ADVERTISEMENT

ಮರಳಿ ಬಂದ ರಾಘಣ್ಣ...

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 19:45 IST
Last Updated 28 ಫೆಬ್ರುವರಿ 2019, 19:45 IST
ನಾಗಾರ್ಜುನ, ಮಧುಬಾಲಾ, ರಕ್ಷಿತಾ
ನಾಗಾರ್ಜುನ, ಮಧುಬಾಲಾ, ರಕ್ಷಿತಾ   

ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಅವರು ‘ಮರಳಿ ಬಂದಳು ಸೀತೆ’ ಧಾರಾವಾಹಿಯ ಪತ್ರಿಕಾಗೋಷ್ಠಿ ಮುಗಿಸಿ ಕುಳಿತಿದ್ದರು. ಒಂದು ದಶಕದ ಬಿಡುವಿನ ನಂತರ ಅವರು ಹೂಡಿಕೆ ಮಾಡಿರುವ ಧಾರಾವಾಹಿ ಇದು. ಪತ್ರಿಕಾಗೋಷ್ಠಿಗೆ ಬಂದಿದ್ದ ಹಲವರು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವ ಉತ್ಸಾಹದಲ್ಲಿದ್ದರು. ಅದರ ನಡುವೆಯೇ ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಕುಳಿತರು ರಾಘಣ್ಣ.

‘ನಿಮ್ಮ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಧಾರಾವಾಹಿ ಬಗ್ಗೆ ನಿರೀಕ್ಷೆಗಳು ತುಸು ಹೆಚ್ಚಾಗಿಯೇ ಇರುತ್ತವೆ. ಧಾರಾವಾಹಿ ಮೂಲಕ ನೈತಿಕ ಸಂದೇಶ ರವಾನೆ ಆಗಬೇಕು ಎಂಬ ಬೇಡಿಕೆಯನ್ನು ಕೂಡ ಕೆಲವರು ಇರಿಸಿದ್ದಾರೆ. ನಿರೀಕ್ಷೆಗಳಿಗೆ ಹೇಗೆ ಸ್ಪಂದಿಸುವಿರಿ?’ ಎಂಬುದು ರಾಘಣ್ಣ ಅವರ ಎದುರಿಟ್ಟ ಮೊದಲ ಪ್ರಶ್ನೆ. ‘ನಾವು ಬೆಳೆದುಬಂದ ರೀತಿಯೇ ಹಾಗಿದೆ. ಜನರಿಗೆ ಹಿಂದಿನಿಂದಲೂ ನಮ್ಮ ಬಗ್ಗೆ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿ ಇವೆ. ಜನ ಹೇಳಿದ್ದನ್ನು ನಾವು ಒಳ್ಳೆಯ ರೀತಿಯಿಂದ ಸ್ವೀಕರಿಸಿ, ಅದನ್ನು ಧಾರಾವಾಹಿಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸುತ್ತೇವೆ’ ಎಂದು ಉತ್ತರಿಸಿದರು. ತಕ್ಷಣ ಏನನ್ನೋ ನೆನಪಿಸಿಕೊಂಡವರಂತೆ, ‘ಜನ ನಮ್ಮ ಮೇಲೆ ಹೊರಿಸುವ ಜವಾಬ್ದಾರಿಯೇ ನಮ್ಮನ್ನು ಬೆಳೆಸುತ್ತಿದೆ. ಜನ ಆಡುವ ಮಾತುಗಳನ್ನು ನಾವು ಕೇಳದಿದ್ದರೆ ನಾವು ಈ ಮಟ್ಟಕ್ಕೆ ಬರುತ್ತಿರಲಿಲ್ಲ’ ಎಂಬ ಮಾತನ್ನೂ ಸೇರಿಸಿದರು.

