ADVERTISEMENT

ಮುದ್ದು ನಾಯಿಯ ಅಂದಕ್ಕೆ ‘ಸ್ಟುಡಿಯೊ’

ಸುಮನಾ ಕೆ
Published 9 ಜುಲೈ 2018, 20:07 IST
Last Updated 9 ಜುಲೈ 2018, 20:07 IST
ಡಾಗ್‌ ಸ್ಟುಡಿಯೋ ಪೆಟ್‌ ಸ್ಪಾದಲ್ಲಿ ನಾಯಿಗಳ ಆರೈಕೆ
ಡಾಗ್‌ ಸ್ಟುಡಿಯೋ ಪೆಟ್‌ ಸ್ಪಾದಲ್ಲಿ ನಾಯಿಗಳ ಆರೈಕೆ   

ಈಗ ಮನೆಗಳಲ್ಲಿ ನಾಯಿಗೂ ಮನೆಸದಸ್ಯನ ಸ್ಥಾನ. ಅದರ ಜೊತೆ ಪ್ರೀತಿ, ಆತ್ಮೀಯತೆಬೆಳೆದು ಭಾಂದವ್ಯ ಬೆಳೆದಿರುತ್ತದೆ. ಆದರೆ ನಾಯಿಗಳಿಗೆ ಫಂಗಸ್‌ ಸೋಂಕು, ಕೂದಲು ಉದುರುವಂತಹ ಸಮಸ್ಯೆಗಳಿರುತ್ತವೆ. ಕೆಲಸದ ಒತ್ತಡದಲ್ಲಿ ನಾಯಿ ಶುಚಿತ್ವಕ್ಕೆ ಗಮನ ಕೊಡಲಾಗುವುದಿಲ್ಲ. ಇಂತಹ ಪ್ರಾಣಿ ಪ್ರಿಯರಿಗಾಗಿ ನಗರದಲ್ಲಿ ಹತ್ತಾರು ಪೆಟ್‌ ಸ್ಪಾಗಳಿವೆ. ಅವುಗಳಲ್ಲಿ ಜೆ.ಪಿ ನಗರದ ‘ ಡಾಗ್‌ ಸ್ಟುಡಿಯೊ ಪೆಟ್‌ ಸ್ಪಾ’ ಕೂಡ ಒಂದು.

ಈ ಸ್ಪಾದಲ್ಲಿ ನಾಯಿಗಳಹೇರ್‌ ಗ್ರೂಮಿಂಗ್‌, ಹೇರ್‌ ಸ್ಟೈಲ್‌, ನೇಲ್‌ ಕಟ್ಟಿಂಗ್‌, ಟ್ರಿಮ್ಮಿಂಗ್‌, ನಾನಾ ಬಗೆಯ ಆಯಿಲ್‌ ಮಸಾಜ್‌ ಹಾಗೂ ನಾಯಿಗಳ ವರ್ತನೆಗಳ ಕೆಲ ಬೇಸಿಕ್ ತರಬೇತಿಗಳನ್ನು ನೀಡಲಾಗುತ್ತದೆ. ಈ ಡಾಗ್‌ ಸ್ಟುಡಿಯೊವನ್ನು ಯೆಫ್ನಾ ಪುಣಚ ಅವರು 2017ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿದರು. ಅವರು ಕೋರಮಂಗಲದ ಹೆಡ್ಸ್‌ ಅಪ್‌ ಫಾರ್‌ ಟೇಲ್ಸ್‌ ಸಂಸ್ಥೆಯಿಂದ ‘ಪೆಟ್‌ ಗ್ರೂಮಿಂಗ್‌ ಹಾಗೂ ಹೇರ್ ಸ್ಟೈಲಿಂಗ್‌’ ಬಗ್ಗೆ ಆರು ತಿಂಗಳ ಸರ್ಟಿಫಿಕೇಟ್‌ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಈ ಸ್ಟುಡಿಯೋ ಆರಂಭಿಸಿದರು. ಇಲ್ಲಿ ನಾಯಿ, ಬೆಕ್ಕುಗಳ ಸ್ಟೈಲಿಂಗ್‌ ಜವಾಬ್ದಾರಿಯನ್ನು ಯೆಫ್ನಾ ನಿರ್ವಹಿಸಿದರೆ,ಕಿರಣ್‌ ರವೀಂದ್ರ ಬೇಸಿಕ್‌ ತರಬೇತಿ ನೀಡುತ್ತಾರೆ.

