ADVERTISEMENT

Operation Sindoor: ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಯೋಧರ ಹೆಸರಿಟ್ಟು ಗೌರವ

ಪಿಟಿಐ
Published 7 ಜೂನ್ 2025, 11:46 IST
Last Updated 7 ಜೂನ್ 2025, 11:46 IST
<div class="paragraphs"><p>ಹೆಬ್ಬಕ</p></div>

ಹೆಬ್ಬಕ

   

ಜೈಸಲ್ಮೇರ್‌: ಭಯೋತ್ಪಾದಕರ ಹಾಗೂ ಅವರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರವನ್ನು ಹಲವರು ತಮ್ಮದೇ ರೀತಿಯಲ್ಲಿ ಗೌರವಿಸುತ್ತಿದ್ದಾರೆ. ರಾಜಸ್ಥಾನದ ಸುಧಸರಿ ಹಾಗೂ ಸಮ್‌ ಗ್ರಾಮದಲ್ಲಿರುವ ಮರುಭೂಮಿ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ ಅಳಿವಿನಂಚಿನ ಹೆಬ್ಬಕಗಳ (Great Indian Bustard) ಮರಿಗಳಿಗೆ ಯೋಧರ, ಕಾರ್ಯಾಚರಣೆಯ ಹೆಸರಿಟ್ಟು ಸಂರಕ್ಷಣಾಧಿಕಾರಿಗಳು ಗೌರವ ಸಲ್ಲಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್‌ 22ರಂದು ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್‌ ಪಡೆಗಳು ಗಡಿಯುದ್ದಕ್ಕೂ ಭಾರತದ ವಿರುದ್ಧ ದಾಳಿ ಮಾಡಿದ್ದವು. ಭಾರತದ ಕಾರ್ಯಾಚರಣೆಯನ್ನು ಹಲವು ಸಂಘ ಸಂಸ್ಥೆಗಳು ಪ್ರಶಂಸಿವೆ.

ADVERTISEMENT

ರಾಜಸ್ಥಾನದ ಸುಡು ಹೊಂಬಣ್ಣದ ಮರಳಿನಲ್ಲಿ ಜೀವಿಸುವ ಹೆಬ್ಬಕಗಳ ಸಂತತಿಯನ್ನು ಉಳಿಸಲು ಜೈಸಲ್ಮೇರ್‌ನ ಸುಧಸರಿ ಹಾಗೂ ಸಮ್‌ನಲ್ಲಿರುವ ಸಂತಾನೋತ್ಪತ್ತಿ ಕೇಂದ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಜನಿಸಿದ ಮರಿಗಳಿಗೆ ಸಿಂಧೂರಕ್ಕೆ ಸಂಬಂಧಿಸಿದ ಹೆಸರುಗಳನ್ನಿಟ್ಟು ಗೌರವ ಸಲ್ಲಿಸಲಾಗಿದೆ. ಇದರಲ್ಲಿ ಸಿಂಧೂರ, ಆಟಮ್, ಮಿಸ್ರಿ, ವ್ಯೋಮ್‌, ಸೋಫಿಯಾ ಎಂಬ ಹೆಸರುಗಳನ್ನು ಇಡಲಾಗಿದೆ.

ಈ ಸಂರಕ್ಷಣಾ ಕಾರ್ಯಕ್ರಮದಡಿ ಕಳೆದ ಒಂದು ವರ್ಷದಲ್ಲಿ 21 ಹೆಬ್ಬಕಗಳ ಮೊಟ್ಟೆಗಳು ಮರಿಗಳಾಗಿವೆ. ಇದರಲ್ಲಿ ಮೇ ಹಾಗೂ ಜೂನ್‌ನಲ್ಲಿ ಏಳು ಮರಿಗಳು ಜನಿಸಿವೆ. ಮೇ 5ರಂದು ಜನಿಸಿದ ಮರಿಗೆ ಸೇನಾ ಕಾರ್ಯಾಚರಣೆಯ ನೆನಪಿಗಾಗಿ ‘ಸಿಂಧೂರ’ ಎಂದು ಹೆಸರಿಡಲಾಗಿದೆ.

