
ಅಳಿವಿನಂಚಿನಲ್ಲಿರುವ ಜೀವಿಗಳ ರಕ್ಷಣೆ ಹಾಗೂ ಅಳಿದುಹೋಗಿದ್ದ ಪ್ರಾಣಿಗಳನ್ನು ದೇಶದಲ್ಲಿ ಮರುಪರಿಚಯಿಸುವ ಉದ್ದೇಶದ ಭಾರತ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಆರಂಭಿಕ ಸವಾಲುಗಳನ್ನೂ ಮೀರಿ ಯಶಸ್ವಿಯಾಗಿವೆ. ಪರಿಣಾಮ ಸಿಂಹ, ಘೇಂಡಾಮೃಗ ಹಾಗೂ ಚೀತಾಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಯಾಗಿದೆ
ಪ್ರಾಜೆಕ್ಟ್ ಚೀತಾ
ಪ್ರಾಜೆಕ್ಟ್ ಲಯನ್
ಘೇಂಡಾಮೃಗ ಸಂರಕ್ಷಣೆಗೆ ‘ಭಾರತದ ಮಾದರಿ’
ಭಾರತದಲ್ಲಿ ನಶಿಸಿಹೋಗಿದ್ದ ಚೀತಾ ಸಂತತಿಯನ್ನು ಮತ್ತೆ ಅಭಿವೃದ್ಧಿಪಡಿಸಲು, ‘ಪ್ರಾಜೆಕ್ಟ್ ಚೀತಾ’ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ನಮಿಬೀಯಾದಿಂದ 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ತಂದು, ಕುನೊ ರಾಷ್ಟ್ರೀಯ ಉದ್ಯಾನಕ್ಕೆ 2022ರ ಸೆ.17ರಂದು ಬಿಡಲಾಗಿತ್ತು. ಇದರೊಂದಿಗೆ ಚೀತಾ ಸಂರಕ್ಷಣೆ ಮತ್ತು ತಳಿಸಂವರ್ಧನೆಯ ಬಯಕೆ ಮತ್ತಷ್ಟು ಗರಿಗೆದರಿತು. ಇವುಗಳ ಪೈಕಿ ಕೆಲ ಚೀತಾಗಳು ಮರಿಗಳಿಗೆ ಜನ್ಮ ನೀಡಿವೆ. ಸದ್ಯ ಭಾರತದಲ್ಲಿ 35 ಚೀತಾಗಳಿವೆ.
ಚೀತಾಗಳು ಪ್ರಸ್ತುತ ಸೆಂಟ್ರಲ್ ಇರಾನ್ ನಲ್ಲೂ ಇವೆ. ಅಲ್ಲಿ ಈಗ ಉಳಿದಿರುವ 40-50 ಚೀತಾಗಳನ್ನು ಪ್ರೋಟೆಕ್ಟೆಡ್ ಅನಿಮಲ್ಸ್ (ಸಂರಕ್ಷಿತ ಪ್ರಾಣಿ) ಎಂದು ಅಲ್ಲಿನ ಸರ್ಕಾರ ಘೋಷಿಸಿದ್ದು ಅವುಗಳನ್ನು ಜಾಗೃತೆಯಿಂದ ರಕ್ಷಿಸುತ್ತಿದೆ. ಪ್ರಸ್ತುತ ಪ್ರಪಂಚದಾದ್ಯಂತ 6,674 ಚೀತಾಗಳಿವೆ. ಇವುಗಳಲ್ಲಿ ಹೆಚ್ಚಿನ ಭಾಗ ಆಫ್ರಿಕಾದ ಬಯಲು ಹಾಗೂ ಹುಲ್ಲುಗಾವಲುಗಳಲ್ಲಿ ವಾಸಿಸುತ್ತಿವೆ.
