ADVERTISEMENT

ವಿದೇಶಿ ಹಕ್ಕಿಗಳ ನಿನಾದ: ಬಂದರೋ ಬಂದರೋ ಕಳ್ಳಿಪೀರರು!

ಕೆ.ಓಂಕಾರ ಮೂರ್ತಿ
Published 12 ಅಕ್ಟೋಬರ್ 2025, 1:26 IST
Last Updated 12 ಅಕ್ಟೋಬರ್ 2025, 1:26 IST
ಯಾರ ಬೇಟೆಗಾಗಿ ಕಾದಿದೆ ಬೀ ಈಟರ್‌...
ಯಾರ ಬೇಟೆಗಾಗಿ ಕಾದಿದೆ ಬೀ ಈಟರ್‌...   

ಒಂದು ಕಾಲದಲ್ಲಿ ಚಿನ್ನದ ಗಣಿ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಕೆಜಿಎಫ್‌ ಈಗ ವಿದೇಶಿ ಹಕ್ಕಿಗಳನ್ನೂ ಆಕರ್ಷಿಸುತ್ತಿದೆ. ಇಲ್ಲಿನ ಅಜ್ಜಪಲ್ಲಿ ಸುತ್ತಮುತ್ತಲಿನ ಗುಡ್ಡ ಪ್ರದೇಶದಲ್ಲಿ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಈ ವಿಶೇಷ ಅತಿಥಿಗಳದ್ದೇ ಚಿಲಿಪಿಲಿ ನಿನಾದ. ಈ ಪ್ರದೇಶ ಈಗ ಪಕ್ಷಿ ಪ್ರಿಯರನ್ನು ಸೂಜಿಕಲ್ಲಿನಂತೆ ಸೆಳೆಯುತ್ತಿದೆ.

ವಿಶೇಷ ಅತಿಥಿಗಳಾಗಿ ಯುರೋಪಿನಿಂದ ಬೀ ಈಟರ್‌ ಪಕ್ಷಿಗಳು ಈ ಪ್ರದೇಶಕ್ಕೆ ವಲಸೆ ಬಂದಿವೆ. ಇವುಗಳನ್ನು ‘ಯೂರೋಪಿಯನ್‌ ಬೀ ಈಟರ್‌’ ಎಂದೇ ಕರೆಯುತ್ತಾರೆ. ಜೇನು ಹುಳುಗಳನ್ನು ಇಷ್ಟಪಡುವುದರಿಂದ ಕನ್ನಡದಲ್ಲಿ ‘ಜೇನುಹಿಡುಕ’, ‘ಜೇನ್ನೊಣ ಬಾಕ’, ‘ಕಳ್ಳಿಪೀರ’ ಎಂದೂ ಕರೆಯುತ್ತಾರೆ. ಹಾರಾಟದಲ್ಲಿರುವಾಗಲೇ ಬೇಟೆಯಾಡುವುದು ಇವುಗಳ ವಿಶೇಷ.

ಈ ಕಳ್ಳಿಪೀರರು ಬೆಣಚು ಕಲ್ಲು ಮಿಶ್ರಿತ ಕೆಂಪು ಮಣ್ಣು ಹೊಂದಿರುವ ಬಂಗಾರದ ಗಣಿ ಪ್ರದೇಶಕ್ಕೆ ಸೆಪ್ಟೆಂಬರ್‌ ವೇಳೆಗೆ ಬಂದು ನವೆಂಬರ್‌ ಮಧ್ಯಭಾಗದವರೆಗೆ ಇದ್ದು ಹೋಗುತ್ತವೆ. ನಂತರ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮೂಲಕ ತಮ್ಮ ಮೂಲ ಸ್ಥಾನಕ್ಕೆ ಮರಳುತ್ತವೆ. ಪ್ರತಿ ವರ್ಷ ತಪ್ಪದೆ ಅದೇ ಸ್ಥಳಕ್ಕೆ ಕರಾರುವಾಕ್ಕಾಗಿ ನಿರ್ದಿಷ್ಟ ದಾರಿಯನ್ನು ಅನುಸರಿಸಿ ಸಾವಿರಾರು ಕಿಲೋ ಮೀಟರ್‌ ಪ್ರಯಾಣ ಮಾಡಿ ತಲುಪುತ್ತವೆ. ಇದು ಪ್ರಕೃತಿಯ ಸೋಜಿಗ ಕೂಡ. ಪಕ್ಷಿಗಳು ಒಂದು ಪರಿಸರದ ಆರೋಗ್ಯ ನಿರ್ಧರಿಸುವ ಜೈವಿಕ ಸೂಚಕಗಳು ಎನ್ನುತ್ತಾರೆ ಪಕ್ಷಿ ತಜ್ಞರು.

