ADVERTISEMENT

ಕಿರಿ ಮೂತಿಯ ‘ಮಂಗಳೂರು ಕಪ್ಪೆ’

ರಮ್ಯ ಬದರಿನಾಥ್
Published 2 ಜುಲೈ 2018, 20:26 IST
Last Updated 2 ಜುಲೈ 2018, 20:26 IST
   

ನಮ್ಮ ದೇಶದ ಪಶ್ಚಿಮ ಘಟ್ಟಗಳು ಜೀವ ಸಂಕುಲದ ನೆಲೆಬೀಡು. ನಿತ್ಯ ಹೊಸ ಗಿಡ, ಪ್ರಾಣಿ, ಪಕ್ಷಿಗಳ ಪ್ರಭೇದಗಳು ಪತ್ತೆಯಾಗುತ್ತಲೇ ಇವೆ. ಈಚೆಗೆ, ಕಪ್ಪೆಗಳ ಮೇಲಿನ ಅಧ್ಯಯನಗಳು ಹೆಚ್ಚಾಗುತ್ತಿದ್ದು, ಈವರೆಗೆ ಸುಮಾರು 260ಕ್ಕೂ ಹೆಚ್ಚು ಪ್ರಭೇದಗಳನ್ನು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಪತ್ತೆ ಮಾಡಲಾಗಿದೆ.

ಹಲವು ಪ್ರಭೇದಗಳು ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತವೆ. ಇದರ ಭೌಗೋಳಿಕ ವ್ಯಾಪ್ತಿ ವ್ಯಾಪಕವಾಗಿರುವುದಿಲ್ಲ. ಇಂತಹ ಸ್ಥಳೀಯ ಕಪ್ಪೆ ಪ್ರಭೇದಗಳ ಪಟ್ಟಿಗೆ ಹೊಸದೊಂದು ಪ್ರಭೇದ ಸೇರ್ಪಡೆಯಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ವಿನೀತ್ ಕುಮಾರ್ ನೇತೃತ್ವದ ಸಂಶೋಧಕರ ಈ ಆವಿಷ್ಕಾರ, ಝೂಟ್ಯಾಕ್ಸ ಎನ್ನುವ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಹೊಸ ಪ್ರಭೇದದ ವೈಜ್ಞಾನಿಕ ಹೆಸರು ‘ಮಿಕ್ರೊಹೈಲ ಕೊಡಿಯಾಲ್‌’ (Microhyla kodial). ಕೊಡಿಯಾಲ್- ಕೊಂಕಣಿ ಭಾಷೆಯಲ್ಲಿ ಮಂಗಳೂರಿನ ಹೆಸರು. ಇದರ ಸಾಮಾನ್ಯ ಹೆಸರು, ಮಂಗಳೂರು ಕಿರಿ ಮೂತಿ ಕಪ್ಪೆ. ಇಂಗ್ಲಿಷ್‌ನಲ್ಲಿMangalore Narrow Mouthed Frog ಎನ್ನುತ್ತಾರೆ.

ಈ ಕಪ್ಪೆಯನ್ನು ಮಂಗಳೂರಿನ ಕೈಗಾರಿಕಾ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಯಿತು. ಈ ಮೊದಲು ಅದು ಮರದ ದಿಮ್ಮಿಗಳನ್ನು ಸಂಗ್ರಹಿಸಿ ಇಡುತ್ತಿದ್ದ ಪ್ರದೇಶವಾಗಿತ್ತು (ಟಿಂಬರ್‌ ಯಾರ್ಡ್‌). ಅಲ್ಲಿಗೆಮ್ಯಾನ್ಮಾರ್‌, ಮಲೇಷ್ಯಾ ದೇಶಗಳಿಂದ ಮರದ ದಿಮ್ಮಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಹೀಗಾಗಿ ಈ ಕಪ್ಪೆಯು, ಮರದ ದಿಮ್ಮಿಗಳ ಜೊತೆಗೆ ಬಂದಿರಬಹುದೆಂದು ಅಭಿಪ್ರಾಯಪಡಲಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಪೆಟ್ರೋಕೆಮಿಕಲ್ ಕಾರ್ಖಾನೆಗಳು, ಶುದ್ಧೀಕರಣ ಘಟಕಗಳು ಮತ್ತು ಬಂದರು ಇದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ಇದೆ.