‘ಒಂದು ದಶಕದ ಬಿಡುವಿನ ನಂತರ ಪುನಃ ಧಾರಾವಾಹಿ ನಿರ್ಮಾಣಕ್ಕೆ ಬಂದಿದ್ದೀರಿ. ಏಕಿಷ್ಟು ಬಿಡುವು?’ ಎಂದು ಕೇಳಿದಾಗ ರಾಘಣ್ಣ ಹೇಳಿದ್ದು ಹೀಗೆ: ‘ಒಮ್ಮೊಮ್ಮೆ ಕೆಲವು ವಿಷಯಗಳು ನಮ್ಮನ್ನು ಕಟ್ಟಿಹಾಕಿಬಿಡುತ್ತವೆ. ಹತ್ತು–ಹದಿನೈದು ವರ್ಷಗಳಲ್ಲಿ ಏನೆಲ್ಲ ನಡೆದುಹೋಯಿತು... ತಂದೆಯವರ (ಡಾ. ರಾಜ್‌ಕುಮಾರ್‌) ಅಪಹರಣ ಆಯಿತು, ನಂತರ ಅವರಿಗೆ ಶಸ್ತ್ರಚಿಕಿತ್ಸೆ ಆಯಿತು. ಅದಾದ ನಂತರ ಅವರು ದೇಹತ್ಯಾಗ ಮಾಡಿದರು. ತಾಯಿಗೆ ಅನಾರೋಗ್ಯ ಎದುರಾಯಿತು. ಆಮೇಲೆ ನನಗೆ ಹುಷಾರಿಲ್ಲದಂತೆ ಆಯಿತು. ಅಂದರೆ, ಸಂಸಾರದಲ್ಲಿನ ಹಲವು ಸಂಗತಿಗಳು ನಮ್ಮನ್ನು ತಡೆಯುತ್ತಿರುತ್ತವೆ, ಅದನ್ನೆಲ್ಲ ನಾವು ದಾಟಿಕೊಂಡು ಬರಬೇಕು. ಈಗ ಸ್ವಲ್ಪ ಸುಧಾರಣೆ ಆಗಿದೆ. ಮಕ್ಕಳು ದೊಡ್ಡವರಾಗಿದ್ದಾರೆ. ನಾನು ಮತ್ತೆ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದೇನೆ. ಅಪ್ಪಾಜಿ ಮತ್ತು ಅಮ್ಮನನ್ನು ಕಳೆದುಕೊಂಡ ಶೂನ್ಯವನ್ನು ತುಂಬಲು ಆಗುತ್ತಿಲ್ಲ. ಆದರೆ, ಇವನ್ನೆಲ್ಲ ಮೀರಿ ನಾವು ನಡೆಯಲೇಬೇಕು. ಮತ್ತೆ ನಾವು ಧಾರಾವಾಹಿ ನಿರ್ಮಾಣ ಮಾಡಬೇಕು. ಒಂದಿಷ್ಟು ಜನರಿಗೆ ಕೆಲಸ ಕೊಡಬೇಕು ಎಂದು ಪುನಃ ನಿರ್ಮಾಣಕ್ಕೆ ಕೈಹಾಕಿದೆವು’.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ರಾಘಣ್ಣ ಅವರಿಗೆ ಒಂದು ಪ್ರಶ್ನೆ ಎದುರಾಗಿತ್ತು – ಇಂದಿನ ಟಿ.ವಿ. ಕಾರ್ಯಕ್ರಮಗಳು ಮಾರುಕಟ್ಟೆಯಲ್ಲಿ ಎಷ್ಟು ಹಣ ತಂದುಕೊಡಬಹುದು ಎಂಬ ಬಗ್ಗೆ. ಅದಕ್ಕೆ ಉತ್ತರಿಸಿದ್ದ ರಾಘಣ್ಣ, ‘ನಾವು ಧಾರಾವಾಹಿ ನಿರ್ಮಾಣವನ್ನು ವ್ಯಾಪಾರ – ವ್ಯವಹಾರದ ದೃಷ್ಟಿಯಿಂದ ನೋಡುತ್ತಿಲ್ಲ. ಇದು ನಮ್ಮ ಕೆಲಸ ಎಂಬಂತೆ ನೋಡುತ್ತಿದ್ದೇವೆ’ ಎಂದಿದ್ದರು. ಆ ಪ್ರಶ್ನೆಯ ಮುಂದುವರಿದ ಭಾಗವಾಗಿ ‘ಸಿನಿಮಾ ಪುರವಣಿ’ಯು, ‘ಯಾಕೆ ಲಾಭದ ದೃಷ್ಟಿ ಇಲ್ಲ’ ಎಂದು ಪ್ರಶ್ನಿಸಿತು.

‘ಮಕ್ಕಳಿಗೆ ಆಸ್ತಿ ಮಾಡದಿದ್ದರೂ ತೊಂದರೆ ಇಲ್ಲ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂಬ ಮಾತಿದೆ. ಹಾಗೆ ಮಾಡಿದರೆ ಮುಂದೊಂದು ದಿನ ಆಸ್ತಿ ಬಂದೇ ಬರುತ್ತದೆ. ನಾವು ಧಾರಾವಾಹಿಯನ್ನು ಚೆನ್ನಾಗಿ ಕಟ್ಟಿದರೆ ಮುಂದೊಂದು ದಿನ ಲಾಭ ಬಂದೇ ಬರುತ್ತದೆ. ಇದು ನಮ್ಮ ತಂದೆ ನಮಗೆ ತೋರಿಸಿಕೊಟ್ಟಿದ್ದು. ಯಶಸ್ವಿ ಸಿನಿಮಾ ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಸಿಕ್ಕ ಸಿನಿಮಾಕ್ಕೆ ಯಶಸ್ಸು ತಂದುಕೊಡಬೇಕು’ ಎಂದರು ರಾಘಣ್ಣ.

