ADVERTISEMENT

ಜೀ ಕನ್ನಡದಲ್ಲಿ ಬರಲಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ ಹೊಸ ರಿಯಾಲಿಟಿ ಶೋ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2025, 15:14 IST
Last Updated 30 ಜುಲೈ 2025, 15:14 IST
   

ಬೆಂಗಳೂರು: ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌, ಜೋಡಿ ನಂಬರ್ 1, ಮತ್ತು ಸೂಪರ್ ಕ್ವೀನ್ ನಂತಹ ಅನೇಕ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟು ಅದರಲ್ಲಿ ಯಶಸ್ವಿಯಾಗಿರುವ ಜೀ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.

ಸಂಬಂಧಗಳ ನಡುವಿನ ಪ್ರೀತಿ ಸಾರುವ 'ನಾವು ನಮ್ಮವರು' ಎನ್ನುವ ಹೊಸ ರಿಯಾಲಿಟಿ ಶೋ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಇದು ವಿಭಿನ್ನ ಪ್ರಯತ್ನವಾಗಿದೆ. ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ಜನರಿಗೆ ತಲುಪಿಸುವುದೇ ಈ ರಿಯಾಲಿಟಿ ಶೋ ದ ಮುಖ್ಯ ಉದ್ದೇಶ. ಸಕ್ಕತ್ ಟ್ವಿಸ್ಟ್ ಜೊತೆಗೆ ಫನ್ ಇರಲಿದ್ದು ನಿಮಗೆ 100% ಮನರಂಜನೆ ಸಿಗೋದಂತೂ ಗ್ಯಾರಂಟಿ. ಅಷ್ಟೇ ಅಲ್ಲದೇ ಪ್ರತಿ ವಾರ ವಿಭಿನ್ನ ಬಗೆಯ ರೌಂಡ್ಸ್ ಇರಲಿದ್ದು, ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ.

ADVERTISEMENT

ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದಿರುವ ನಿರಂಜನ್ ದೇಶಪಾಂಡೆ ಅವರು ‘ನಾವು ನಮ್ಮವರು‘ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ, ನಟಿ ತಾರಾ ಅನುರಾಧ, ನಟ ಶರಣ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕಲಾವಿದರಾದ ರಜತ್-ಅಕ್ಷತಾ, ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ, ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ತಮ್ಮ ಕುಟುಂಬದವರೊಡನೆ ಸೇರಿ ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲಿದ್ದಾರೆ.

ಇಲ್ಲಿ ಸ್ಪರ್ಧಿಗಳು ಅನೇಕ ಕುತೂಹಲ ಇರುವ ಬೇರೆ ಬೇರೆ ಟಾಸ್ಕ್‌ಗಳಲ್ಲಿ ತಮ್ಮ ಕುಟುಂಬದವರ ಜೊತೆ ಸೇರಿ ಭಾಗವಹಿಸಲಿದ್ದಾರೆ. ಸಂಬಂಧಗಳನ್ನು ಸಂಭ್ರಮಿಸೋ 'ನಾವು ನಮ್ಮವರು' ರಿಯಾಲಿಟಿ ಶೋ ಕುಟುಂಬದ ಹಳೆಯ ನೆನಪುಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳ ಮೂಲಕ ವೀಕ್ಷಕರ ಮುಂದಿಡುತ್ತದೆ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.