ADVERTISEMENT

ಗಂಧರ್ವ ಕಡಲಹಕ್ಕಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 19:30 IST
Last Updated 15 ನವೆಂಬರ್ 2019, 19:30 IST
   

ಕಡಲಹಕ್ಕಿಗಳಲ್ಲಿಯೇ ಗಂಧರ್ವ ಕಡಲಹಕ್ಕಿಯು ಬಹಳ ಚಿಕ್ಕದಾದ ನೋಡಲು ಆಕರ್ಷಕವಾಗಿರುವ ಹಕ್ಕಿ. ಇದರ ವೈಜ್ಞಾನಿಕ ಹೆಸರು ಸ್ಟರ್ನುಲಾ ನೆರೀಸ್ (Sternula nereis). ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಎಲ್ಲಿದೆ?

ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರಗಳಲ್ಲಿ ಈ ಗಂಧರ್ವ ಕಡಲ ಹಕ್ಕಿಯನ್ನು ನೋಡಬಹುದು. ತಸ್ಮನಿಯಾದ ದಕ್ಷಿಣ ಹಾಗೂ ವಿಕ್ಟೋರಿಯಾದ ಪೂರ್ವ ಕರಾವಳಿ ತೀರದಲ್ಲಿಯೂ ಇದೆ. ಸಾಮಾನ್ಯವಾಗಿ ನ್ಯೂ ಸೌಥ್‌ ವೇಲ್ಸ್‌, ಕ್ವೀನ್ಸ್‌ಲ್ಯಾಂಡ್‌ನ ಉತ್ತರ ಭಾಗ, ನ್ಯೂಜಿಲೆಂಡ್‌ನಲ್ಲಿ ಕಡಲ ಸುತ್ತಮುತ್ತ ಈ ಹಕ್ಕಿ ಹೇರಳವಾಗಿ ಸಿಗುತ್ತದೆ. ಜಲಾನಯ ಪ್ರದೇಶಗಳು, ಸಿಹಿನೀರಿನ ಕೆರೆಗಳು, ಉಪ್ಪು ನೀರಿನ ಕಡಲು ಪ್ರದೇಶಗಳಲ್ಲಿ ವಾಸ ಮಾಡುವುದೆಂದರೆ ಇದಕ್ಕಿಷ್ಟ.

ADVERTISEMENT

ಹೇಗಿದೆ?

ಶುಭ್ರ ಬಿಳಿ ಬಣ್ಣದ ಈ ಹಕ್ಕಿಯು ಕೊಕ್ಕು, ತಲೆ ಹಾಗೂ ರಕ್ಕೆಗಳು ಕಂದು ಮಿಶ್ರಿತ ಕಪ್ಪು– ಬಿಳಿ ಬಣ್ಣದಲ್ಲಿರುತ್ತದೆ. ಕಣ್ಣುಗಳು ತೀಕ್ಷ್ಮವಾಗಿದ್ದು, ಕೊಕ್ಕು ಬಲಿಷ್ಠವಾಗಿರುತ್ತದೆ. ಈ ಕಡಲಹಕ್ಕಿಯು ನೋಟ ಗಂಭೀರವಾಗಿದ್ದು, ಹಾರಾಟ ನಡೆಸುವಾಗ ಮುದ್ದಾಗಿ ಕಾಣುತ್ತದೆ. ಗಂಡು ಮತ್ತು ಹೆಣ್ಣು ಕಡಲಹಕ್ಕಿಗಳು ನೋಡಲು ಒಂದೇ ರೀತಿ ಕಾಣುತ್ತದೆ.

