ADVERTISEMENT

ಜೀ ಕುಟುಂಬ ಅವಾರ್ಡ್ಸ್‌: ಒಂದೇ ವೇದಿಕೆ ಮೇಲೆ ತಾರೆಯರ ಸಮಾಗಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2025, 7:20 IST
Last Updated 15 ಅಕ್ಟೋಬರ್ 2025, 7:20 IST
<div class="paragraphs"><p>ಚಿತ್ರ: ಜೀ ಕನ್ನಡ</p></div>

ಚಿತ್ರ: ಜೀ ಕನ್ನಡ

   

ಜೀ ಕನ್ನಡ ವಾಹಿನಿಯಲ್ಲಿ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್- 2025’ ಆರಂಭವಾಗುತ್ತಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 17 ರಿಂದ 19ರವರೆಗೆ ಸಂಜೆ 6:30ರಿಂದ ಪ್ರಸಾರವಾಗಲಿದೆ. ‌ಈ ಕಾರ್ಯಕ್ರಮವನ್ನು ನಿರೂಪಕ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ನಡೆಸಿಕೊಡಲಿದ್ದಾರೆ.

ಈ ವರ್ಷದ ಜೀ ಕನ್ನಡ ಕುಟುಂಬ ಅವಾರ್ಡ್ಸ್‌ನಲ್ಲಿ ಜನಪ್ರಿಯ ನಟ, ಜನಪ್ರಿಯ ನಟಿ, ಜನಪ್ರಿಯ ಜೋಡಿ, ಜನಪ್ರಿಯ ಧಾರಾವಾಹಿ, ಜನಪ್ರಿಯ ರಿಯಾಲಿಟಿ ಶೋ ಮತ್ತು ಜನಪ್ರಿಯ ನಿರೂಪಕ ಹಾಗೂ ನಿರೂಪಕಿ ಅನ್ನುವ ಪ್ರಮುಖ 6 ಕೆಟಗರಿಗಳಿರಲಿವೆ.

ADVERTISEMENT

ಚಿತ್ರ: ಜೀ ಕನ್ನಡ

ಈ ಆರು ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ವಿಜೇತರ ಘೋಷಣೆ ಇರಲಿದೆ. ಈ ಬಾರಿಯ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಲಿದ್ದು, ಕನ್ನಡ ಚಲನಚಿತ್ರ ತಾರೆಯರು ಹಾಗೂ ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಲಿದ್ದಾರೆ. ಇದರ ಮತ್ತೊಂದು ಆಕರ್ಷಣೆ ಏನೆಂದರೆ ನೆಚ್ಚಿನ ತಾರೆಯರು ಅವರ ಅವಿಸ್ಮರಣೀಯ ಸುಂದರ ಮತ್ತು ನೋವಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಎರಡು ಮಾತಿಲ್ಲ.

ಚಿತ್ರ: ಜೀ ಕನ್ನಡ

ಜೀ ಕನ್ನಡ ಅವಾರ್ಡ್ 2025ರಲ್ಲಿ ಚಂದನವನದ ಡಿವೈನ್ ಸ್ಟಾರ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್, ಶಿವಣ್ಣ, ಉಪೇಂದ್ರ, ನಟಿ ತಾರಾ, ಸುಧಾರಾಣಿ ಮತ್ತು ಸಂಸದ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿರಲಿದ್ದಾರೆ. ಜೀ ಕನ್ನಡ ಅವಾರ್ಡ್‌ನಲ್ಲಿ ವಿಶೇಷವಾಗಿ ‘ವೀಕೆಂಡ್ ವಿತ್ ರಮೇಶ್ ಮಿನಿಯೇಚರ್’ ಕೂಡ ಇರಲಿದ್ದು, ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅವರ ಮಾತುಕತೆ ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಆಗಿದೆ.

