಲೆ ಕುಳಿತಿದ್ದು. ಅಲ್ಲಿ ಕೂತು ನಾವು ಆಡದೇ ಇರುವ ಮಾತುಗಳಿಲ್ಲ. ಮಾಡದೆ ಇರುವ ತಂತ್ರಗಳಿಲ್ಲ. ಹಾಗಾಗಿ ಬಿನ್‌ಬ್ಯಾಗ್ ಅನುಭವ ಅದ್ಭುತವಾದದ್ದು.
ಜಿಯೊಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳಲ್ಲಿ ಲಗೋರಿ ಆಟ ನನಗೆ ತುಂಬ ಇಷ್ಟವಾಯ್ತು. ಎಲ್ಲರೂ ಬೇರೆ ಬೇರೆ ಹಿನ್ನೆಲೆಯವರು ಬಂದವರು, ಎರಡು ತಂಡಗಳಾಗಿ ಆಡಿದ್ದು ನನಗೆ ಸಾಕಷ್ಟು ಖುಷಿ ಕೊಡ್ತು.
ಒಂದು ಅರ್ಧಮರ್ಧ ಶಿಲೆಯನ್ನು ತಂದು ಬಿಗ್‌ಬಾಸ್ ಮನೆಯಲ್ಲಿ ಬಿಡುತ್ತಾರೆ. ಬಿಗ್‌ಬಾಸ್ ವೇದಿಕೆ ಅವರನ್ನು ಪೂರ್ತಿ ಶಿಲ್ಪವಾಗಿ ಕೆತ್ತಿ ಹೊರಗೆ ಕಳಿಸುತ್ತಾರೆ. ಅವರಲ್ಲಿ ಕೆಲವರು ಹೊರಗೆ ಹೋಗಿ ಒಡೆದುಹೋಗಿರುವುದೂ ಇರುತ್ತದೆ. ಕೆಲವು ತಕ್ಕ ಸ್ಥಾನ ಪಡೆದುಕೊಳ್ಳುತ್ತವೆ. ಬಿಗ್‌ಬಾಸ್ ವೇದಿಕೆಗೆ ಯಾರೇ ಬಂದಿದ್ದರೂ ಕೃತಜ್ಞತೆ ಇಟ್ಟುಕೊಳ್ಳಬೇಕು. ಯಾಕೆಂದರೆ ಒಂದು ತುತ್ತು ಅನ್ನ ತಿಂದರೂ ಅದರ ಋಣ ನಮ್ಮ ಮೇಲೆ ಇರುತ್ತದೆ. ಹಾಗಾಗಿ ಬಿಗ್‌ಬಾಸ್ ಧ್ವನಿಗೆ ನಾನು ಚಿರಋಣಿಯಾಗಿರುತ್ತೇನೆ’ ಎನ್ನುತ್ತಾರೆ ವರ್ತೂರು ಸಂತೋಷ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.