ಗಿಲ್ಲಿ ನಟ
ಚಿತ್ರ: ಎಕ್ಸ್
ಕನ್ನಡದ ಬಿಗ್‌ಬಾಸ್ ಸೀಸನ್ 12ರಲ್ಲಿ ಗಿಲ್ಲಿನಟ ಅವರು ಎಲ್ಲರ ನಿರೀಕ್ಷೆಯಂತೆ ವಿನ್ನರ್ ಆಗಿದ್ದಾರೆ. ಬರೋಬ್ಬರಿ 37 ಕೋಟಿಗೂ ಅಧಿಕ ವೋಟ್‌ಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿದ್ದಾರೆ.
ಪ್ರತಿ ಸೀಸನ್‌ನಂತೆಯೇ ಈ ಬಾರಿಯೂ ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ಪ್ರೀತಿಯಿಂದ ₹10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.
ಜನರ ಮನ ಗೆದ್ದ ಗಿಲ್ಲಿ ಬಿಗ್‌ಬಾಸ್ ಶೋನಲ್ಲಿ ವಿನ್ನರ್ ಆಗಿದ್ದಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗಿಲ್ಲಿ ನಟನ ಗೆಲುವಿನ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ‘ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ. ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು’ ಎಂದು ಹೇಳಿದ್ದಾರೆ.
ರಾಜ್ಯ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಗಿಲ್ಲಿನಟನಿಗೆ ಶುಭ ಹಾರೈಸಿದ್ದಾರೆ. ‘ಕನ್ನಡ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಪಾರ ಜನ ಬೆಂಬಲದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿದ ಹಳ್ಳಿ ಪ್ರತಿಭೆ ಗಿಲ್ಲಿ ನಟ (ಶ್ರೀ ನಟರಾಜ್) ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೈಜ ನಟನೆಯ ಮೂಲಕ ಜನರನ್ನು ನಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅವರಿಗೆ ಇನ್ನಷ್ಟು ಅವಕಾಶಗಳು ದೊರಕಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ನಟಿ, ಕಾರುಣ್ಯ ರಾಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿ ‘ವಿನ್ನರ್ ಗಿಲ್ಲಿ ಅಭಿನಂದನೆಗಳು’ ಎಂದು ಶುಭಾಶಯ ಕೋರಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿ ದೀಪಿಕಾ ದಾಸ್ ಸೇರಿದಂತೆ ಜೀ ಕನ್ನಡ ವಾಹಿನಿ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮಾಜಿ ಸ್ಪರ್ಧಿಗಳು ಶುಭ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.