ADVERTISEMENT

ಜೀ ಕನ್ನಡದ 'ಕಮಲಿ' ಯಶಸ್ವಿನಿ ಯಶಸ್ಸಿನ ಹಾದಿ

ರೇಷ್ಮಾ
Published 12 ಡಿಸೆಂಬರ್ 2019, 19:30 IST
Last Updated 12 ಡಿಸೆಂಬರ್ 2019, 19:30 IST
ಯಶಸ್ವಿನಿ ರವೀಂದ್ರ
ಯಶಸ್ವಿನಿ ರವೀಂದ್ರ   

ಸಿನಿಮಾ, ಕಿರುತೆರೆಗೆ ಬರುವ ಅನೇಕ ನಟ–ನಟಿಯರು ಬಾಲ್ಯದಿಂದಲೇ ನಟನೆಯ ಕನಸು ಹೊತ್ತಿರುತ್ತಾರೆ.ಇಲ್ಲವೇ ಮನೆಯವರ ಕನಸನ್ನು ನನಸು ಮಾಡುವ ಸಲುವಾಗಿ ನಟ–ನಟಿಯಾಗುತ್ತಾರೆ. ಆದರೆ ತೀರ್ಥಹಳ್ಳಿಯ ಈ ಬೆಡಗಿ ‘ಮುಂಗಾರು ಮಳೆ’ ಸಿನಿಮಾದಿಂದ ಸ್ಫೂರ್ತಿಗೊಂಡು ನಟಿಯಾಗಿದ್ದಾರೆ. ಅವರೇ ಜೀ ಕನ್ನಡ ವಾಹಿನಿಯ ‘ಕಮಲಿ’ ಧಾರಾವಾಹಿಯ ‘ರಚನಾ’ ಅರ್ಥಾತ್‌ ಯಶಸ್ವಿನಿ ರವೀಂದ್ರ.

ನಾಯಕನ ತಂಗಿ ಪಾತ್ರದ ಮೂಲಕ ಜನ ಮೆಚ್ಚುಗೆ ಗಳಿಸಿದ ಯಶಸ್ವಿನಿ ರವೀಂದ್ರ ಮೊದಲು ನಟಿಸಿದ್ದು ಉದಯ ವಾಹಿನಿಯ ‘ಸಾಕ್ಷಿ’ ಧಾರಾವಾಹಿಯಲ್ಲಿ. ಇವರು ನಟಿಸಿದ ಎರಡನೇ ಧಾರಾವಾಹಿ ‘ಮನೆದೇವ್ರು’. ಈ ಧಾರಾವಾಹಿಯಲ್ಲಿ ಅನನ್ಯ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ಇವರಿಗೆ ಸಾಕಷ್ಟು ಹೆಸರು ಬಂದಿತ್ತು.

‘ನಾನು ನಟಿಯಾಗಬೇಕೆಂದು ಯಾವತ್ತೂ ಅಂದುಕೊಂಡವಳಲ್ಲ, ‘ಮುಂಗಾರುಮಳೆ’ಯಲ್ಲಿ ಗಣೇಶ್ ಅವರ ಅಭಿನಯ ನೋಡಿದ ಮೇಲೆ ನಟಿಯಾಗಬೇಕು ಎನ್ನಿಸಿತ್ತು. ನಟನೆಯ ಆಸೆ ಚಿಗುರಿದ ಮೇಲೆ ಆಡಿಷನ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಹೀಗೆ ‘ಉದಯ’ ವಾಹಿನಿಯ ಮೂಲಕ ಕಿರುತೆರೆಗೆ ಪರಿಚಯಗೊಂಡೆ’ ಎಂದು ತಮ್ಮ ನಟನೆಯ ಹಾದಿಯ ನೆನಪು ಮಾಡಿಕೊಳ್ಳುತ್ತಾರೆ ಮಲೆನಾಡಿನ ಬೆಡಗಿ.

ADVERTISEMENT

ಸದ್ಯ ಯಶಸ್ವಿನಿ ‘ಕಾಲವೇ ಮೋಸಗಾರ’ ಎಂಬ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿರುವಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಕಿರುತೆರೆಯಲ್ಲಿ ಹಲವು ಅವಕಾಶಗಳು ಬಂದರೂ ಇವರ ಗಮನ ಸಿನಿಮಾಗಳ ಮೇಲೆ ಇರುವ ಕಾರಣಕ್ಕೆ ‘ಸದ್ಯಕ್ಕೆ ಧಾರಾವಾಹಿ ಬೇಡ ಸಿನಿಮಾಗಳನ್ನಷ್ಟೇ ಮಾಡುತ್ತೇನೆ’ ಎನ್ನುತ್ತಾರೆ. ‘ಒಳ್ಳೆಯ ಬ್ಯಾನರ್‌ನಡಿ ಬರುವ ಸಿನಿಮಾಕ್ಕೆ ಕಾಯುತ್ತಿದ್ದೇನೆ. ಹಾಗಂತ ಸಿನಿಮಾನೇ ನನ್ನ ಭವಿಷ್ಯ ಎಂದಲ್ಲ. ಮನಸ್ಸಿಗೆ ಒಪ್ಪುವ ಚಿತ್ರಕಥೆ, ಪಾತ್ರ ಸಿಕ್ಕಿದರೆ ಸಿನಿಮಾ ಮಾಡುತ್ತೇನೆ’ ಎನ್ನುತ್ತಾ ಭವಿಷ್ಯದ ಹಾದಿಯ ಬಗ್ಗೆ ಹೇಳುತ್ತಾರೆ.