ADVERTISEMENT

ಸದಾ ಕಾರ್ಯನಿರತವಾಗಿರುವ ಮತ್ತು ಜನಸಂದಣಿಯಿಂದ ಕೂಡಿರುವ ಇಂತಹ ಪ್ರದೇಶದಲ್ಲಿ ಈ ಕಪ್ಪೆಯನ್ನು ಪತ್ತೆ ಮಾಡಲಾಗಿದೆ. ಕೆಲವು ಸಮೀಕ್ಷೆಗಳ ಪ್ರಕಾರಈ ಪ್ರದೇಶದಿಂದಾಚೆಗೆ ಈ ಕಪ್ಪೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದರ ಕೂಗು ಬೇರೆ ಕಿರಿಮೂತಿ ಕಪ್ಪೆಗಳ ಕೂಗಿಗೆ ಹೋಲಿಕೆಯಾಗುತ್ತಿಲ್ಲ ಎಂಬ ವಿಷಯ, ಇದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಲು ತಂಡವನ್ನು ಪ್ರೇರೇಪಿಸಿತು. ನಂತರ ನಡೆದ ಅನುವಂಶಿಕ ಅಧ್ಯಯನಗಳು, ಇದು ಒಂದು ಹೊಸ ಪ್ರಭೇದದ ಕಪ್ಪೆಯೆಂದು ದೃಢೀಕರಿಸಿದವು.

ನೋಡಲು ಕಂದು ಮತ್ತು ಬೂದು ಮಿಶ್ರಿತ ಬಣ್ಣದಲ್ಲಿ ಇರುತ್ತದೆ. ದೇಹ ಕೇವಲ 2 ಸೆ.ಮೀ ಉದ್ದವಿರುತ್ತದೆ. ಇದರ ತಲೆಯ ಮೇಲೆ ಎದ್ದು ಕಾಣುವಂತೆ ಆಲಿವ್ ಹಸಿರು ಬಣ್ಣದ ಒಂದು ಪಟ್ಟಿ ಇರುತ್ತದೆ. ಮೈ ಮೇಲೆ ತೆಳು ಆಲಿವ್ ಹಸಿರು ಬಣ್ಣದ ಪಟ್ಟಿಗಳಿರುತ್ತವೆ. ಇದರ ಹೆಣ್ಣುಗಪ್ಪೆ ಗಂಡು ಕಪ್ಪೆಗಿಂತಲೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಿರುತ್ತದೆ. ಗಂಡುಗಪ್ಪೆಗಳ ಧ್ವನಿ ‘ಟರ್’ ಎಂದು ದೀರ್ಘವಾಗಿ ಕೂಗಿದಂತೆ ಕೇಳಿಸುತ್ತದೆ.

ನಗರವಾಸಿ ಪ್ರಭೇದವಾದರೂ, ಬೇರೆ ಮಿಕ್ರೋಹೈಲ ಕುಲದ ಪ್ರಭೇದಗಳಂತೆ ಮುಂಗಾರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಜೌಗು ಪ್ರದೇಶ ಮತ್ತು ಅಲ್ಲಿನ ಹುಲ್ಲುಗಾವಲು ಪ್ರದೇಶದಲ್ಲಿ ಇದರ ಸಂತತಿ ವಿಸ್ತರಿಸಿದೆ.

ತಂಡದ ಅಧ್ಯಯನದ ಪ್ರಕಾರ, ಈ ಪ್ರಭೇದವು ಆಗ್ನೇಯ ಏಷ್ಯಾದಹಲವು ದೇಶಗಳಲ್ಲಿ ಕಂಡುಬರುವಮಿಕ್ರಿಹೈಲಿಡೆ ಕುಟುಂಬದ ಕಪ್ಪೆಗಳು ಮತ್ತು ಭಾರತೀಯ ಕಿರಿಮೂತಿ ಕಪ್ಪೆಗಳನ್ನು ಹೋಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.