ADVERTISEMENT

ಪುಟ್ಟಕ್ಕನ ಮಕ್ಕಳ ಮೇಲೆ ಕಂಠಿ ಕಣ್ಣು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 7:57 IST
Last Updated 20 ಮಾರ್ಚ್ 2022, 7:57 IST
ಧನುಷ್‌ ಎನ್‌.ಎಸ್‌.
ಧನುಷ್‌ ಎನ್‌.ಎಸ್‌.   

ಪುಟ್ಟಕ್ಕನ ಮಗಳನ್ನು ಇಷ್ಟಪಟ್ಟು ಕಣ್ಣು ಹಾಕುವುದು ಈ ಕಂಠಿಯ ಕೆಲಸ. ಅದಕ್ಕಾಗಿಯೇ ಗೆಳೆಯರ ಜೊತೆ ಮಾಡುವ ಸರ್ಕಸ್‌ ಧಾರಾವಾಹಿಯಲ್ಲಿ ಕಚಗುಳಿ ನೀಡುವ ವಸ್ತು.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಕಂಠಿ ಯಾರು ಗೊತ್ತೇ? ಆ ಹೊಸ ಪ್ರತಿಭೆ ಧನುಷ್‌ ಎನ್‌.ಎಸ್‌. ಸಿವಿಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದೇ ತಡ ನೇರವಾಗಿ ಬಣ್ಣದ ಬದುಕಿಗೆ ಕಾಲಿಟ್ಟಿದ್ದಾರೆ.

ಇದಕ್ಕೂ ಮೊದಲು ಧನುಷ್‌ ಅವರು, ‘ಅನಿರೀಕ್ಷಿತ’, ‘18+2’ ಕಿರುಚಿತ್ರಗಳನ್ನು, ‘ನನ್ನ ನಗು’ ಹಾಡಿನ ಆಲ್ಬಂ ಮಾಡಿದವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡವರು. ಆ ಕನಸಿನ ದಾರಿಯಲ್ಲಿ ‘ಪುಟ್ಟಕ್ಕನ ಮಕ್ಕಳ’ ಜತೆ ಹೆಜ್ಜೆ ಹಾಕಿದ್ದಾರೆ.

ADVERTISEMENT

ಯಾರು ಈ ಧನುಷ್‌?

ಕೋಲಾರ ಜಿಲ್ಲೆಯ ಸಂತೆಹಳ್ಳಿಯವರು ಧನುಷ್‌. ತಂದೆ ಉದ್ಯಮಿ, ರಾಜಕೀಯ ಪಕ್ಷವೊಂದರ ಜಿಲ್ಲಾಮಟ್ಟದ ಪದಾಧಿಕಾರಿ. ಧನುಷ್‌ ಅವರು ಎಂಜಿನಿಯರಿಂಗ್‌ ಮುಗಿಯುತ್ತಿದ್ದಂತೆಯೇ ಕಳೆದ ಫೆಬ್ರುವರಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು.

ಕೋಲಾರ ಭಾಗದ ಭಾಷೆಗೂ ಮಂಡ್ಯ ಭಾಷೆಗೂ ಸಾಮ್ಯತೆ ಇರುವುದರಿಂದ ಈ ಧಾರಾವಾಹಿಯಲ್ಲಿ ಮಂಡ್ಯದ ಭಾಷೆ ಬಳಸುವುದು ಧನುಷ್‌ ಅವರಿಗೆ ಸುಲಭವಾಯಿತಂತೆ.

‘ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ತೆರೆಯ ಮೇಲಷ್ಟೇ ಅಲ್ಲ, ತೆರೆಯಾಚೆಗೂ ಯಾರೂ ನನ್ನನ್ನು ಸಣ್ಣವನು, ಹೊಸಬ ಎಂದು ಯಾರೂ ನೋಡುವುದಿಲ್ಲ. ಸಮಾನವಾಗಿಯೇ ನೋಡುತ್ತಾರೆ. ಪ್ರೀತಿಯಿಂದ ಇದ್ದೇವೆ. ಉಮಾಶ್ರೀ ಅಮ್ಮ ಅಂತೂ ತುಂಬಾ ಹೇಳಿಕೊಡುತ್ತಾರೆ. ನಮ್ಮನ್ನೂ ಅವರ ಮಟ್ಟದಲ್ಲೇ ನೋಡಿ ಪ್ರೋತ್ಸಾಹಿಸುತ್ತಾರೆ. ಅದು ತುಂಬಾ ಖುಷಿ ಕೊಡುತ್ತದೆ. ನನ್ನ ಆಸಕ್ತಿಗೆ ತಕ್ಕ ಅವಕಾಶ ಬಂದಿದೆ. ಹಾಗಾಗಿ ಈ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ’ ಎಂದರು ಧನುಷ್‌.

‘ಜೆ.ಎಸ್‌.ಪ್ರೊಡಕ್ಷನ್‌ಗೆ ಬಂದ ಮೇಲೆ ನನ್ನ ಮೇಲೆ ನಂಬಿಕೆ ಇಟ್ಟು, ಬೇರೆಯವರೂ ನನ್ನ ಮೇಲೆ ನಂಬಿಕೆ ಇರಿಸುವಂತೆ ಮಾಡಿದ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್‌, ನಟನೆಯ ಎಬಿಸಿಡಿ ಹೇಳಿಕೊಟ್ಟ, ಗುರು ಸ್ಥಾನದಲ್ಲಿರುವ ಇದೇ ಧಾರಾವಾಹಿಯ ಸಹ ನಿರ್ದೇಶಕ ಮುರಳಿರಾಜ್‌ ಅವರನ್ನು ತುಂಬಾ ನೆನ‍ಪಿಸಿಕೊಳ್ಳುತ್ತೇನೆ’ ಎನ್ನುವ ಧನುಷ್‌ ಅವರಿಗೆಹಿರಿತೆರೆ ನಟರ ಪೈಕಿ ಚಿರಂಜೀವಿ, ನಮ್ಮ ವಿಷ್ಣುವರ್ಧನ್‌, ಯಶ್‌ ತುಂಬಾ ಇಷ್ಟವಂತೆ.

ಜನ ಎಲ್ಲಿಯವರೆಗೆ ಇಷ್ಟಪಟ್ಟು ಸ್ವೀಕರಿಸುತ್ತಾರೋ ಅಲ್ಲಿಯವರೆಗೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮುಂದುವರಿಯುತ್ತದೆ. ಕನಿಷ್ಠ 3 ವರ್ಷವಾದರೂ ಈ ಧಾರಾವಾಹಿ ಮುಂದುವರಿಸಬೇಕು ಎನ್ನುವ ಆಸೆ ನಮ್ಮ ತಂಡದ್ದು ಎಂದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.