ADVERTISEMENT

ಕೆಜಿಎಫ್‌ ತಾಲ್ಲೂಕಿನ ಬೇತಮಂಗಲ ಜಲಾಶಯ, ಕೃಷ್ಣಮೃಗಗಳು ವಾಸ ಮಾಡುತ್ತಿರುವ ಬಿಜಿಎಂಎಲ್ ಪ್ರದೇಶ ಮತ್ತು ಐಸಂದ್ರ ಮಿಟ್ಟೂರು ಗ್ರಾಮದ ಬಳಿ ಆಗಾಗ್ಗೆ ವಿದೇಶಿ ಹಕ್ಕಿಗಳು ಕಾಣಸಿಗುತ್ತವೆ. ಆದರೆ ಬೀ ಈಟರ್‌ಗಳು ಮೂರು ವರ್ಷಗಳಿಂದ ಒಂದೇ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಿವೆ. ವಿದೇಶಿ ಪಕ್ಷಿಗಳಲ್ಲದೆ; ದೇಶದ ಉತ್ತರ ಭಾಗದಿಂದಲೂ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ. ಹೀಗಾಗಿ, ಈ ಪ್ರದೇಶದ ಈಗ ಪಕ್ಷಿ ಪ್ರಿಯರಿಗೆ ಹಾಗೂ ಫೋಟೊಗ್ರಾಫರ್‌ಗಳಿಗೆ ಹಬ್ಬದ ಸಮಯ.

ಬೀ ಈಟರ್‌ಗಳು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಯುರೋಪ್‌ನಿಂದ ವಲಸೆ ಬಂದು ಸಾಮಾನ್ಯವಾಗಿ ಒಂದೇ ಕಡೆ ಎರಡರಿಂದ ಮೂರು ತಿಂಗಳು ಇರುತ್ತವೆ.

ಬಂಗಾರದ ಗಣಿ ಪ್ರದೇಶದ ಅಜ್ಜಪಲ್ಲಿ ಸುತ್ತಮುತ್ತಲಿನ ಸಣ್ಣಗುಡ್ಡಗಳ ಮರಗಳಲ್ಲಿ, ರೈತರ ಜಮೀನಿನ ನೀಲಗಿರಿಮರಗಳಲ್ಲಿ ಮತ್ತು ಹೈಟೆನ್ಷನ್‌ ತಂತಿಗಳ ಮೇಲೆ ಈ ಪಕ್ಷಿಗಳು ಕುಳಿತಿರುತ್ತವೆ. ದಟ್ಟವಾದ ನೀಲಗಿರಿ ತೋಪಿನಲ್ಲಿ ಆಶ್ರಯ ಪಡೆಯುತ್ತವೆ.

ಕೆಜಿಎಫ್‌ನಲ್ಲಿ ಧ್ಯಾನಸ್ಥ ಬೀ ಈಟರ್‌ ಚಿತ್ರಗಳು: ಶಂಕರ್‌

ಬೀ ಈಟರ್‌ ಹೆಸರೇ ಸೂಚಿಸುವಂತೆ ಕೀಟಗಳೇ ಪ್ರಮುಖ ಆಹಾರ. ಚಿಟ್ಟೆ, ಜೇನ್ನೊಣ, ದುಂಬಿ, ಡ್ರ್ಯಾಗನ್ ಫ್ಲೈ, ಮಿಡತೆಗಳನ್ನು ಇಷ್ಟಪಡುತ್ತವೆ. ಹಾರುತ್ತಿರುವ ಕೀಟಗಳನ್ನು ಗುರುತಿಸಿ ಕೊಕ್ಕಿನಲ್ಲಿ ಭದ್ರವಾಗಿ ಹಿಡಿದು ಮರದ ಕೊಂಬೆ ಅಥವಾ ತಂತಿಯ ಮೇಲೆ ಕುಳಿತು ತಿನ್ನುತ್ತವೆ.