ಪ್ರಪಂಚದಲ್ಲಿಯೇ ಏಷ್ಯಾ ಜಾತಿ ಮತ್ತು ಆಫ್ರಿಕಾ ಜಾತಿಯ ಚೀತಾ ಗಳಿವೆ. ಪ್ರಸ್ತುತ ಏಷ್ಯಾ ಜಾತಿಯ ಚೀತಾಗಳು ಅಳಿದುಹೋಗುವ ಪ್ರಭೇದಗಳಲ್ಲಿ ಒಂದಾಗಿವೆ. ಇರಾನ್ ನಂತಹ ದೇಶಗಳಲ್ಲಿ ಇವುಗಳನ್ನು ಸಂರಕ್ಷಿಸಲಾಗುತ್ತಿದೆ. ಅಲ್ಲಿನ ಜನ ಇವುಗಳನ್ನು ಬೇಟೆಗಾಗಿ ಬಳಸುತ್ತಾರೆ. ಆಫ್ರಿಕನ್ ಚೀತಾಗಳು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಬೋಟ್ಸ್ವಾನಗಳಲ್ಲಿ ವಾಸಿಸುತ್ತಿವೆ.
ಸಣ್ಣಗೆ ಉದ್ದವಾಗಿ ಇರುವಂತಹ ಚೀತಾ ಬೆಕ್ಕಿನ ಜಾತಿಗೆ ಸೇರಿದಂತಹ ದೊಡ್ಡ ಪ್ರಾಣಿಗಳಲ್ಲಿ ಒಂದಾಗಿದೆ. ಇದು ಸುಮಾರು 70 ಕೆ.ಜಿ ತೂಕವಿದ್ದು, ಎಂತಹ ವಾತಾವರಣ ಪರಿಸ್ಥಿತಿಯಲ್ಲಾದರೂ ವಾಸಿಸುತ್ತವೆ.ಇವುಗಳ ಕಣ್ಣಿನ ರೆಪ್ಪೆಯ ಕೂದಲು ಉದ್ದವಾಗಿದ್ದು ಸೂರ್ಯನ ಬೆಳಕಿನಿಂದ ಅವುಗಳ ಕಣ್ಣುಗಳಿಗೆ ರಕ್ಷಣೆ ನೀಡಿ ತನ್ನ ಬೇಟೆಯನ್ನು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ.
ಸಿಂಹಗಳನ್ನು ಸಂರಕ್ಷಿಸುವ ಸಂಬಂಧ 2020ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಅವಧಿಯ ‘ಪ್ರಾಜೆಕ್ಟ್ ಲಯನ್’ಗೆ ಚಾಲನೆ ನೀಡಿದ್ದಾರೆ. ಸಿಂಹಗಳ ಆವಾಸವನ್ನು ವಿಸ್ತರಿಸುವ ಉಲ್ಲೇಖಗಳು ಈ ಯೋಜನಾ ವರದಿಯಲ್ಲಿ ಇದೆ. ಇದಕ್ಕಾಗಿ ಸಂಭಾವ್ಯ ಆರು ಪ್ರದೇಶಗಳನ್ನು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ(ಶೇ 32.2 ರಷ್ಟು) ಗಣನೀಯವಾಗಿ ಏರಿಕೆಯಾಗಿದೆ. 2020ರಲ್ಲಿ ದೇಶದಲ್ಲಿ 674 ಸಿಂಗಳಿದ್ದವು. 2025ರಲ್ಲಿ ಅವುಗಳ ಸಂಖ್ಯೆ 891ಕ್ಕೆ ಏರಿಕೆಯಾಗಿದೆ.
2025 ಮಾರ್ಚ್ ಹೊತ್ತಿಗೆ, ಭಾರತದಲ್ಲಿ ಒಂಟಿ ಕೊಂಬಿನ ಘೇಂಡಾಮೃಗಳ ಸಂಖ್ಯೆ ಅಂದಾಜು 3,323 ಆಗಿತ್ತು. ಜಾಗತಿಕವಾಗಿ ಅವುಗಳ ಸಂಖ್ಯೆ (ನೇಪಾಳ ಸೇರಿದಂತೆ) ಸುಮಾರು 4,075.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅತಿ ಹೆಚ್ಚು ಘೇಂಡಾಮೃಗಗಳಿವೆ. ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಇವುಗಳ ಸಂಖ್ಯೆ ಕಡಿಮೆ ಇದೆ.
