ADVERTISEMENT

ಕೀಟ–ನೋಟ ಅಂಕಣ: ನೀರಿನ ಮೇಲೆ ನಡೆದಾಡುವ ಕೀಟ ‘ಪಾಂಡ್ ಸ್ಕೇಟರ್’

​ಪ್ರಜಾವಾಣಿ ವಾರ್ತೆ
Published 15 ಮೇ 2022, 19:30 IST
Last Updated 15 ಮೇ 2022, 19:30 IST
ಪಾಂಡ್‌ಸ್ಟ್ರೆಕ್‌ ಕೀಟ
ಪಾಂಡ್‌ಸ್ಟ್ರೆಕ್‌ ಕೀಟ   

ಕೀಟಗಳು ಸರ್ವಾಂತರ್ಯಾಮಿ ಜೀವಿಗಳು. ಇವು ಅಂಟಾರ್ಟಿಕ ಖಂಡದಲ್ಲೂ ಬದುಕುತ್ತವೆ, ಪೆಟ್ರೋಲಿಯಂ ಬಾವಿಗಳಲ್ಲೂ ಜೀವಿಸುತ್ತವೆ. ಸಸ್ಯಶಾಸ್ತ್ರವನ್ನು ಹೊರತು ಪಡಿಸಿ, ಪಾಣಿಶಾಸ್ತ್ರದಲ್ಲಿ ಶೇ 40ರಷ್ಟು ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಎಲ್ಲಾ ರೀತಿಯ ಜೀವಜಂತುಗಳಿದ್ದರೆ, ಉಳಿದ ಶೇ 60ರಷ್ಟು ನಾವು ಊಹಿಸಲಾಗದ ವಿಭಿನ್ನ ಕೀಟಗಳೇ ಆವರಿಸಿವೆ. ಸಾಮಾನ್ಯವಾಗಿ ಇವುಗಳ ಗಾತ್ರ ಚಿಕ್ಕದಿರುವುದರಿಂದ ನಮ್ಮ ಕಣ್ಣಿಗೆ ಕೀಟಗಳು ಆಗಾಗ್ಗ ಮಾತ್ರ ಗೋಚರಿಸುತ್ತವೆ.

ಹೀಗೆ ಒಂದು ದಿನ ಕೀಟಗಳ ಜಗತ್ತನ್ನು ಅರಸುತ್ತಾ ನಮ್ಮದೇ ತೋಟಕ್ಕೆ ಹೋದೆ. ಅಲ್ಲಿದ್ದ ತೆರೆದ ಬಾವಿಯ ನೀರಿನ ಮೇಲೆ ಕೆಲವು ಕೀಟಗಳು ಅತಿ ವೇಗ ಗತಿಯಲ್ಲಿ ಈಜುವುದು ಕಣ್ಣಿಗೆ ಬಿತ್ತು. ಅವು ಥೇಟ್ ಚಿಕ್ಕ ಮಕ್ಕಳು ಸ್ಕೇಟಿಂಗ್ ಆಡುವ ಹಾಗೆ ಅಥವ ಸದ್ದಿಲ್ಲದಂತೆ ಸ್ಕೇಟ್‌ಬೋರ್ಡ್ ಹಾಕಿಕೊಂಡು ಸುಯ್ಞ್ಂ.. ಎಂದು ನೀರಿನ ಮೇಲೆ ‘ಸರ್ಫಿಂಗ್’ ಮಾಡುವಂತೆ ಆಟವಾಡುತ್ತಿದ್ದವು.

ಕೀಟಶಾಸ್ತ್ರಜ್ಞರು ಈ ಕೀಟಗಳನ್ನು ಪಾಂಡ್‌ ಸ್ಕೇಟರ್ಸ್‌(Pond Skaters) ಅಥವಾ ವಾಟರ್‌ ಸ್ಟ್ರೈಡರ್ಸ್‌(Water Striders)ಗಳೆಂದು ಕರೆದಿದ್ದಾರೆ.ಜರ‍್ರಿಡೆ(Gerridae) ಕುಟುಂಬ, ಹೆಮಿಪ್ಟೆರಾ (Hemiptera) ವರ್ಗಕ್ಕೆ ಸೇರಿದ ಈ ಸುಂದರ ಕೀಟಗಳು ಹೇಗೆ ನೀರಿನ ಮೇಲೆಯೇ ಬಹಳ ಸಲೀಸಾಗಿ ಈಜಿಕೊಂಡು ಜಾರಿಕೊಳ್ಳುತ್ತವೆ ಮತ್ತು ಸಂಪೂರ್ಣ ಜೀವನ ಅಲ್ಲೇ ಪೂರೈಸುತ್ತವೆ ಎಂಬುದು ಅಚ್ಚರಿ ಮೂಡಿಸುತ್ತವೆ.