ಪಕ್ಷಿ ತಜ್ಞರಿಗೆ, ವೀಕ್ಷಕರಿಗೆ ಮತ್ತು ಅಧ್ಯಯನಶೀಲರಿಗೆ ಇದು ಸಕಾಲ. ವಿದೇಶ ಅತಿಥಿಗಳನ್ನು ಸೆರೆ ಹಿಡಿಯಲು ವಿವಿಧ ರಾಜ್ಯಗಳಿಂದಲೂ ಫೋಟೊಗ್ರಾಫರ್‌ಗಳು ಬರುತ್ತಾರೆ. ನಸುಕಿನಲ್ಲೇ ಈ ಪ್ರದೇಶದಲ್ಲಿ ಓಡಾಡುತ್ತಾ ಪಕ್ಷಿಗಳ ಚಲನವಲನ ಸೆರೆ ಹಿಡಿದು ಸಂಭ್ರಮಿಸುತ್ತಾರೆ. ಕೀಟ ಹಿಡಿಯುವ ಕ್ಷಣ, ಜೋಡಿಯಾಗಿ ಕುಳಿತು ಚೆಲ್ಲಾಟ ಆಡುವ ಸಂದರ್ಭ, ಲಾಲನೆ, ವಿವಿಧ ಭಂಗಿಗಳನ್ನು ಸೆರೆಹಿಡಿಯಲು ಕಸರತ್ತು ನಡೆಸುವುದನ್ನು ಕಾಣಬಹುದು.

ಪಕ್ಷಿ ಪ್ರಿಯರು ಕೂಡ ತಮ್ಮ ಮಕ್ಕಳನ್ನು ಕರೆದುಕೊಂಡು ಈ ಪ್ರದೇಶದಲ್ಲಿ ಅಲೆದಾಡುತ್ತ ವಿವರಿಸುವುದು ಸಾಮಾನ್ಯ. ಬೀ ಈಟರ್‌ಗಳು ಸಾಮಾನ್ಯವಾಗಿ ಶಾಂತ ಪ್ರದೇಶ ಬಯಸುತ್ತವೆ. ಸೂರ್ಯ ಮರೆಯಾಗುತ್ತಿದ್ದಂತೆ ಗಿಡಮರಗಳ ಕೊಂಬೆ, ಪೊದೆಗಳ ಮೊರೆ ಹೋಗುತ್ತವೆ. ರಾತ್ರಿ ವೇಳೆ ಮರದ ಕೊಂಬೆಗಳಲ್ಲೇ ವಿಶ್ರಾಂತಿ ಪಡೆಯುತ್ತವೆ, ನಿದ್ರಿಸುತ್ತವೆ. ಗಂಡು, ಹೆಣ್ಣು ಹಾಗೂ ಮರಿ ಹಕ್ಕಿಗಳು ವಿವಿಧ ಬಣ್ಣ ಹೊಂದಿರುತ್ತವೆ.