ಬೇಟೆಯ ಕಾರಣಕ್ಕೆ ಅಳಿವಿನ ಅಂಚಿಗೆ ಘೇಂಡಾಮೃಗಳ ಸಂರಕ್ಷಣೆ ಪ್ರಕ್ರಿಯೆಗೆ ‘ಭಾರತ ಮಾದರಿ’ ರೂಪಿಸಲಾಗಿದೆ.
ಸೆಪ್ಟೆಂಬರ್ 22 ವಿಶ್ವ ಘೇಂಡಾಮೃಗ ದಿನ. ಇದರ ಭಾಗವಾಗಿ ಕೇಂದ್ರ ಸರ್ಕಾರವು 2024ರಲ್ಲಿ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಒಂಟಿ ಕೊಂಬಿನ ಘೇಂಡಾಮೃಗ ಸಂರಕ್ಷಣೆಯಲ್ಲಿ ಭಾರತವು ಕೈಗೊಂಡ ಕ್ರಮಗಳ ಕುರಿತು ಅದರಲ್ಲಿ ಮಾಹಿತಿಗಳಿವೆ. 1960ರ ಹೊತ್ತಿಗೆ 600ರಷ್ಟಿದ್ದ ಒಂಟಿ ಕೊಂಬಿನ ಘೇಂಡಾಮೃಗಗಳ ಸಂಖ್ಯೆಯು 2024ರ ಹೊತ್ತಿಗೆ 4,000 ದಾಟಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಪ್ರದೇಶವು ಒಂಟಿ ಕೊಂಬಿನ ಘೇಂಡಾಮೃಗಗಳ ಆವಾಸಸ್ಥಾನ. ಅಸ್ಸಾಂ ಮಾತ್ರವಲ್ಲದೆ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಈ ಘೇಂಡಾಮೃಗದ ಆವಾಸವಿದೆ. ಭಾರತ ಮಾತ್ರವಲ್ಲದೆ ನೇಪಾಳ ಹಾಗೂ ಭೂತಾನ್‌ನಲ್ಲಿಯೂ ಒಂಟಿ ಕೊಂಬಿನ ಘೇಂಡಾಮೃಗಗಳು ಕಾಣಸಿಗುತ್ತವೆ. ಈ ದೇಶಗಳಲ್ಲಿ ಬಿಟ್ಟು ಬೇರೆಯಲ್ಲೂ ಈ ಪ್ರಬೇಧದ ಘೇಂಡಾಮೃಗಗಳಿಲ್ಲ.
1897ರ ಅಸ್ಸಾಂ ಅರಣ್ಯ ಸಂರಕ್ಷಣೆ ಕಾಯ್ದೆ, 1932ರ ಬಂಗಾಳ ಘೇಂಡಾಮೃಗ ಸಂರಕ್ಷಣೆ ಕಾಯ್ದೆ, 1954ರ ಅಸ್ಸಾಂ ಘೇಂಡಾಮೃಗ ಸಂರಕ್ಷಣೆ ಕಾಯ್ದೆ, 1972ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆ ಹಾಗೂ ಈ ಕಾಯ್ದೆಗೆ 2009ರಲ್ಲಿ ಅಸ್ಸಾಂ ಸರ್ಕಾರ ಮಾಡಿದ ತಿದ್ದುಪಡಿ... ಇಂಥ ಹಲವು ಕಠಿಣ ಕಾನೂನುಗಳ ಕಾರಣದಿಂದಾಗಿ ಭಾರತದಲ್ಲಿ ಒಂಟಿ ಕೊಂಬಿನ ಘೇಂಡಾಮೃಗಗಳ ಸಂಖ್ಯೆ ಏರಿಕೆಯಾಗುತ್ತಿವೆ ಮತ್ತು ಇವುಗಳ ಬೇಟೆ ನಿಂತುಹೋಗಿದೆ.
