ADVERTISEMENT

ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ನಿಧನ

​ಪ್ರಜಾವಾಣಿ ವಾರ್ತೆ
Published 12 ಮೇ 2025, 2:29 IST
Last Updated 12 ಮೇ 2025, 2:29 IST
   

ಉಡುಪಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಲ್ಪೆ ರಾಕೇಶ್ ಪೂಜಾರಿ (33) ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕಾರ್ಕಳದ ನಿಟ್ಟೆ ಸಮೀಪ ಭಾನುವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಕುಸಿದುಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಉಡುಪಿ ಮೂಲದವರಾದ ರಾಕೇಶ್, 2018 ರಲ್ಲಿ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ ಎರಡರ ರನ್ನರ್ ಅಪ್ ತಂಡದಲ್ಲಿದ್ದ ಅವರು ಅನಂತರ ಹಲವು ತುಳು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.

ADVERTISEMENT

ರಿಯಾಲಿಟಿ ಶೋ ಮಾತ್ರವಲ್ಲದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್‌ ಕಲ್ಯಾಣ ಧಾರಾವಾಹಿಯಲ್ಲಿಯೂ ರಾಕೇಶ್ ನಟಿಸಿದ್ದರು. ತಮ್ಮ ಹಾಸ್ಯ ಚಟಾಕಿಯಿಂದಲೇ ಕನ್ನಡಿಗರ ಮನಗೆದ್ದಿದ್ದರು. 

ರಾಕೇಶ್ ನಿಧನದ ಕುರಿತು ನಟಿ ರಕ್ಷಿತಾ, ನಟ ಶಿವರಾಜ್ ಕೆ.ಆರ್‌.ಪೇಟೆ ಸೇರಿ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

ರಾಕೇಶ ನಿಧನದ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ರಕ್ಷಿತಾ, ‘ಇನ್ನು ಮುಂದೆ ರಾಕೇಶ್ ಜೊತೆ ಮಾತನಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರ್ಯಕ್ರಮ, ರಾಕೇಶ್ ಯಾವಾಗಲೂ ಉಳಿದವರಿಗಿಂತ ಭಿನ್ನವಾಗಿ ನಿಲ್ಲುತ್ತಿದ್ದ ವ್ಯಕ್ತಿ. ಕ್ಯಾಮೆರಾದ ಹೊರಗೆಯೂ ಅತ್ಯಂತ ಪರಿಪೂರ್ಣ ವ್ಯಕ್ತಿ ಎಂದು ನನಗೆ ತಿಳಿದಿತ್ತು. ರಾಕೇಶ್ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ವಾಸಿಸುತ್ತೀರಿ. ನೀವು ನಮ್ಮೆಲ್ಲರ ಜೀವನದಲ್ಲಿ ತಂದ ಸಂತೋಷಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಶಿವರಾಜ ಕೆ.ಆರ್‌ ಪೇಟೆ ಅವರು, ‘ಎಷ್ಟೋ ಮನಸುಗಳ ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ’ ಎಂದು ಬರೆದುಕೊಂಡಿದ್ದಾರೆ.

ನಟಿ ರಕ್ಷಿತಾ ಹಂಚಿಕೊಂಡ ಪೋಸ್ಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.