ADVERTISEMENT

ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ

ಪಿಟಿಐ
Published 8 ಮಾರ್ಚ್ 2024, 11:34 IST
Last Updated 8 ಮಾರ್ಚ್ 2024, 11:34 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಈರೋಡ್: ತಾಯಿ ಇಲ್ಲದ ಎರಡು ತಿಂಗಳ ತಬ್ಬಲಿ ಆನೆಮರಿಯೊಂದು ಸತ್ಯಮಂಗಳ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಅರೆಪಾಳಯಂನಲ್ಲಿ ಪತ್ತೆಯಾಗಿದ್ದು, ಇದನ್ನು ಮುದುಮಲೈ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘35ರಿಂದ 40 ವರ್ಷದ ಆನೆಯೊಂದು ಬನ್ನಾರಿ ಅರಣ್ಯ ಪ್ರದೇಶದಲ್ಲಿ ಮಾರ್ಚ್‌ 3ರಂದು ತನ್ನ 60 ದಿನಗಳ ಹೆಣ್ಣು ಮರಿಯೊಂದಿಗೆ ನೀರು ಮತ್ತು ಆಹಾರ ಅರಸಿ ಓಡಾಡುತ್ತಿತ್ತು. ಬಳಲಿದ ಆನೆಯು, ನಿತ್ರಾಣಗೊಂಡು ಬಿದ್ದಿದ್ದನ್ನು ಗಮನಿಸಿದ ಅರಣ್ಯದಂಚಿನ ಗ್ರಾಮಸ್ಥರು, ತಕ್ಷಣ ಇಲಾಖೆ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

‘ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪಶುವೈದ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತು. ಆನೆ ಕುಸಿದು ಬಿದ್ದಿದ್ದನ್ನು ಗಮನಿಸಿದ ಅವರು, ತನ್ನ ಮರಿಗೆ ಹಾಲುಣಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ನಿರ್ಜಲಗೊಂಡಿದ್ದ ಆನೆಗೆ ಸೂಕ್ತ ಔಷಧೋಪಚಾರ ನೀಡಿದರೂ, ತಾಯಿ ಆನೆಯು ಮಾರ್ಚ್ 5ರಂದು ಕೊನೆಯುಸಿರೆಳೆಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಂತರ ಮರಿ ಆನೆಯನ್ನು ಅದರ ಗುಂಪಿಗೆ ಸೇರಿಸುವ ಪ್ರಯತ್ನವನ್ನು ಇಲಾಖೆ ಸಿಬ್ಬಂದಿ ಕೈಗೊಂಡರು. ಆದರೆ ಅರೆಪಾಳಯಂ ಅರಣ್ಯ ಪ್ರದೇಶಕ್ಕೆ ಸೇರಿದ ಹಸನೂರ್‌ ಅರಣ್ಯದಲ್ಲಿ ಗುರುವಾರ ಆನೆಮರಿಯೊಂದೇ ಇರುವುದಾಗಿ ಮತ್ತು ಅದನ್ನು ರಕ್ಷಿಸಿರುವುದಾಗಿ ಅಲ್ಲಿನ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಹೀಗಾಗಿ ಮರಿಯನ್ನು ಮುದುಮಲೈ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿರುವ ಇತರ ಆನೆಗಳೊಂದಿಗೆ ಇದು ಸೇರಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.