ADVERTISEMENT

ಜೀ಼ ಕನ್ನಡದಲ್ಲಿ ಶುರುವಾಗ್ತಿದೆ ‘ಮಹಾನಟಿ’ ಸೀಸನ್ 2, ಕರ್ಣ ಧಾರಾವಾಹಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2025, 10:56 IST
Last Updated 13 ಜೂನ್ 2025, 10:56 IST
   

ಬೆಂಗಳೂರು: ಭಾವನಾತ್ಮಕ ಫಿಕ್ಷನ್ ಧಾರಾವಾಹಿಗಳು ಹಾಗೂ ಸೂಪರ್ ರಿಯಾಲಿಟಿ ಶೋಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ ಈಗ ಎರಡು ವಿಶಿಷ್ಟ ಶೋಗಳನ್ನು ಪ್ರಾರಂಭಿಸುತ್ತಿದೆ.

ಜೂನ್ 14ರಂದು ರಾತ್ರಿ 7:30ಕ್ಕೆ ‘ಮಹಾನಟಿ ಸೀಸನ್ 2’ ಹಾಗೂ ಜೂನ್ 16 ರಿಂದ ಪ್ರತಿದಿನ ರಾತ್ರಿ 8ಕ್ಕೆ ಹೊಸ ಧಾರಾವಾಹಿ ‘ಕರ್ಣ’ ಪ್ರಸಾರವಾಗಲಿದೆ

ಕರ್ಣ ತ್ಯಾಗ ಪ್ರೀತಿ ಮತ್ತು ಭಾವನೆಗಳಿಗೆ ಒತ್ತು ಕೊಟ್ಟರೆ ಮಹಾನಟಿ ಸೀಸನ್ 2 ಮಹಾನಟಿ ಕನಸು, ಫೇಮ್ ಬಗ್ಗೆ ಆಗಿದೆ.

ADVERTISEMENT

ಮಹಾನಟಿ ಸೀಸನ್ 2

ಮಹಾನಟಿ ಸೀಸನ್ 1 ರ ಯಶಸ್ಸಿನ ನಂತರ ಈಗ ‘ಮಹಾನಟಿ ಸೀಸನ್ 2' ನಿಮ್ಮನ್ನು ಮನರಂಜಿಸಲು ಸಜ್ಜಾಗಿದೆ . ಮೊದಲ ಆವೃತ್ತಿಯ ವಿಜೇತೆ ಪ್ರಿಯಾಂಕಾ, ಸ್ಯಾಂಡಲ್‌ವುಡ್‌ನ ನಿರ್ದೇಶಕ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಈ ಶೋನ ಯಶಸ್ಸಿಗೆ ಒಂದು ಉತ್ತಮ ಉದಾಹರಣೆ.

ಈಗ, ಜೂನ್ 14ರಂದು ರಾತ್ರಿ 7:30ಕ್ಕೆ ಪ್ರಾರಂಭವಾಗಲಿರುವ ಮಹಾನಟಿ ಸೀಸನ್ 2 ನಲ್ಲಿ 18-25 ವಯಸ್ಸಿನ 12 ಪ್ರತಿಭಾವಂತ ಯುವತಿಯರು ಭಾಗವಹಿಸಲಿದ್ದಾರೆ. ಇನ್ನು 18 ವಾರಗಳ ಕಾಲ ಇವರಿಗೆ ರಂಗಭೂಮಿ ಕಲಾವಿದರು, ತಾಂತ್ರಿಕ ತಜ್ಞರಿಂದ ತರಬೇತಿ ಸಿಗಲಿದೆ. ನಿಶ್ವಿಕಾ ನಾಯ್ಡು, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಈ ಶೋ ನ ತೀರ್ಪುಗಾರರಾಗಿದ್ದು, ನಟ ರಮೇಶ್ ಅರವಿಂದ್ ಅವರು ಮಾಸ್ಟರ್ ಮೈಂಡ್ ಆಗಿ ಇವರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕನ್ನಡದ ಅಚ್ಚುಮೆಚ್ಚಿನ ನಿರೂಪಕಿ ಈ ಶೋನ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇನ್ನು ಕನಸುಗಳು ಹೇಗೆ ನನಸಾಗುತ್ತೆ ಅನ್ನೋದಕ್ಕೆ ಮಹಾನಟಿ ರಿಯಾಲಿಟಿ ಶೋ ಒಂದು ಉತ್ತಮ ಉದಾಹರಣೆ.‌

ಕರ್ಣ ಧಾರಾವಾಹಿ

ಅನಾಥವಾಗಿ ಬಿದ್ದಿದ್ದ ಮಗುವನ್ನು ಪ್ರತಿಷ್ಠಿತ ಕುಟುಂಬದ ರಾಮಕೃಷ್ಣ ವಸಿಷ್ಠ ಕಸದಬುಟ್ಟಿಯಿಂದ ರಕ್ಷಿಸಿದ ಮಗುವೇ 'ಕರ್ಣ'. ತಾತನಿಗೆ ಕೊಟ್ಟ ಮಾತಿನಂತೆ ದೊಡ್ಡವನಾದ ಮೇಲೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಜನಪ್ರಿಯ ಸ್ತ್ರೀರೋಗ ತಜ್ಞ ಆಗಿರುವ ಈತ ಬಡವರಿಗಾಗಿ ತೋರಿಸುವ ಕಾಳಜಿ, ವೃತ್ತಿಪರ ನಿಷ್ಠೆ ಎಲ್ಲರಿಗೂ ಮಾದರಿಯಾಗಲಿದೆ.

ಇದು 'ಕರ್ಣ' ಕಥೆಯ ಮುಖ್ಯ ಹಂದರವಾಗಿದೆ. ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟ ಕಿರಣ್ ರಾಜ್ ಕರ್ಣನಾಗಿ ಈ ಧಾರಾವಾಹಿಯ ಮೂಲಕ ಮತ್ತೆ ವೀಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೊ ಹಾಗೂ ವಿಶೇಷ ಗೀತೆಯಲ್ಲಿ ಭವ್ಯ ಗೌಡ ಹಾಗೂ ಕಿರಣ್ ರಾಜ್ ಅವರ ಜೋಡಿ ಪ್ರೇಕ್ಷಕರ ಮನ ಗೆದ್ದಿದೆ. ಜೊತೆಗೆ ನಮ್ರತಾ ಗೌಡ ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಂದನವನದ ಹಿರಿಯ ಕಲಾವಿದರಾದ ನಾಗಭರಣ, ಅಶೋಕ್ ಮತ್ತು ಮಹಾಲಕ್ಷ್ಮಿ ವಸಿಷ್ಠ ಈ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದ ಮೂಲಕ ವೀಕ್ಷಕರಿಗೆ ಮತ್ತಷ್ಟು ಮನರಂಜನೆಯನ್ನು ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.