ADVERTISEMENT

BBK11: ಹಲವು ದಾಖಲೆಗಳಿಗೆ ಸಾಕ್ಷಿಯಾದ ಆವೃತ್ತಿ.. ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2025, 13:05 IST
Last Updated 27 ಜನವರಿ 2025, 13:05 IST
   

ಬೆಂಗಳೂರು: ಅದ್ಧೂರಿಯಾಗಿ ನಡೆದ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ತೆರೆಬಿದ್ದಿದೆ. ಹಾವೇರಿಯ ಹಳ್ಳಿ ಹುಡುಗ ಹನುಮಂತ ಈ ಬಾರಿ ಕಪ್ ಜೊತೆಗೆ ₹50 ಲಕ್ಷ ಜೇಬಿಗಿಳಿಸಿದ್ದಾರೆ.

ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಹನುಮಂತ ಕಪ್ ಗೆದ್ದು ಉಳಿದ 19 ಸದಸ್ಯರನ್ನು ಹಿಮ್ಮೆಟ್ಟಿಸಿದ್ದಾರೆ.

ಇದರ ಜೊತೆಗೆ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.

ADVERTISEMENT

ವೈಲ್ಡ್ ಕಾರ್ಡ್ ಸ್ಪರ್ಧಿ ಕಪ್ ಗೆದ್ದಿದ್ದು ಇದೇ ಮೊದಲು

ದಕ್ಷಿಣ ಭಾರತದಲ್ಲಿ ಅತ್ಯಂತ ಹೆಸರುವಾಸಿಯಾದ ಬಿಗ್ ಬಾಸ್ ಕನ್ನಡ ಆವೃತ್ತಿಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬರು ಟ್ರೋಫಿ ಗೆದ್ದಿದ್ದು ಇದೇ ಮೊದಲಾಗಿದೆ. ಪಕ್ಕಾ ಹಳ್ಳಿ ಹುಡುಗ ಹನುಮಂತ ತಮ್ಮ ಹಾಡುಗಾರಿಕೆ, ಸರಳತೆ, ಗ್ರಾಮೀಣ ಶೈಲಿಯ ಮಾತುಗಾರಿಕೆ ಮೂಲಕ ಜನರ ಮನಗೆದ್ದಿದ್ದಾರೆ. ಈ ಹಿಂದೆ ಸರಿಗಮಪ ಶೋವೊಂದರಲ್ಲಿ ಮನೆ ಮಾತಾಗಿದ್ದ ಅವರು, ಬಿಗ್ ಬಾಸ್ ಶೋನಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದಿನ ಆವೃತ್ತಿಗಳಲ್ಲೂ ಬಹಳ ಮಂದಿ ವೈಲ್ಡ್‌ ಕಾರ್ಡ್ ಸ್ಪರ್ಧಿಗಳು ಮನೆ ಪ್ರವೇಶಿಸಿದ್ದರಾದರೂ ಫೈನಲ್‌ವರೆಗೂ ಇರುತ್ತಿರಲಿಲ್ಲ. ಈ ಆವೃತ್ತಿಯಲ್ಲಿ ಮಾತ್ರ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಹನುಮಂತ ಮತ್ತು ರಜತ್ ಫೈನಲ್ ತಲುಪಿದ್ದರು. ಆದರೆ, ರಜತ್ 2ನೇ ರನ್ನರ್ ಅಪ್ ಆದರೆ, ಹನುಮಂತ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ದಾಖಲೆಯ ಮತ

10ನೇ ಆವೃತ್ತಿಗೂ ಮುನ್ನ ಫಿನಾಲೆ ಸ್ಪರ್ಧಿಗಳಿಗೆ 40 ಲಕ್ಷದಿಂದ 70 ಲಕ್ಷ ಮತಗಳು ಬಿದ್ದರೆ ಹೆಚ್ಚು ಎನ್ನುವಂತಿತ್ತು. ಆದರೆ, 10ನೇ ಮತ್ತು 11ನೇ ಆವೃತ್ತಿಯಲ್ಲಿ ಫಿನಾಲೆ ಸ್ಪರ್ಧಿಗಳ ಮತ ಗಳಿಕೆ ಕೋಟಿಗಳನ್ನು ದಾಟಿದೆ. 10ನೇ ಆವೃತ್ತಿಗಿಂತ ದುಪ್ಪಟ್ಟು ಮತ ಈ ಬಾರಿ ಬಂದಿದೆ.

