ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ನಟ ಸುದೀಪ್, ಈ ವಾರಾಂತ್ಯದ ಬಿಗ್‌ಬಾಸ್ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್ ಸಂಡೇ ವಿದ್ ಸುದೀಪ್’ನಲ್ಲಿ ಭಾಗವಹಿಸುತ್ತಿಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಳೆದ ವಾರದ ಸಂಚಿಕೆಗಳೂ ಸುದೀಪ್ ಅನುಪಸ್ಥಿತಿಯಲ್ಲಿ ನಡೆದಿತ್ತು. ಇದಕ್ಕೆ ಪರ್ಯಾಯವಾಗಿ, ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ಸ್ಪರ್ಧಿಗಳನ್ನು ಹಲವು ಆಟದ ಮುಖಾಂತರ ಸೇಫ್ ಮಾಡಲಾಗಿತ್ತು. ‘ಈ ವಾರದ ಬಿಗ್‌ಬಾಸ್ ಎಪಿಸೋಡ್‌ಗಳಲ್ಲೂ ನಾನು ಭಾಗವಹಿಸುತ್ತಿಲ್ಲ. ವೇದಿಕೆಯಲ್ಲಿ ಹಲವು ಗಂಟೆಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು, ನನಗೆ ಇನ್ನಷ್ಟು ವಿಶ್ರಾಂತಿಯ ಅಗತ್ಯತೆ ಇದೆ. ನಾನು ಸಂಪೂರ್ಣವಾಗಿ ಆರೋಗ್ಯದಲ್ಲಿದ್ದರಷ್ಟೇ ಸ್ಪರ್ಧಿಗಳಿಗೆ ನ್ಯಾಯ ಒದಗಿಸಲು ಸಾಧ್ಯ. ಇದು ಕಠಿಣ ನಿರ್ಧಾರ, ಚಿತ್ರೀಕರಣ ರದ್ದುಗೊಳಿಸಿದ ಕಲರ್ಸ್ ಕನ್ನಡಕ್ಕೆ ಧನ್ಯವಾದ. ನಿಮ್ಮ ಪ್ರಾರ್ಥನೆಗೆ ಧನ್ಯವಾದ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಬಿಗ್‌ಬಾಸ್ ರಿಯಾಲಿಟಿ ಶೋನ ವಾರಾಂತ್ಯದ ಸಂಚಿಕೆಗಳು ಎರಡನೇ ಬಾರಿಗೆ ಸುದೀಪ್ ಅನುಪಸ್ಥಿತಿಯಲ್ಲಿ ನಡೆಯಲಿದ್ದು, ಕಳೆದ ಎಂಟು ಆವೃತ್ತಿಗಳಲ್ಲಿ ಹೀಗಾಗುತ್ತಿರುವುದು ಇದೇ ಮೊದಲಾಗಿದೆ. ಹೀಗಾಗಿ ಈ ವಾರದ ಎಲಿಮಿನೇಶನ್‌ಗೆ ಕಲರ್ಸ್ ಕನ್ನಡ ಬಿಗ್‌ಬಾಸ್ ತಂಡವು ಯಾವ ರೀತಿ ಸ್ಪರ್ಧೆಗಳನ್ನು, ಟಾಸ್ಕ್‌ಗಳನ್ನು ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಕಳೆದ ವಾರ ಮನೆಯಿಂದ ಹೊರನಡೆದ ವಿಶ್ವನಾಥ್, ನಿಧಿ ಸುಬ್ಬಯ್ಯ ಅವರನ್ನು ಈ ವಾರದ ಎಲಿಮಿನೇಷನ್‌ನಿಂದ ಪಾರು ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.