ಯುರೋಪ್ ಖಂಡದ ಬೀ ಈಟರ್ ಪಕ್ಷಿಯು ಸಾಮಾನ್ಯವಾಗಿ ಕುರುಚಲು ಪ್ರದೇಶದ ಬಯಲು ತಪ್ಪಲನ್ನು ಬಯಸುತ್ತದೆ. ಈ ಅವಧಿಯಲ್ಲಿ ಯುರೋಪಿನಲ್ಲಿನ ಚಳಿ, ಮಳೆ ತಡೆಯಲಾರದೆ ಈ ಪಕ್ಷಿಗಳು ಇಂಥ ಪ್ರದೇಶ ಹುಡುಕಿಕೊಂಡು ಬರುತ್ತವೆ. ಏಕೆಂದರೆ ಅಲ್ಲಿ ಈ ಅವಧಿಯಲ್ಲಿ ತಮಗೆ ಬೇಕಾದ ಆಹಾರ ಸಿಗುವುದಿಲ್ಲ. ಜೊತೆಗೆ ವಲಸೆ ಬಂದಿರುವ ಈ ಪ್ರದೇಶ ಸುರಕ್ಷಿತ ಎಂಬ ವಿಚಾರವೂ ಅವುಗಳಿಗಿದೆ. ಅವಶ್ಯಕ್ಕೆ ತಕ್ಕಂತೆ ವಲಸೆ ಹೋಗುತ್ತವೆ ಎಂದು ಪಕ್ಷಿ ಪ್ರಿಯ ಫೋಟೊಗ್ರಾಫರ್ ಶಂಕರ್‌ ತಿಳಿಸಿದರು.

ಕೆಜಿಎಫ್‌ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕರ್‌ ಸುಮಾರು ಐದು ವರ್ಷಗಳಿಂದ ಪಕ್ಷಿಗಳ ಚಲನವಲನ ಸೆರೆ ಹಿಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ 272 ಪಕ್ಷಿ ಪ್ರಭೇದಗಳಿವೆ ಎನ್ನುತ್ತಾರೆ. ಕರ್ತವ್ಯದ ಜೊತೆ ಫೋಟೊಗ್ರಫಿ ಹವ್ಯಾಸ ಹೊಂದಿರುವ ಅವರು ಕೆಜಿಎಫ್‌ಗೆ ವಲಸೆ ಬಂದಿರುವ ಪಕ್ಷಿಗಳ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬೀ ಈಟರ್‌ಗಳು ತಮಗೆ ಬೇಕಾದ ಕೀಟ ಆಹಾರ ಹುಡುಕಿಕೊಂಡು ಎಲ್ಲಿಗೆ ಹೋಗಲೂ ಸಿದ್ಧ ಎನ್ನುತ್ತಾರೆ.

ಯೂರೋಪ್‌ನಿಂದ ಕೆಜಿಎಫ್‌ಗೆ ವಲಸೆ ಬಂದಿರುವ ಬೀ ಈಟರ್‌ಗಳು 
ಹೈಟೆನ್ಷನ್‌ ತಂತಿಗಳ ಮೇಲೆ ಕುಳಿತಿರುವ ಬೀ ಈಟರ್‌ಗಳು

ಕೈಗಾರಿಕೆಗೆ ಮೀಸಲು–ಪಕ್ಷಿ ಪ್ರಿಯರ ಆತಂಕ

ಕೆಜಿಎಫ್‌ನ ಬಂಗಾರದ ಗಣಿಯ ಈ ಜಾಗವನ್ನು ಕೈಗಾರಿಕಾ ಪ್ರದೇಶಕ್ಕೆಂದು ಮೀಸಲು ಇಡಲಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ಬಂದರೆ ಹಕ್ಕಿಗಳ ವಲಸೆ ನಿಲ್ಲಬಹುದು ಎಂಬುದು ಪಕ್ಷಿ ಪ್ರಿಯರ ಹಾಗೂ ಪಕ್ಷಿ ತಜ್ಞರ ಆತಂಕ. ಹೀಗಾಗಿ ಸುತ್ತಮುತ್ತಲಿನ ಜಾಗವನ್ನು ಸಂರಕ್ಷಿಸಬೇಕು ಎಂಬ ಕೂಗು ಎದ್ದಿದೆ. ಈಗಾಗಲೇ ಕೆಲ ಭಾಗದಲ್ಲಿ ನೀಲಗಿರಿ ಮರ ಕತ್ತರಿಸಲಾಗಿದೆ. ಹೀಗಾಗಿ ಹಕ್ಕಿಗಳು ಆಶ್ರಯ ಪಡೆಯಲು ತೊಂದರೆ ಆಗತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.