ADVERTISEMENT

ಸಾರ್ವಜನಿಕರ ಒತ್ತಾಯದ ಮೇರೆಗೆ ನಾಳೆಯಿಂದ ಡಿಡಿಯಲ್ಲಿ ರಾಮಾಯಣ: 2 ತಾಸು ಪ್ರಸಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 8:20 IST
Last Updated 27 ಮಾರ್ಚ್ 2020, 8:20 IST
ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಮರು ಪ್ರಸಾರ
ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಮರು ಪ್ರಸಾರ   

ನವದೆಹಲಿ: ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಪೌರಾಣಿಕ ಧಾರಾವಾಹಿ 'ರಾಮಾಯಣ' ದೂರದರ್ಶನದಲ್ಲಿ ಮರು ಪ್ರಸಾರವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಇರುವುದರಿಂದ ಮನೆಯಲ್ಲಿ ಬೇಸರ ಕಳೆಯಲು ಹಾಗೂ ಮನೆಯಲ್ಲೇ ಉಳಿಯುವಂತೆ ಪ್ರೇರೇಪಿಸಲು, ರಮಾನಂದ ಸಾಗರ್‌ ನಿರ್ದೇಶನದ ರಾಮಾಯಣ ಹಾಗೂ ಬಿ.ಆರ್‌.ಚೋಪ್ರಾ ನಿರ್ದೇಶನದ ಮಹಾಭಾರತ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಜನರು ಒತ್ತಾಯಿಸಿದ್ದರು. ಈ ಕುರಿತು ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ಶೇಖರ್‌ ಎರಡು ದಿನಗಳ ಹಿಂದೆ ತಿಳಿಸಿದ್ದರು.

ಇದೀಗ ರಾಮಾಯಣ ಧಾರಾವಾಹಿ ಪ್ರಸಾರವಾಗುವುದು ಖಚಿತವಾಗಿದೆ. 'ಸಾರ್ವಜನಿಕರ ಒತ್ತಾಯದ ಮೇರೆಗೆ ನಾವು ನಾಳೆಯಿಂದ ರಾಮಾಯಣ ಮರು ಪ್ರಸಾರ ಆರಂಭಿಸಲಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇನೆ. ಮಾರ್ಚ್‌ 28, ಶನಿವಾರದಿಂದ ಡಿಡಿ ನ್ಯಾಷನಲ್‌ನಲ್ಲಿ ನಿತ್ಯ ಎರಡು ಕಂತುಗಳು ಪ್ರಸಾರವಾಗಲಿವೆ. ಬೆಳಿಗ್ಗೆ 9ರಿಂದ 10 ಗಂಟೆ ಹಾಗೂ ರಾತ್ರಿ 9ರಿಂದ 10 ಗಂಟೆವರೆಗೂ ರಾಮಾಯಣ ಪ್ರಸಾರವಾಗಲಿದೆ' ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅಧಿಕೃತ ಖಾತೆಯಿಂದ ಟ್ವೀಟಿಸಿದ್ದಾರೆ.

ADVERTISEMENT

ಶಶಿ ಶೇಖರ್‌ ಅವರು ಪ್ರಕಾಶ್‌ ಜಾವಡೇಕರ್‌ ಹಾಗೂ ನಿರ್ದೇಶಕ ರಮಾನಂದ ಸಾಗರ್‌ ಅವರ ಕುಟುಂಬಕ್ಕೆ ಧನ್ಯವಾದ ತಿಳಿಸಿ, ನಿಮ್ಮ ಮಾರ್ಗದರ್ಶನ ಮತ್ತು ಸಹಕಾರದಿಂದ ಇದು ಸಾಧ್ಯವಾಗಿದೆ. ಇಂಥ ಸಂದರ್ಭದಲ್ಲಿ ಸಾಗರ್‌ ಅವರ ಕುಟುಂಬ ಒಟ್ಟುಗೂಡಿ ಧಾರಾವಾಹಿಯ ಕಂತುಗಳನ್ನು ಮುಂಬೈನ ಡಿಡಿ ನ್ಯಾಷನಲ್‌ಗೆ ತಲುಪಿಸಿದ್ದಾರೆ ಎಂದಿದ್ದಾರೆ.

'ದೂರದರ್ಶನದ (ಡಿಡಿ) ಅಧಿಕಾರಿಗಳ ತಂಡ ಇದಕ್ಕಾಗಿ ನಿನ್ನೆ ಹಗಲು–ರಾತ್ರಿ ಶ್ರಮಿಸಿದ್ದಾರೆ. ಕುಟುಂಬ ಮತ್ತು ಮನೆಯಿಂದ ದೂರ ಉಳಿದು ಕಾರ್ಯನಿರ್ವಹಿಸುವ ಮೂಲಕ ಪೌರಾಣಿಕ ಧಾರಾವಾಹಿಯ ಮರು ಪ್ರಸಾರ ಸಾಧ್ಯವಾಗಿಸಲು ನೆರವಾಗಿದ್ದಾರೆ. ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿದ ತಂಡಕ್ಕೆ ಅಭಿನಂದನೆ' ಎಂದಿದ್ದಾರೆ.

ದೂರದರ್ಶನದಲ್ಲಿ 'ರಾಮಾಯಣ' ಮೊದಲ ಬಾರಿಗೆ 1987ರಲ್ಲಿ ಪ್ರಸಾರವಾಗಿತ್ತು. ಜನರಿಂದ ಅತಿ ದೊಡ್ಡ ಸ್ಪಂದನೆ ಪಡೆದಿದ್ದ ಧಾರಾವಾಹಿ ಇಂದಿಗೂ ಬೇಡಿಕೆ ಉಳಿಸಿಕೊಂಡಿದೆ. ರಾಮನ ಪಾತ್ರದಲ್ಲಿ ಅರುಣ್‌ ಗೋವಿಲ್‌ ಹಾಗೂ ಸೀತೆ ಪಾತ್ರದಲ್ಲಿ ದೀಪಿಕಾ ಚಿಖಾಲಿಯಾ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.