ADVERTISEMENT

ಬಹಳ ಹಗುರವಾದ ಈ ಕೀಟಗಳ ಆರು ಕಾಲುಗಳಲ್ಲಿಯೂ ಸೂಕ್ಷ್ಮವಾದ ಸಾವಿರಾರು ರೋಮಗಳಿದ್ದು ಪ್ರತಿಯೊಂದು ರೋಮದಲ್ಲೂ ಹಲವಾರು ಚಿಕ್ಕ ಚಿಕ್ಕ ರಂಧ್ರಗಳಿವೆ. ಈ ರಂಧ್ರಗಳಲ್ಲಿ ಗಾಳಿ ತುಂಬಿಕೊಂಡಿರುವುದರಿಂದ ಸಂಪೂರ್ಣ ದೇಹವನ್ನು ನೀರಿನಲ್ಲಿ ಮುಳುಗದಂತೆ ಮೇಲೆಯೇ ತೇಲಿಸಿಬಿಡುತ್ತವೆ. ಇದಕ್ಕೆ ವಿಜ್ಞಾನದಲ್ಲಿ ಬಯೋಯನ್ಸಿ(Buoyancy) ಮತ್ತು ಕನ್ನಡದಲ್ಲಿ ‘ಪ್ಲವನತೆ’ ಎಂದೆನ್ನಬಹುದು. ಇಲ್ಲಿನ ರೋಮಗಳೂ ನೀರನ್ನು ವಿಕರ್ಷಿಸುತ್ತ, ಜಲದ್ವೇಷಿ(Hydrophobic hairs)ಗಳಾಗಿರುವುದು ಕೀಟವನ್ನು ನೆನೆಯದಂತೆ ಮಾಡಿ ಮತ್ತಷ್ಟು ಪ್ಲವನತೆ ಹೆಚ್ಚಿಸುತ್ತಾ ಕೀಟವನ್ನು ಅತೀ ವೇಗವಾಗಿ ಈಜುವಂತೆ ಮಾಡುತ್ತವೆ. ಎಲ್ಲ ಕೀಟಗಳಿಗೂ ಮೂರು ಜೊತೆ ಕಾಲುಗಳಿರುವುದು ನಾವು ಬಲ್ಲೆವು. ಈ ಕೀಟಗಳಲ್ಲಿ ಮುಂಗಾಲುಗಳು ಕೊಂಚ ಚಿಕ್ಕದಾಗಿದ್ದು. ನೀರಿನಲ್ಲಿ ದಕ್ಕುವ ಸೊಳ್ಳೆ ಮರಿಗಳು ಮತ್ತು ಇತರೆ ಜಲಚರ ಜೀವಿಗಳನ್ನು ಹಿಡಿದು ತಿನ್ನಲು ಮಾರ್ಪಾಟು ಗೊಂಡಿವೆ. ಮಧ್ಯದ ಎರಡು ಕಾಲುಗಳು ದೋಣಿಯ ಹುಟ್ಟಿನಂತೆ ಕಾರ್ಯ ನಿರ್ವಹಿಸುತ್ತಾ ಕೀಟ ದೇಹವನ್ನು ಮುಂದಕ್ಕೆ ತಳ್ಳುತ್ತವೆ. ಹಿಂಬದಿಯ ಕಾಲುಗಳು ಉದ್ದವಾಗಿದ್ದು ಕೀಟ ಪಯಣದ ದಿಕ್ಕು ಬದಲಾಯಿಸುವಲ್ಲಿ ಮತ್ತು ವೇಗ ತಡೆ ನಿಯಂತ್ರಣದ ಕಾರ್ಯವನ್ನು ಬಹು ಸುಗಮವಾಗಿ ನಿರ್ವಹಿಸುತವೆ. ನೀರಿನ ಮೇಲೆ ಇವು ಕಾಲುಗಳಿಟ್ಟ ಜಾಗವು ಜಲ ಗುಂಡಿಗಳಂತೆ ಸುಂದರವಾಗಿ ಗೋಚರಿಸುತ್ತದೆ. ನೆಲದ ಮೇಲೆ ಇವುಗಳ ಆಗಮನ ಎಂದಿಗೂ ಸಾಧ್ಯವೇ ಇಲ್ಲ ಎನ್ನುವುದೊಂದೇ ವಿಪರ್ಯಾಸ.

(ಲೇಖಕರು ಕೃಷಿ ಅಧಿಕಾರಿ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.