ಮೇ 9ರಂದು ಜನಿಸಿದ ಮರಿಗೆ ಸೇನಾ ಸಾಮರ್ಥ್ಯ ಪ್ರತಿನಿಧಿಸುವ ಆಟಮ್‌, ಮೇ 19ರಂದು ಜನಿಸಿದ ಮರಿಗೆ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಮಿಸ್ರಿ (ವಿಕ್ರಂ ಮಿಸ್ರಿ) ಹೆಸರನ್ನು ಇಡಲಾಗಿದೆ. ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಹಾಗೂ ಕರ್ನಲ್ ಸೋಫಿಯಾ ಖುರೇಷಿ ಅವರಿಗೆ ಗೌರವಾರ್ಥವಾಗಿ ಕ್ರಮವಾಗಿ ಮೇ 23ರಂದು ಹಾಗೂ ಮೇ 24ರಂದು ಜನಿಸಿದ ಹೆಬ್ಬಕಗಳಿಗೆ ಇಡಲಾಗಿದೆ. 

‘ಈ ಅಪರೂಪದ ಪಕ್ಷಿಯ ಮರಿಗಳಿಗೆ ದೇಶಾಭಿಮಾನದ ಹೆಸರುಗಳನ್ನು ಇಡುವ ಮೂಲಕ ವನ್ಯಜೀವಿ ಸಂರಕ್ಷಣೆಯನ್ನು ರಾಷ್ಟ್ರೀಯ ಶೌರ್ಯದೊಂದಿಗೆ ಹೋಲಿಸುವ ಪ್ರಯತ್ನ ನಡೆಸಲಾಗಿದೆ. ಇಲ್ಲಿ ಒಂದು ಪಕ್ಷಿಯ ಸಂತತಿಯನ್ನು ಉಳಿಸುವುದಷ್ಟೇ ಅಲ್ಲದೆ, ಒಂದು ರಾಷ್ಟ್ರವಾಗಿ ಅದರ ಮೌಲ್ಯಗಳನ್ನು ವ್ಯಾಖ್ಯಾನಿಸುವ ಪ್ರಯತ್ನ ನಡೆಸಲಾಗಿದೆ’ ಎಂದು ಮರುಭೂಮಿ ರಾಷ್ಟ್ರೀಯ ಉದ್ಯಾನದ ಡಿಎಫ್‌ಒ ಬ್ರಿಜ್‌ಮೋಹನ್ ಗುಪ್ತಾ ತಿಳಿಸಿದರು.

ಒಂದು ಕಾಲದಲ್ಲಿ ಭಾರತದ ಹುಲ್ಲುಗಾಲವುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಹೆಬ್ಬಕಗಳು ಕಾಲದ ಸುಳಿಗೆ ಸಿಲುಕಿ ಅಳಿವಿನಂಚಿಗೆ ತಲುಪಿವೆ. ಬೇಟೆ, ವಿದ್ಯುತ್ ಸಂಪರ್ಕದಂತ ಮೂಲಸೌಕರ್ಯಗಳ ಅಪಾಯಕ್ಕೆ ಸಿಲುಕಿ ಕೇವಲ 150 ಪಕ್ಷಗಳು ಉಳಿದಿವೆ. ಇವುಗಳಲ್ಲಿ ಬಹುತೇಕವು ರಾಜಸ್ಥಾನದಲ್ಲಿವೆ. ಹೆಬ್ಬಕಗಳನ್ನು ಉಳಿಸುವ ಉದ್ದೇಶದಿಂದ ಪರಿಸರ ಸಚಿವಾಲಯ, ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ರಾಜಸ್ಥಾನದ ಅರಣ್ಯ ಇಲಾಖೆಗಳು ಜತೆಗೂಡಿ 2018ರಲ್ಲಿ ‘ಪ್ರಾಜೆಕ್ಟ್‌ ಗ್ರೇಟ್ ಇಂಡಿಯನ್ ಬಸ್ಟರ್ಡ್‌ (GIB) ಆರಂಭಿಸಿದವು. 