ಹೌದು, ಟ್ರೋಫಿ ಗೆದ್ದ ಹನುಮಂತ 5 ಕೋಟಿ 23 ಲಕ್ಷ ಮತ ಪಡೆದಿದ್ದಾರೆ. ಇನ್ನೂ ರನ್ನರ್ ಅಪ್ ತ್ರಿವಿಕ್ರಮ್ 2 ಕೋಟಿ 84 ಲಕ್ಷ ಮತ ಗಳಿಸಿದ್ದಾರೆ. ಸುಮಾರು ತ್ರಿವಿಕ್ರಮ್ ಪಡೆದಷ್ಟೇ ಮತ ಕಳೆದ ಆವೃತ್ತಿಯ ವಿನ್ನರ್ ಕಾರ್ತಿಕ್‌ಗೆ ಬಂದಿದ್ದವು. ಹಾಗೆ ನೋಡಿದರೆ, ಈ ಬಾರಿ ವಿನ್ನರ್ ಮತ್ತು ರನ್ನರ್ ಅಪ್ ಮತಗಳ ನಡುವೆ ಭಾರಿ ಅಂತರವಿದೆ. ವಿನ್ನರ್ ಪಡೆದ ಮತಗಳು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಈ ದಾಖಲೆಯನ್ನು ಮುಂಬರುವ ಆವೃತ್ತಿಗಳಲ್ಲಿ ಹಿಂದಿಕ್ಕುವುದು ಅತ್ಯಂತ ಕಠಿಣವಾಗಬಹುದು ಎಂದು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರೇ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

20 ಲಕ್ಷ ಆಫರ್

ಬಿಗ್ ಬಾಸ್ ಕನ್ನಡ ಫಿನಾಲೆಯಲ್ಲಿ ಟಾಪ್ 4 ಸ್ಪರ್ಧಿಗಳಿಗೆ ನಿರೂಪಕ ಕಿಚ್ಚ ಸುದೀಪ್ ವ್ಯಕ್ತಿತ್ವದ ಪರೀಕ್ಷೆಗೆ ₹20 ಲಕ್ಷ ಆಫರ್ ನೀಡಿದ್ದರು. ಅವರ ಮುಂದೆ ಹಣವಿದ್ದ ಸೂಟ್‌ಕೇಸ್ ತಂದಿರಿಸಿ, ಸೂಟ್‌ಕೇಸ್ ತೆಗೆದುಕೊಂಡು ಈಗಲೇ ಮನೆಗೆ ಹೋಗಬಹುದು. ಕಾರು ಸಹ ಸಿದ್ಧವಿದೆ ಎಂದು ಹೇಳಲಾಗಿತ್ತು. ಆದರೆ, ಯಾವೊಬ್ಬ ಸ್ಪರ್ಧಿಯೂ ಅದನ್ನು ಸ್ವೀಕರಿಸಲಿಲ್ಲ.

ಇದೂ ಸಹ ಈ ಆವೃತ್ತಿಯ ಹೊಸ ವಿಚಾರವಾಗಿದೆ. ಹಿಂದೆಂದೂ ಸ್ಪರ್ಧಿಗಳಿಗೆ ಇಂಥದ್ದೊಂದು ಆಫರ್ ಸಿಕ್ಕಿರಲಿಲ್ಲ.

ಯಾರಿಗೆ ಎಷ್ಟು ಬಹುಮಾನ

ವಿನ್ನರ್: ಹನುಮಂತು; ₹50 ಲಕ್ಷ, ಟ್ರೋಫಿ

1ನೇ ರನ್ನರ್ ಅಪ್: ತ್ರಿವಿಕ್ರಮ್; ₹15 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.