
ದೆಹಲಿಯ ರಾಷ್ಟ್ರೀಯ ಜುವಾಲಜಿಕಲ್ ಪಾರ್ಕ್‌ನಲ್ಲಿ ಬಿಳಿ ಹುಲಿಯೊಂದಿಗೆ ಮರಿಗಳ ಚಿಣ್ಣಾಟ
ಸಂಗ್ರಹ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯ ಆಕರ್ಷಣಾ ಕೇಂದ್ರಗಳಲ್ಲಿ ಒಂದಾದ ರಾಷ್ಟ್ರೀಯ ಜುವಾಲಜಿಕಲ್ ಪಾರ್ಕ್ ₹ 400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲು ಸಜ್ಜಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ಸಹ ನೀಡಿದೆ.
ಯೋಜನೆಯಡಿ ಪ್ರವೇಶ ದ್ವಾರ, ಪ್ರವಾಸಿಗರ ಸುಗಮ ಸಂಚಾರ, ಪಾರ್ಕಿಂಗ್, ಪ್ರಾಣಿಗಳ ವಾಸಸ್ಥಾನ, ಪಶುವೈದ್ಯಕೀಯ ವ್ಯವಸ್ಥೆ ಮೇಲ್ದರ್ಜೆಗೆ ಏರಲಿದೆ. ಫೆಬ್ರುವರಿಯಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ಈ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇನ್ನೂ ಅನುಮತಿ ನೀಡಬೇಕಿದೆ.
ಯೋಜನೆಯಲ್ಲಿ ರಿಲಯನ್ಸ್‌ನ ‘ಗ್ರೀನ್ ಜುವಾಲಜಿಕಲ್ ರೆಸ್ಕ್ಯೂ ಅಂಡ್ ರೀಹ್ಯಾಬಿಟೇಷನ್ ಸೆಂಟರ್‘ ಸಲಹೆಗಾರನ ರೀತಿ ಕೆಲಸ ಮಾಡಲಿದೆ. ಈ ಸಂಸ್ಥೆ ನೀಡಿರುವ ಸಲಹೆಗಳನ್ನು ಅಭಿವೃದ್ಧಿ ಕಾರ್ಯದಲ್ಲಿ ಬಳಸಿಕೊಳ್ಳಲಾಗಿದೆ.
ಮೃಗಾಲಯದ ಮುಖ್ಯ ದ್ವಾರ, ಪ್ರವಾಸಿಗರು ಆಗಮಿಸುವ ಮತ್ತು ತೆರಳುವ ಪ್ರದೇಶ, ಪ್ರವಾಸಿ ಮಾಹಿತಿ ಕೇಂದ್ರ, ವಾಹನ ನಿಲುಗಡೆಯಲ್ಲಿ ಸುಮಾರು 800 ಕಾರಿಗೆ ನಿಲುಗಡೆ, 50 ಬಸ್ ಮತ್ತು ಸಾವಿರ ದ್ವಿಚಕ್ರ ವಾಹನಗೆ ಅವಕಾಶವಿರುತ್ತದೆ.
ಹಳೆಯ ಮಾದರಿಯ ಟಿಕೆಟ್ ವಿತವಣೆ ಬದಲು ಆಧುನಿಕ ಟಿಕೆಟ್ ವಿತರಣಾ ವ್ಯವಸ್ಥೆ ಇರಲಿದೆ. ಒಳಾಂಗಣದಲ್ಲಿ ಜನಸಂದಣಿ ತಪ್ಪಿಸಲು ವಾಹನ ವ್ಯವಸ್ಥೆಯೂ ಇರಲಿದೆ. ಪ್ರಾಣಿಗಳ ವೀಕ್ಷಣಾ ವ್ಯವಸ್ಥೆಯೂ ಆಧುನಿಕವಾಗಿರಲಿದೆ. ಪ್ರಾಣಿಗಳ ವೀಕ್ಷಣೆಯ ಜೊತೆಯಲ್ಲಿ ವೀಕ್ಷಕರಿಗೆ ಭದ್ರತೆಗೂ ಒತ್ತು ನೀಡಲಾಗುತ್ತದೆ. ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ವಹಿಸಲು ವೈದ್ಯಕೀಯ ಸೌಲಭ್ಯಕ್ಕೆ ಆದ್ಯತೆ ನೀಡುವುದು ಸಹ ಯೋಜನೆಯಲ್ಲಿ ಸೇರಿದೆ.
ಈ ಮೃಗಾಲಯದ ಆಸ್ಪತ್ರೆಗೂ ಆಧುನಿಕತೆಯ ಗಾಳಿ ಬೀಸಲಿದೆ. ಪ್ರಾಣಿಗಳ ವಿಶೇಷ ಆರೈಕೆಗಾಗಿ ಆಸ್ಪತ್ರೆಯು ಈಗಿರುವ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ. ಅಂತರರಾಷ್ಟ್ರೀಯ ಮಟ್ಟಕ್ಕೆ ಪ್ರಾಣಿಗಳ ಆಸ್ಪತ್ರೆಯ ಗುಣಮಟ್ಟಕ್ಕೆ ಏರಿಸಲು ಆಧುನಿಕ ಮತ್ತು ನವೀನ ತಂತ್ರಜ್ಞಾನಗಳನ್ನು ಅಳವಡಿಸುವ ಯೋಜನೆಯಿದೆ.
ಮೃಗಾಲಯಕ್ಕೆ ಹೊಸತನ ತರುವ ಉದ್ದೇಶದಿಂದ ದೆಹಲಿ ಮೃಗಾಲಯ ಮತ್ತು ಗ್ರೀನ್ ಜುವಾಲಜಿಕಲ್ ರೆಸ್ಕ್ಯೂ ಅಂಡ್ ರೀಹ್ಯಾಬಿಟೇಷನ್ ಸೆಂಟರ್ ಜೊತೆ ಕಳೆದ ವರ್ಷವೇ ಒಪ್ಪಂದ ಏರ್ಪಟ್ಟಿತ್ತು. ಇದರಲ್ಲಿ ಪ್ರಾಣಿಗಳ ಸಂರಕ್ಷಣಾ ಯೋಜನೆ, ಪುನರ್ವಸತಿ ಹಾಗೂ ಆಧುನಿಕ ಪೋಷಣಾ ಜ್ಞಾನ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಜಧಾನಿಯ 180 ಎಕರೆ ಪ್ರದೇಶದಲ್ಲಿ ಆವರಿಸಿರುವ ಮೃಗಾಲಯವನ್ನು 1957ರಲ್ಲಿ ಆರಂಭಿಸಲಾಗಿದೆ. ಇದರಲ್ಲಿ 38 ವಿವಿಧ ಬಗೆಯ ಸಸ್ತನಿಗಳಿದ್ದು, 156 ವಿವಿಧ ಬಗೆಯ ಮೃಗಾಲಯದಲ್ಲೇ ಜನಿಸಿರುವ ಮರಿಗಳು ನೋಡುಗರನ್ನು ಆಕರ್ಷಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.