ADVERTISEMENT

ಆಕರ್ಷಕ ಕುತ್ತಿಗೆಯ ಚೈನೀಸ್‌ ರೂಬಿ ಥ್ರೋಟ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:11 IST
Last Updated 25 ಡಿಸೆಂಬರ್ 2018, 17:11 IST
ಚೈನೀಸ್‌ ರೂಬಿ ಥ್ರೋಟ್ ಹಕ್ಕಿ
ಚೈನೀಸ್‌ ರೂಬಿ ಥ್ರೋಟ್ ಹಕ್ಕಿ   

ಹಲವು ಪಕ್ಷಿಗಳು ದೇಹದ ಬಣ್ಣ, ಆಕರ್ಷಕ ದೇಹ ರಚನೆಯಿಂದ ಗಮನ ಸೆಳೆಯುತ್ತದೆ. ಅಂತಹ ಪಕ್ಷಿಗಳಲ್ಲಿಚೈನೀಸ್‌ ರೂಬಿ ಥ್ರೋಟ್ ಪಕ್ಷಿ ಸಹ ಒಂದು. ಈ ಪಕ್ಷಿ ಪುಟ್ಟ ಗಾತ್ರದಿಂದ ಕೂಡಿದ್ದು, ಆಕರ್ಷಕ ಬಣ್ಣಗಳಿಂದ ಗಮನ ಸೆಳೆಯುತ್ತದೆ. ಇದರ ಕುತ್ತಿಗೆ ಭಾಗದಲ್ಲಿರುವ ಕೆಂಪು ಬಣ್ಣ ಆಕರ್ಷಕವಾಗಿ ಕಾಣಿಸುತ್ತದೆ.

ಇದು ಮಸ್ಸಿಕಾಪಿಡೆ (Muscicapidae) ಎನ್ನುವ ಕುಟುಂಬಕ್ಕೆ ಸೇರಿದೆ.

ಇದರ ವೈಜ್ಞಾನಿಕ ಹೆಸರು ಕ್ಯಾಲಿಯೊಪ್ಟ್ಚೇಬಾಯೆವಿ (Calliope tschebaiewi). ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ADVERTISEMENT

ಹೇಗಿರುತ್ತದೆ?

ಇದು ಕೆಂಪು, ಬಿಳಿ, ಬೂದು, ಹಸಿರು ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಕತ್ತಿನ ಭಾಗದಲ್ಲಿ ತ್ರಿಕೋನಾಕಾರದಲ್ಲಿ ಕೆಂಪು ಬಣ್ಣ
ದಿಂದ ಕೂಡಿರುತ್ತದೆ. ಹೊಟ್ಟೆ ಮತ್ತು ಕತ್ತಿನ ಮಧ್ಯ ಭಾಗದಲ್ಲಿ ಕಪ್ಪು ಮತ್ತು ಕೆಂಪು ಬಣ್ಣದಲ್ಲಿದ್ದು, ದೇಹದ ಉದರ ಭಾಗ ಸೇರಿದಂತೆ ಉಳಿದ ಭಾಗ ತಿಳಿ ಹಸಿರು ಬೂದು ಮತ್ತು ಬಿಳಿ ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಗಳು ಕಪ್ಪು, ಗಾಢ ಬೂದು ಮತ್ತು ಬಿಳಿ ಬಣ್ಣದಿಂದ ಕೂಡಿರುತ್ತದೆ. ಸಣ್ಣ ಕೊಕ್ಕೆಯನ್ನು ಹೊಂದಿದ್ದು, ಕಪ್ಪು ಬಣ್ಣದಿಂದ
ಕೂಡಿರುತ್ತದೆ.

ಎಲ್ಲೆಲ್ಲಿದೆ

ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ರಷ್ಯಾಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಆಹಾರ

ಇದು ಮಿಶ್ರಹಾರಿ ಪಕ್ಷಿಯಾಗಿದೆ. ಸರೀಸೃಪ, ಜೇರುಂಡೆ, ಇರುವೆ, ಸಣ್ಣ ಕೀಟ ಮತ್ತು ಹಣ್ಣುಗಳನ್ನು ತಿಂದು ಜೀವಿಸುತ್ತದೆ.

ಜೀವನ ಕ್ರಮ ಮತ್ತು ವರ್ತನೆ

ಬಂಡೆಗಳ ಮೇಲೆ ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತದೆ. ಇವುಗಳಲ್ಲಿ ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಹೆಚ್ಚಿನ ವೆತ್ಯಾಸ ಕಾಣಿಸುವುದಿಲ್ಲ. ವಲಸೆ ಹೋಗುವ ಪ್ರವೃತ್ತಿಯನ್ನು ಹೊಂದಿದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಇದು ತನ್ನ ವಾಸಸ್ಥಾನವನ್ನು ಬದಲಾಯಿಸುತ್ತದೆ.ಬಹುತೇಕ ಸಮಯ ಒಂಟಿಯಾಗಿಯೇ ಕಳೆಯುತ್ತದೆ.

ಸಂತಾನೋತ್ಪತ್ತಿ

ಇದುಅತ್ಯಂತ ಜಾಣ್ಮೆಯಿಂದ ಹೆಣ್ಣು ಪಕ್ಷಿ ಗೂಡು ಕಟ್ಟುತ್ತದೆ.ಮೇ ಮತ್ತು ಆಗಸ್ಟ್‌ ತಿಂಗಳು ಇದರ ಗರ್ಭಾವಸ್ಥೆಗೆ ಪ್ರಶಸ್ತವಾಗಿರುತ್ತವೆ.ಇದು ಒಂದು ಬಾರಿಗೆ 4 ರಿಂದ 6 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಎರಡು ವಾರಗಳ ಅಂತರದಲ್ಲಿ ಮರಿಗಳಾಗುತ್ತವೆ. ಈ ಪಕ್ಷಿಯ ಮೊಟ್ಟೆಗಳು ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿದ್ದು, ಆಕರ್ಷಕವಾಗಿ ಕಾಣಿಸುತ್ತದೆ. ಮರಿಗಳ ರಕ್ಷಣೆ ಮತ್ತು ಪೋಷಣೆಯಲ್ಲಿ ಪೋಷಕ ಪಕ್ಷಿಗಳು ಹೆಚ್ಚು ಕಾಳಜಿ ವಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.