ADVERTISEMENT

ಕನ್ನಡಕ್ಕೆ ಬರಲಿದ್ದಾನೆ ಹಿಂದಿಯ ಖ್ಯಾತ ‘ಸಿಐಡಿ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 8:08 IST
Last Updated 22 ಜೂನ್ 2020, 8:08 IST
ಕನ್ನಡಕ್ಕೆ ಡಬ್‌ ಆಗಿರುವ ಹಿಂದಿಯ ಸಿಐಡಿ ಟಿವಿ ಧಾರಾವಾಹಿ
ಕನ್ನಡಕ್ಕೆ ಡಬ್‌ ಆಗಿರುವ ಹಿಂದಿಯ ಸಿಐಡಿ ಟಿವಿ ಧಾರಾವಾಹಿ   

ಪರ-ವಿರೋಧ ಚರ್ಚೆ ನಡುವೆಯೇಡಬ್ಬಿಂಗ್‌ ಧಾರಾವಾಹಿಗಳು ಕನ್ನಡ ಕಿರುತೆರೆಗೆಕಾಲಿಟ್ಟಿವೆ. ಹಿಂದಿ ಕಿರುತೆರೆಯಲ್ಲಿ ಬರೋಬ್ಬರಿ 20 ವರ್ಷ ಪ್ರಸಾರಗೊಂಡ ಜನಪ್ರಿಯ ಧಾರಾವಾಹಿ ‘ಸಿಐಡಿ’‌ ಕನ್ನಡಕ್ಕೆ ಡಬ್‌ ಆಗಿದ್ದು, ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಧಾರಾವಾಹಿಜೂನ್ 22 ರಿಂದ ರಾತ್ರಿ 9.30ಕ್ಕೆ ಕನ್ನಡಿಗರನ್ನು ರಂಜಿಸಲು ಸಜ್ಜಾಗಿದೆ.

ಮಹಾಭಾರತ, ರಾಧಾಕೃಷ್ಣ, ಮಾಲ್ಗುಡಿ ಡೇಸ್‌, ನಾಗಿನ್‌, ಅಲಾದಿನ್‌, ನಜರ್ ಮುಂತಾದ ಹಿಂದಿಯಿಂದ ಆಮದು ಮಾಡಿಕೊಳ್ಳಲಾದ ಡಬ್ಬಿಂಗ್‌ ಧಾರಾವಾಹಿಗಳು ಕನ್ನಡಿಗರನ್ನು ರಂಜಿಸುತ್ತಿವೆ. ಇದೀಗ ಅವುಗಳ ಸಾಲಿಗೆ 'ಸಿಐಡಿ' ಹೊಸ ಸೇರ್ಪಡೆ.

1998 ರಲ್ಲಿ ಹಿಂದಿ ವಾಹಿನಿಯೊಂದರಲ್ಲಿ 'ಸಿಐಡಿ' ಪ್ರಸಾರ ಆರಂಭಿಸಿತ್ತು. ಸತತ 20 ವರ್ಷ ವೀಕ್ಷಕರನ್ನು ರಂಜಿಸಿದ ಈ ಧಾರಾವಾಹಿ 2018ರ ಅಕ್ಟೋಬರ್ 27ರಂದು ಕೊನೆಯ ಎಪಿಸೋಡ್‌ ಬಿತ್ತರಿಸಿತ್ತು. ಆ ಮೂಲಕ ಭಾರತದ ದೊಡ್ಡ ಸೀರಿಯಲ್‌ಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿತು.

ADVERTISEMENT

ಸಸ್ಪೆನ್ಸ್‌ ಥ್ರಿಲ್ಲರ್ ಕಥಾಹಂದರ ಇರುವ ಈ ಧಾರಾವಾಹಿಗೆ ಬಿ.ಪಿ. ಸಿಂಗ್‌ ನಿರ್ದೇಶನ ಮಾಡಿದ್ದಾರೆ. ಇದರಲ್ಲಿನ ಎಸಿಪಿ ಪ್ರದ್ಯುಮನ್‌ ಪಾತ್ರದಲ್ಲಿ ಶಿವಾಜಿ ನಟಿಸಿದ್ದಾರೆ. ಇನ್ನಿತರ ಪೊಲೀಸ್‌ ಪಾತ್ರಗಳಲ್ಲಿ ಆದಿತ್ಯ ಶ್ರೀವಾಸ್ತವ್ ಮತ್ತು ದಯಾನಂದ್‌ ಶೆಟ್ಟಿ ಅಭಿನಯಿಸಿದ್ದಾರೆ.

ಭಾರತದ ಹಲವಾರು ಸ್ಥಳಗಳಲ್ಲಿ 'ಸಿಐಡಿ' ಚಿತ್ರೀಕರಣ ನಡೆದಿದೆ. ವಿದೇಶಗಳಲ್ಲೂ ಶೂಟಿಂಗ್ ಮಾಡಿರುವುದು ಈ ಧಾರಾವಾಹಿಯ ವಿಶೇಷ. ಧಾರಾವಾಹಿ ಯಶಸ್ವಿ13ನೇ ವರ್ಷದ ಸಂಭ್ರಮಕ್ಕಾಗಿ ಪ್ಯಾರಿಸ್‌ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಎರಡು ತಾಸಿನ ವಿಶೇಷ ಸಂಚಿಕೆ ಚಿತ್ರೀಕರಿಸಲಾಗಿತ್ತು. 111 ನಿಮಿಷಗಳ ಸಿಂಗಲ್‌ ಶಾಟ್‌ ದೃಶ್ಯವನ್ನು ಚಿತ್ರೀಕರಿಸುವ ಮೂಲಕ ಲಿಮ್ಕಾ ಮತ್ತು ಗಿನ್ನೆಸ್‌ ರೆಕಾರ್ಡ್‌ ಕೂಡ ಮಾಡಿತ್ತು.

'ಸಿಐಡಿ'ಯಿಂದ ಪ್ರೇರೇಪಣೆಗೊಂಡು ಸಸ್ಪೆನ್ಸ್‌ ಥ್ರಿಲ್ಲರ್‌ ಜಾಡಿನಅನೇಕ ಧಾರಾವಾಹಿಗಳು ಬಂದಿವೆ. ಸಿ.ಐ.ಡಿ ಅಧಿಕಾರಿಗಳು ಹೇಗೆಲ್ಲ ಅಪರಾಧಿಗಳ ಜಾಡು ಹಿಡಿದು ಕಾನೂನಿಗೆ ಒಪ್ಪಿಸುತ್ತಾರೆ ಎಂಬ ಕುತೂಹಲಕಾರಿ ಕ್ರೈಂ ಸ್ಟೋರಿಸಂಚಿಕೆಗಳನ್ನು ‘ಸಿಐಡಿ’ ಹೊತ್ತು ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.