ಚಿತ್ರ: ಜೀ ಕನ್ನಡ

ಇನ್ನು, ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಜೀ ಕನ್ನಡ ಮತ್ತು ಕನ್ನಡ ಜೀ5ರ ವ್ಯವಹಾರ ವಿಭಾಗದ ಮುಖ್ಯಸ್ಥ ದೀಪಕ್ ಶ್ರೀರಾಮುಲು, ‘ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ, ಸೃಜನಶೀಲತೆ ಮತ್ತು ಅದ್ಭುತ ಆತ್ಮ ಸ್ಫೂರ್ತಿಯ ಆಚರಣೆಯೇ ಕುಟುಂಬ ಅವಾರ್ಡ್ಸ್. ಜೀ ಕನ್ನಡ 20 ವರ್ಷ ಪೂರೈಸಿದ ಈ ಶುಭ ಸಂದರ್ಭದಲ್ಲಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ನೀಡುವುದು ನಮ್ಮ ಮುಖ್ಯ ಗುರಿ ಆಗಿತ್ತು. ಅದಕ್ಕೆ ಬದ್ಧವಾಗಿ ನಾವು ಈ ವರ್ಷ 'ನಾ ನಿನ್ನ ಬಿಡಲಾರೆ', 'ಕರ್ಣ' ಮತ್ತು 'ಶ್ರೀ ರಾಘವೇಂದ್ರ ಮಹಾತ್ಮೆ' ಎಂಬ ಪ್ರಸಿದ್ಧ ಧಾರಾವಾಹಿಗಳ ಜೊತೆಗೆ 'ನಾವು ನಮ್ಮವರು' ಎಂಬ ವಿಭಿನ್ನ ರಿಯಾಲಿಟಿ ಶೋ ಅನ್ನು ಜನರ ಮುಂದಿಟ್ಟಿದ್ದೇವೆ. ನಮ್ಮ ವೀಕ್ಷಕರು ಈ ಎಲ್ಲಾ ಕಾರ್ಯಕ್ರಮಗಳನ್ನು ಮನಸಾರೆ ಮೆಚ್ಚಿದ್ದು ನಮ್ಮ ಹುರುಪನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಟೆಲಿವಿಷನ್ ಜೊತೆಗೆ OTT ವೇದಿಕೆ ಕನ್ನಡ ZEE5 ‘ನಮ್ಮ ಭಾಷೆ, ನಮ್ಮ ಕಥೆಗಳು’ ಮೂಲಕ ಕನ್ನಡದ ಕಥೆಗಳಿಗೆ ಜೀವ ತುಂಬುವ ಕೆಲಸವನ್ನು ಮುಂದುವರೆಸಿದೆ. ಮತ್ತೊಂದೆಡೆ ಮೈಕ್ರೋ– ಸರಣಿ ಅಪ್ಲಿಕೇಶನ್ ಬುಲೆಟ್ ಇಂದಿನ ಪೀಳಿಗೆಗಳಿಗೆ ಕಥೆ ಹೇಳುವ ಕಲೆಗೆ ಹೊಸ ಅರ್ಥ ನೀಡುತ್ತಿದೆ. ಇನ್ನು ನಮಗೆ ವೀಕ್ಷಕರು ನೀಡುವ ಬೆಂಬಲ ಮತ್ತು ಪ್ರೀತಿ ಅಭೂತಪೂರ್ಣ’ ಎಂದರು.

ಯಾರು ಯಾವ ಪ್ರಶಸ್ತಿಗೆ ಭಾಜನರಾದರು, ಯಾರು ಯಾವ ಹಾಡಿಗೆ ನೃತ್ಯ ಮಾಡಿದರು, ಯಾರು ಯಾವ ಉಡುಗೆಯಲ್ಲಿ ಮಿಂಚಿದರು ಮತ್ತು ನಗು, ತರ್ಲೆ, ಅಳು, ನೋವು, ನಲಿವು ಮತ್ತು ಇನ್ನಷ್ಟು ಭಾವನೆಗಳ ಸಮ್ಮಿಲನವನ್ನು ಜೀ ಕನ್ನಡ ಕುಟುಂಬ ಅವಾರ್ಡ್ಸ್‌ನಲ್ಲಿ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.