ನಟನೆಗೆ ಬರುವ ಮೊದಲು ವಿದೇಶಗಳಿಗೆ ಓದಲು ಹೋಗುವ ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ ಮಾಡುತ್ತಿದ್ದ ಇವರು, ‘ನಟನೆಗೆ ಬಾರದಿದ್ದಿದರೆ ಅದೇ ವೃತ್ತಿ ಮುಂದುವರಿಸುತ್ತಿದ್ದೆ’ ಎನ್ನುತ್ತಾರೆ.

‘ತಂಗಿ ಪಾತ್ರ ಮಾಡುತ್ತಿರುವುದಕ್ಕೆ ಬೇಸರವಿಲ್ಲ’ ಎನ್ನುವ ಅವರು ‘ಲೀಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡರೆ ಸಂಪೂರ್ಣ ಅದರಲ್ಲೇ ತೊಡಗಿಕೊಳ್ಳಬೇಕು. ಆಗ ನಮಗೆ ಬೇರೆ ಅವಕಾಶ ಸಿಕ್ಕರೂ ಹೋಗಲು ಆಗುವುದಿಲ್ಲ. ಅದೂ ಅಲ್ಲದೇ ನನಗೆ ಕಿರುತೆರೆಯಲ್ಲಿ ಅಷ್ಟಾಗಿ ಗುರುತಿಸಿಕೊಳ್ಳುವುದು ಬೇಡವಾಗಿತ್ತು. ಸಿನಿಮಾ ಮಾಡುವಾಗ ‘ಓ, ಇವಳು ಧಾರಾವಾಹಿ ಹುಡುಗಿ‘ ಎಂದು ಗುರುತಿಸುವಂತಾಗಬಾರದು ಎಂಬ ಕಾರಣಕ್ಕೆ ತಂಗಿ ಪಾತ್ರ ಒಪ್ಪಿದೆ. ಈ ಬಗ್ಗೆ ಬೇಸರವಿಲ್ಲ. ಪಾತ್ರ ನನಗೆ ಖುಷಿ ಕೊಟ್ಟಿದೆ‌’ ಎಂದು ನೇರವಾಗಿ ಹೇಳುತ್ತಾರೆ.

‘ಕಮಲಿ’ ಧಾರಾವಾಹಿ ಕಾಲೇಜು ಜೀವನದ ಕಥೆ ಒಳಗೊಂಡಿರುವುದರಿಂದ ಇದರಲ್ಲಿ ಅನೇಕರು ಒಂದೇ ವಯಸ್ಸಿನ ಯುವಕ-ಯುವತಿಯರಿದ್ದಾರೆ. ಆ ಕಾರಣಕ್ಕೆ ಎಲ್ಲರೂ ಸಮಾನ ಮನಸ್ಕರ ರೀತಿ ಒಂದಾಗಿ ಕೆಲಸ ಮಾಡುತ್ತೇವೆ. ಹೊಂದಿಕೊಂಡು ಹೋಗುತ್ತೇವೆ. ಜೊತೆಗೆ ಪದ್ಮಾವಾಸಂತಿ, ಮೈಕೋ ಮಂಜು, ಸಪ್ನಾ ಅವರಂತಹ ಹಿರಿಯ ಕಲಾವಿದರು ಕಿರಿಯರಿಗೆ ನಟನೆಯ ಟಿಪ್ಸ್ ನೀಡುತ್ತಾರೆ. ಅವರು ಇರುವ ಕಾರಣಕ್ಕೆ ಸೆಟ್‌ನಲ್ಲಿ ಸಕರಾತ್ಮಕ ಭಾವ ಹೆಚ್ಚಿದೆ’ ಎನ್ನುತ್ತಾರೆ.

‘ನಾನು ನಟನೆಗೆ ಬರಲು ನನ್ನ ಕುಟುಂಬದವರ ಸಹಕಾರನೇ ಕಾರಣ’ ಎನ್ನುವ ಇವರು, ನಟನೆಯಲ್ಲಿ ಮುಂದುವರಿಯಲು ಮನೆಯವರ ಬೆಂಬಲವೂ ಇದೆ ಎನ್ನುವುದನ್ನು ಹೇಳಲು ಮರೆಯುವುದಿಲ್ಲ.

ಚಾಲೆಜಿಂಗ್ ಪಾತ್ರಗಳಲ್ಲಿ ನಟಿಸಲು ಇಷ್ಟಪಡುವ ಇವರಿಗೆ ರಾಧಿಕಾ ಆಪ್ಟೆ ಅವರ ನಟನೆ ತುಂಬಾ ಇಷ್ಟವಂತೆ. ಅವರ ಪಾತ್ರಗಳನ್ನು ನೋಡಿದಾಗ ಹೀಗೂ ನಟಿಸಲು ಸಾಧ್ಯವೇ ಎನ್ನುವ ಅಚ್ಚರಿ ಆಗಿದೆಯಂತೆ ಇವರಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.