ಸಂರಕ್ಷಣೆ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಿರುವುದೇ ಈ ಮಾದರಿಯ ಯಶಸ್ಸಿನ ಪ್ರಮುಖ ಕಾರಣ. ಇದರಿಂದಾಗಿ ಮಾನವ–ವನ್ಯಜೀವಿ ಸಂರ್ಘವು ಕಾಜಿರಂಗ ಉದ್ಯಾನ ಪ್ರದೇಶದಲ್ಲಿ ತಗ್ಗಿದೆ.
ಏಷ್ಯಾವು ಮೂರು ಜಾತಿಯ ಘೇಂಡಾಮೃಗಗಳಿಗೆ ನೆಲೆಯಾಗಿದೆ.
ಒಂಟಿ ಕೊಂಬಿನ ಘೇಂಡಾಮೃಗ
ಸುಮಾತ್ರನ್ ಘೇಂಡಾಮೃಗ
ಜಾವನ್ ಘೇಂಡಾಮೃಗ
2025ರ ಮಾರ್ಚ್ ಹೊತ್ತಿಗೆ, ಏಷ್ಯಾ ಖಂಡದಲ್ಲಿ 4,075 ದೊಡ್ಡ ಒಂಟಿ ಕೊಂಬಿನ ಘೇಂಡಾಮೃಗಗಳಿದ್ದು, ಭಾರತದಲ್ಲಿ 3,323 ಮತ್ತು ನೇಪಾಳದಲ್ಲಿ 752 ಇವೆ. ವರದಿಯ ಪ್ರಕಾರ 2022ರಲ್ಲಿ ಒಟ್ಟು ಸಂಖ್ಯೆ 4,014.
2007ರಿಂದ ಭಾರತ ಮತ್ತು ನೇಪಾಳದಲ್ಲಿ ಘೇಂಡಾಮೃಗಗಳ ಸಂಖ್ಯೆಯು ಹೆಚ್ಚಾಗಿದೆ. 2007ರಲ್ಲಿ 2,150 ರಷ್ಟಿದ್ದ ದೊಡ್ಡ ಒಂಟಿ ಕೊಂಬಿನ ಘೇಂಡಾಮೃಗಗಳ ಸಂಖ್ಯೆಯು 2024ರ ವೇಳೆಗೆ 3,323ಕ್ಕೆ ಏರಿಕೆಯಾಗಿದೆ. ನೇಪಾಳದ ದೊಡ್ಡ ಒಂಟಿ ಕೊಂಬಿನ ಘೇಂಡಾಮೃಗಗಳ ಸಂಖ್ಯೆ ಏರಿಕೆಯಾಗುತ್ತಿದೆ. 2007ರಲ್ಲಿ ಇವುಗಳ ಸಂಖ್ಯೆ 413 ಇತ್ತು. 2024ರಲ್ಲಿ 752ಕ್ಕೆ ಏರಿಕೆಯಾಗಿದೆ.
2022ರಲ್ಲಿ 6,195 ರಷ್ಟಿದ್ದ ಕಪ್ಪು ಘೇಂಡಾಮೃಗಗಳ ಸಂಖ್ಯೆ 2025ರ ವೇಳೆಗೆ 6,788ಕ್ಕೆ ಏರಿಕೆಯಾಗಿದೆ.
ಬೇಟೆಯಾಡುವಿಕೆಯಿಂದಾಗಿ ಇಂಡೋನೇಷ್ಯಾದ ಜಾವನ್ ಘೇಂಡಾಮೃಗಗಳ ಸಂಖ್ಯೆ ಕಡಿಮೆಯಾಗಿದೆ.
2024ರ ಅಂತ್ಯದ ವೇಳೆಗೆ, ಆಫ್ರಿಕಾದಲ್ಲಿ ಬಿಳಿ ಘೇಂಡಾಮೃಗಗಳ ಸಂಖ್ಯೆ 15,752 ಕ್ಕೆ ಇಳಿದಿದೆ. 2023ರಲ್ಲಿ ಇವುಗಳ ಸಂಖ್ಯೆ 17,464 ರಷ್ಟಿತ್ತು.