‘ಉತ್ತಮ ಕಥೆ’
ಒಂದು ದಶಕದ ಬಿಡುವಿನ ಬಳಿಕ ಡಾ. ರಾಜ್‌ ಕುಟುಂಬ ಕಿರುತೆರೆ ಕಾರ್ಯಕ್ರಮ ನಿರ್ಮಾಣ ಮಾಡಿದೆ. ವಜ್ರೇಶ್ವರಿ ಕಂಬೈನ್ಸ್‌ ಸಂಸ್ಥೆಯ ‘ಪೂರ್ಣಿಮ ಎಂಟರ್‌ಪ್ರೈಸಸ್’ ಮೂಲಕ ರಾಘವೇಂದ್ರ ರಾಜ್‌ಕುಮಾರ್‌ ಅವರು ‘ಸ್ಟಾರ್‌ ಸುವರ್ಣ’ ವಾಹಿನಿಯ ‘ಮರಳಿ ಬಂದಳು ಸೀತೆ’ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ.

ಈ ಧಾರಾವಾಹಿಯ ಪ್ರಸಾರ ಫೆಬ್ರುವರಿ 25ರಿಂದ ಆರಂಭವಾಗಿದೆ. ‘ಆರ್ಯವರ್ಧನ ಮತ್ತು ಅಂಗಧ ಅವರ ಮದುವೆ ಸಂದರ್ಭದಲ್ಲಿ ಬರುವ ಹುಡುಗಿಯೊಬ್ಬಳು, ತಾನು ಆರ್ಯವರ್ಧನನ ಮೊದಲ ಹೆಂಡತಿ ಸೀತೆ ಎಂದು ಹೇಳಿಕೊಳ್ಳುತ್ತಾಳೆ. ಆದರೆ, ಆತನ ಮೊದಲ ಹೆಂಡತಿ ಸೀತೆಗೂ, ತಾನು ಸೀತೆ ಎಂದು ಹೇಳಿಕೊಂಡ ಬಂದ ಹುಡುಗಿಗೂ ಹೋಲಿಕೆ ಇರುವುದಿಲ್ಲ. ಹೀಗಿದ್ದರೂ, ಸೀತೆಯ ಮಗಳು ತನಿಷ್ಕ ಆ ಹುಡುಗಿಯನ್ನು ತನ್ನ ಅಮ್ಮ ಎಂದು ಗುರುತಿಸುತ್ತಾಳೆ. ಆಕೆ ನಿಜವಾದ ಸೀತೆ ಹೌದಾ, ಆಕೆಯ ಉದ್ದೇಶ ಏನು ಎಂಬ ಪ್ರಶ್ನೆಗಳಿಗೆ ಧಾರಾವಾಹಿಯ ಕಂತುಗಳು ಉತ್ತರ ನೀಡುತ್ತವೆ’ ಎಂದು ವಾಹಿನಿ ಹೇಳಿದೆ. ಈ ಧಾರಾವಾಹಿಯ ಕಥೆ ಬರೆದವರು ಹೇಮಂತ್ ಹೆಗಡೆ. ಧರಣೀಶ್ ಅವರು ನಿರ್ದೇಶಕನ ಕ್ಯಾಪ್ ಹಾಕಿಕೊಂಡಿದ್ದಾರೆ. ‘ಇದು ಉತ್ತಮ ಕಥೆಯನ್ನು ಹೊಂದಿರುವ ಕೌಟುಂಬಿಕ ಧಾರಾವಾಹಿ. ಇದರಲ್ಲಿ ವೀಕ್ಷಕರನ್ನು ತಲ್ಲೀನಗೊಳಿಸುವ ಕನ್ನಡದ ಕಥೆ ಇದೆ’ ಎಂದು ಹೇಳಿಕೊಂಡಿದ್ದಾರೆ ‘ಸ್ಟಾರ್ ಸುವರ್ಣ’ ವಾಹಿನಿಯ ಬ್ಯುಸಿನೆಸ್ ಹೆಡ್ ಸಾಯಿ ಪ್ರಸಾದ್.

***
ಟಿ.ವಿ. ಮೂಲಕ ಎಲ್ಲ ರೀತಿಯ ಜನರನ್ನು ತಲುಪಬಹುದು. ಎಲ್ಲರ ಜೊತೆ ನಂಟು ಬೆಳೆಸಿಕೊಳ್ಳಬಹುದು. ಸಂಬಂಧಗಳ ಸುತ್ತ ಕಥೆ ರೂಪಿಸಿದರೆ ಜನ ಅವುಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಈ ಧಾರಾವಾಹಿ ಹೇಳುವ ಮಾನವೀಯ ಮೌಲ್ಯಗಳು ಇಷ್ಟವಾದವು.
-ರಾಘವೇಂದ್ರ ರಾಜ್‌ಕುಮಾರ್, ನಟ, ನಿರ್ಮಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.