ಆಹಾರ ಪದ್ಧತಿ

ಇದು ಮಾಂಸಾಹಾರಿಯಾಗಿದ್ದು, ಸಾಮಾನ್ಯವಾಗಿ ಮೀನು, ಕಪ್ಪೆಚಿಪ್ಪು, ಸಣ್ಣಪುಟ್ಟ ಸಸಿಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಹಾರಾಟ ನಡೆಸುತ್ತಲೇ ಬೇಟೆಯಾಡುತ್ತದೆ. ಕಡಲಿನ ಮೇಲೆ ಮೂರರಿಂದ ಹತ್ತು ಮೀಟರ್‌ ಎತ್ತರಕ್ಕೆ ಹಾರಾಟ ನಡೆಸುತ್ತದೆ. ಆಮೇಲೆ ನೀರಿನೊಳಗೆ ಇರುವ ಮೀನುಗಳನ್ನು ಸರಾಗವಾಗಿ ತಿಂದು ಮುಗಿಸುವಷ್ಟು ಚಾಣಾಕ್ಷತನದಿಂದ ಬೇಟೆಯಾಡುತ್ತದೆ. ಇವು ಜೋಡಿಯಾಗಿಯೇ ಹಾರಾಟ ನಡೆಸಲು ಇಷ್ಟಪಡುತ್ತದೆ. ಮತ್ತು ಮರದಲ್ಲಿ ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತದೆ. ಹಾಗಂತ ಗೂಡು ಕಟ್ಟಿಕೊಳ್ಳುವುದರಲ್ಲಿ ಇದಕ್ಕೆ ಆಸಕ್ತಿ ಇಲ್ಲ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತದೆ. ಚಳಿಗಾಲದಲ್ಲಿ ತಸ್ಮೇನಿಯಾದಲ್ಲಿದ್ದರೆ, ಬೇಸಿಗೆಯಲ್ಲಿ ಮತ್ತೊಂದು ಕಡೆ ತೆರಳುತ್ತದೆ.

ಸಂತಾನೋತ್ಪತ್ತಿ

ಏಕಸಂಗಾತಿಗೆ ನಿಷ್ಠೆಯಿಂದ ಇರುತ್ತದೆ. ಜೀವನವೀಡಿ ತನ್ನ ಸಂಗಾತಿಯೊಂದಿಗೆ ಅನೂಹ್ಯ ಬಾಂಧವ್ಯವನ್ನು ಇಟ್ಟುಕೊಂಡಿರುತ್ತದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಪ್ರಣಯಕ್ಕೆ ತೆರೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿಯೂ ತನ್ನ ಸಂಗಾತಿಯನ್ನು ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ.ಆಸ್ಟ್ರೇಲಿಯಾ ಭಾಗದಲ್ಲಿ ಈ ಹಕ್ಕಿಯು ಕಾಲೊನಿ ಮಾಡಿಕೊಂಡು ವಾಸಿಸಿದರೆ, ನ್ಯೂಜಿಲೆಂಡ್‌ನಲ್ಲಿ ಗೂಡು ಕಟ್ಟಿಕೊಂಡು ಇರುತ್ತದೆ. ಎರಡು ಮೊಟ್ಟೆಗಳನ್ನು ಇಡುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಯು ಮೊಟ್ಟೆ ಕಾವು ಕೊಡುತ್ತವೆ. 21 ದಿನಗಳ ಕಾವಿ ನಂತರ ಮರಿಗಳು ಹೊರಬರುತ್ತದೆ. 30 ದಿನಗಳವರೆಗೆ ಮರಿಗಳು ಸಂಪೂರ್ಣವಾಗಿ ಪೋಷಕ ಹಕ್ಕಿಗಳ ಅಧೀನದಲ್ಲಿಯೇ ಇರತ್ತದೆ.

ಸ್ವಾರಸ್ಯಕರ ಸಂಗತಿಗಳು

* ಪ್ರಾಣಾಪಾಯ ಎದುರಾದ ಸಂದರ್ಭದಲ್ಲಿ ಮರಿಗಳು ತಮ್ಮನ್ನು ಸಂರಕ್ಷಿಸಿಕೊಳ್ಳುವಷ್ಟು ಚಾಣಾಕ್ಷತನ ಹೊಂದಿರುತ್ತವೆ.

* ಹಾರಿಕೊಂಡೇ ಹಲವು ಕಿ.ಮೀಗಳಷ್ಟು ದೂರ ವಲಸೆ ಹೋಗುತ್ತವೆ.

* ಕಡಲಿನ ಉಪ್ಪು ನೀರೆಂದರೆ ಇದಕ್ಕೆ ಬಹಳ ಇಷ್ಟ

ಜೀವಿತಾವಧಿ-17 ವರ್ಷ, ತೂಕ- 70 ಗ್ರಾಂ,ಉದ್ದ-25 ಸೆಂ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.