ಒಂಟಿ ಕೊಂಬಿನ ಖಡ್ಗಮೃಗಗಳ ಸಂಖ್ಯೆ ಏರಿಕೆಯಾಗಿದ್ದು, 2022ರಲ್ಲಿ 4,014 ಇದ್ದದ್ದು, 2025ರ ವೇಳೆ 4,075ಕ್ಕೆ ಏರಿದೆ.
ಜಾಗತಿಕವಾಗಿ ಖಡ್ಗಮೃಗಗಳ ಒಟ್ಟು ಸಂಖ್ಯೆ ಸರಿಸುಮಾರು 26,700.
ಈ ಪ್ರಾಣಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಾಜೆಕ್ಟ್ ಲಯನ್ ನಂತಹ ಯೋಜನೆಗಳ ಯಶಸ್ಸು ಕಾರಣ ಎನ್ನಲಾಗಿದೆ. ಇದರ ಅಡಿಯಲ್ಲಿ ಆವಾಸಸ್ಥಾನ ರಕ್ಷಣೆ, ನಿರ್ವಹಣೆ, ರೋಗ ನಿಯಂತ್ರಣ ಮತ್ತು ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುವತ್ತ ಗಮನಹರಿಸಲಾಗಿದೆ. ಜತೆಗೆ ಇವುಗಳ ರಕ್ಷಣೆಗಾಗಿ ಸಮುದಾಯದ ತೊಡಗಿಸಿಕೊಳ್ಳುವಿಕೆಯೂ ಪ್ರಮುಖ ಪಾತ್ರ ವಹಿಸಿದೆ.
ಯಶಸ್ಸಿನ ಇತರೆ ಪ್ರಮುಖ ಕಾರಣಗಳು
ಆವಾಸಸ್ಥಾನಗಳ ವ್ಯಾಪ್ತಿಯನ್ನು ಹೆಚ್ಚಿಸಿರುವುದು
ನೂತನ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಿರುವುದು
ಬೇಟೆಗೆ ಸಂಪೂರ್ಣ ನಿಷೇಧ
ಬೇಟೆಯಾಡಿದರೆ ಹೆಚ್ಚಿನ ಪ್ರಮಾಣ ದಂಡ ವಸೂಲಿ, ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಸಜೆ
ಚೀನಾ ಹಾಗೂ ವಿಯೆಟ್ನಾಂಗಳಲ್ಲಿ ಘೇಂಡಾಮೃಗಗಳ ಕೊಂಬಿಗೆ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ವಿಶ್ವದಾದ್ಯಂತ ಘೇಂಡಾಮೃಗಗಳನ್ನು ಹತ್ಯೆ ಮಾಡಲಾಗುತ್ತಿದೆ. ಜಗತ್ತಿನಾದ್ಯಂತ ನಡೆಯುವ ವನ್ಯಜೀವಿಗಳ ಕಳ್ಳಸಾಗಣೆಯಲ್ಲಿ ಘೇಂಡಾಮೃಗಗಳ ಕೊಂಬು, ಅಂಗಗಳಿಂದ ತಯಾರಾದ ಉತ್ಪನ್ನಗಳ ಕಳ್ಳಸಾಗಣೆಯು ಶೇ 29ರಷ್ಟಿದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಜಗತ್ತಿನಾದ್ಯಂತ ಘೇಂಡಾಮೃಗಗಳ ಸಂಖ್ಯೆಯು ತುಸು ಏರಿಕೆ ಕಾಣುತ್ತಿದ್ದರೂ ಅದರ ಕೊಂಬಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡಲಾಗುತ್ತಿದೆ.
ಹವಾಮಾನ ಬದಲಾವಣೆ, ಆವಾಸಸ್ಥಾನಗಳು ಕಾಣೆಯಾಗುತ್ತಿರುವುದು ಘೇಂಡಾಮೃಗಗಳ ಸಂಖ್ಯೆ ಇಳಿಕೆಯಾಗಲು ಇರುವ ಇತರ ಪ್ರಮುಖ ಕಾರಣಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.