ಸುಧಸರಿ ಹಾಗೂ ಸಮ್‌ನಲ್ಲಿರುವ ಸಂತಾನೋತ್ಪತ್ತಿ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳು, ತಾಪಮಾನ ನಿಯಂತ್ರಿತ ಇನ್‌ಕ್ಯುಬೇಟರ್‌ಗಳು, ಸೆನ್ಸರ್‌ ಆಧಾರಿತ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಈ ಆಧುನಿಕ ತಂತ್ರಜ್ಞಾನದ ನೆರವಿನಿಂದ ಹೆಬ್ಬಕಗಳ ಮೊಟ್ಟೆಗಳ ಸದ್ಯದ ಸ್ಥಿತಿ ಮತ್ತು ಮರಿಗಳ ಆರೋಗ್ಯವನ್ನು ಅವಲೋಕಿಸಲು ಸಾದ್ಯವಾಗಿದೆ. ಈವರೆಗೂ ಈ ಕೇಂದ್ರದಲ್ಲಿ 65 ಮರಿಗಳು ಜನಿಸಿ, ಆರೋಗ್ಯಯುತವಾಗಿ ಬೆಳೆದಿವೆ ಎಂದು ತಿಳಿಸಿದ್ದಾರೆ.

‘ಮೊಟ್ಟೆಯೊಡೆದು ಹೊರಬಂದ ಹೆಬ್ಬಕಗಳ ಮರಿಗಳು ಅರೆ ನೈಸರ್ಗಿಕ ವಾತಾವರಣದಲ್ಲಿ ಬೆಳೆಯುತ್ತಾ ಸಾಗಿ, ಮುಂದೆ ನೈಜ ವಾತಾವರಣವನ್ನು ಸೇರುತ್ತವೆ. ಮರುಭೂಮಿಯ ವಾತಾವರಣಕ್ಕೆ ಇವುಗಳನ್ನು ಮರು ಪರಿಚಯಿಸುವುದು ಇಲ್ಲಿರುವ ನೈಜ ಗುರಿ. ಅದರಲ್ಲೂ ಮರುಭೂಮಿಯ ವಾತಾವರಣದಲ್ಲಿ ಹೆಬ್ಬಕಗಳು ಸಹಜವಾಗಿ ಸಂತಾನೋತ್ಪತ್ತಿ ನಡೆಸುವಂತೆ ಮಾಡುವ ಯೋಜನೆ ಭಾರತೀಯ ವನ್ಯಜೀವಿ ಸಂರಕ್ಷಣಾ ಯಾನದ ಪ್ರಮುಖ ಮೈಲಿಗಲ್ಲಾಗಿದೆ’ ಎಂದು ಗುಪ್ತಾ ತಿಳಿಸಿದ್ದಾರೆ.

‘ಜನಿಸುವ ಹೆಬ್ಬಕಗಳಲ್ಲಿ ಬದುಕುಳಿಯುವ ಪ್ರಮಾಣ ಹೆಚ್ಚಿಸುವುದು, ಮರಿಗಳ ಸಾವಿನ ಪ್ರಮಾಣ ತಗ್ಗಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ. ಈ ಕೆಲಸದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಉತ್ತಮ ಫಲಿತಾಂಶ ನೀಡಿದೆ. ಜತೆಗೆ ದಿನದ 24 ಗಂಟೆಗಳ ಕಾಲ ನಿಗಾ ಇಡಲೂ ಸಾಧ್ಯವಾಗಿದೆ. ಇದರೊಂದಿಗೆ ಸ್ಥಳೀಯ ಸಮುದಾಯದ ನೆರವನ್ನೂ ಪಡೆಯಲಾಗಿದೆ. ಅವರನ್ನೂ ಯೋಜನೆಯ ಭಾಗವನ್ನಾಗಿಸಿ ಈ ಅಳವಿನಂಚಿನ ಹಕ್ಕಿಯ ಸಂರಕ್ಷಣೆಯ ಜವಾಬ್ದಾರಿಯಲ್ಲಿ ಪಾಲುದಾರರನ್ನಾಗಿ ಮಾಡಲಾಗಿದೆ‘ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.