
ಅಶ್ವಿನಿ ಗೌಡ
ಚಿತ್ರ: ಇನ್‌ಸ್ಟಾಗ್ರಾಂ
ಬಿಗ್‌ಬಾಸ್ ಸೀಸನ್ 12ರ ಎರಡನೇ ರನ್ನರ್ ಅಪ್ ಆಗಿ ಅಶ್ವಿನಿ ಗೌಡ ಅವರು ಹೊರ ಹೊಮ್ಮಿದ್ದಾರೆ. ನಿನ್ನೆ (ಜ.18) ಭಾನುವಾರದ ಸಂಚಿಕೆಯಲ್ಲಿ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿಜೇತರಾಗಿದ್ದಾರೆ. ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆಗಿದ್ದಾರೆ.
ಅಶ್ವಿನಿ ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ಮಾಪಕಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಅಶ್ವಿನಿ ಗೌಡ ಅವರು ಕನ್ನಡಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದಾರೆ. ಈ ಮೂಲಕವೇ ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬರೋಬ್ಬರಿ 16 ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಆಡಿದ್ದ ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.
ಬಿಗ್‌ಬಾಸ್‌ನಿಂದ ಹೊರ ಬರುತ್ತಿದ್ದಂತೆ ಅಶ್ವಿನಿ ಗೌಡ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲೈವ್‌ಗೆ ಬಂದು ಇಡೀ ಕರ್ನಾಟಕದ ಜನತೆಗೆ, ಕಿಚ್ಚ ಸುದೀಪ್ ಅವರಿಗೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅಶ್ವಿನಿ ಗೌಡ ಹೇಳಿದ್ದೇನು?
‘ಎಲ್ಲರಿಗೂ ನಮಸ್ಕಾರ. ನಾನು ಈಗ ನಿಮ್ಮ ಮುಂದೆ ಬಂದಿರುವುದು ಇದೇ ಕಾರಣಕ್ಕೆ. ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಪ್ರೀತಿ ಕೊಟ್ಟು ಉಳಿಸಿಕೊಂಡಿದ್ದೀರಿ. ಇದಕ್ಕೆ ಹೇಗೆ ಧನ್ಯವಾದ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನನಗೆ ವೋಟ್ ಮಾಡಿ ಅಷ್ಟು ದಿನಗಳ ಕಾಲ ಉಳಿಸಿಕೊಂಡಿದ್ದ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ಇಡೀ ಕರ್ನಾಟಕ ರಕ್ಷಣಾ ವೇದಿಕೆಗೆ, ನನ್ನ ಅಣ್ಣ ಟಿ.ಎ. ನಾರಾಯಣಗೌಡ ಅವರಿಗೂ ಧನ್ಯವಾದಗಳು. ನಮ್ಮ ಕಣ್ಣಿಗೆ ಕಾಣುವ ದೇವರು ಎಂದರೆ ಅದು ಸುದೀಪ್ ಅಣ್ಣ. ನನ್ನ ತಪ್ಪುಗಳನ್ನು ತಿದ್ದಿ ಇಲ್ಲಿಯವರೆಗೂ ಕರೆದುಕೊಂಡು ಬಂದಿದ್ದೀರಾ. ನಿಮಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಜೊತೆಗಿದ್ದ 23 ಸಹ ಸ್ಪರ್ಧಿಗಳಿಗೂ ಧನ್ಯವಾದಗಳು. ಇಡೀ ಕರ್ನಾಟಕದ ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.