ಯೆಫ್ನಾ ಪ್ರಾಣಿಪ್ರಿಯೆ. ಪ್ರಾಣಿಗಳ ಮೇಲಿನ ಪ್ರೀತಿ, ಕಾಳಜಿಯಿಂದಲೇ ಅವರು ಈ ಸ್ಟುಡಿಯೊ ಆರಂಭಿಸಿದ್ದಾರೆ. ಮುಂಚೆ ಬಿಪಿಒ ಕಂಪೆನಿಯಲ್ಲಿ ಯೆಫ್ನಾ ಉದ್ಯೋಗ ಮಾಡುತ್ತಿದ್ದರು. ಆದರೆ ಮಗುವಾದ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ, 8 ವರ್ಷ ಮನೆಯಲ್ಲಿಯೇ ಇದ್ದರು. ಮಗು ದೊಡ್ಡವನಾದ ಬಳಿಕ ಸ್ವಂತ ವ್ಯವಹಾರ ಆರಂಭಿಸಬೇಕು ಎಂದು ಆಲೋಚನೆ ಮಾಡಿದಾಗ ಹೊಳೆದದ್ದು ಡಾಗ್‌ ಸ್ಟುಡಿಯೊ.

ADVERTISEMENT

‘ನಗರದಲ್ಲಿ ಮನೆಯೊಳಗೆ ನಾಯಿ ಸಾಕಬೇಕಾಗುತ್ತದೆ. ಹೀಗಾಗಿ ಅವುಗಳನ್ನು ಎಷ್ಟು ಸ್ವಚ್ಛ ಮಾಡಿದರೂ ಕಡಿಮೆಯೇ. ಮನೆಯಲ್ಲಿಯೇ ಅವುಗಳ ಸ್ನಾನ, ಶುಚಿ ಮಾಡುವುದರಿಂದ ಅವುಗಳನ್ನು ಸಂಪೂರ್ಣವಾಗಿ ಕ್ಲೀನ್ ಆಗಿವೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಸ್ಪಾ ಕರೆದುಕೊಂಡು ಬಂದಲ್ಲಿ ಉಗುರು ಕತ್ತರಿಸುವುದರಿಂದ ಹಿಡಿದು ಆಯಿಲ್‌ ಮಸಾಜ್‌ ಮಾಡಿ ಸ್ನಾನ ಮಾಡಿಸುವ ತನಕ ಸಂಪೂರ್ಣ ಸೇವೆ ಒದಗಿಸಲಾಗುತ್ತದೆ’ ಎನ್ನುತ್ತಾರೆಯೆಫ್ನಾ.

ಇಲ್ಲಿನಾಯಿಗಳ ಕಿವಿಯೊಳಗೆ ಸ್ವಚ್ಛ ಮಾಡಿ, ಕಿವಿಯೊಳಗೆ ಬೆಳೆದಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಉಗುರುಗಳನ್ನು ಕತ್ತರಿಸಿ ಟ್ರಿಮ್‌ ಮಾಡಿ, ಪೆಡಿಕ್ಯೂರ್‌, ಅವುಗಳ ಮೈಮೇಲೆ, ಮಲ, ಮೂತ್ರ ಮಾಡುವ ಜಾಗದ ಕೂದಲನ್ನು ಕತ್ತರಿಸಲಾಗುತ್ತದೆ. ಈಗ ಮಳೆಗಾಲದಲ್ಲಿ ನಾಯಿಗಳಿಗೆ ಫಂಗಸ್‌ ಅಥವಾ ಚರ್ಮದಲ್ಲಿ ತುರಿಕೆಗಳು ಕಾಣಿಸಿಕೊಳ್ಳಬಹುದು. ಮೈಮೇಲೆ ದೂಳು ಹಾಗೂನೀರಿನ ಪಸೆ ಉಳಿಯುವುದರಿಂದ ತಿಗಣೆ, ಹೇನುಗಳಿಗೆ ಸೂಕ್ತ ಚಿಕಿತ್ಸೆ, ಕಣ್ಣುಗಳ ಆರೋಗ್ಯ, ನಾಯಿಗಳಿಗೆ ಹಲ್ಲುಜ್ಜಿಸುವುದು, ಆ್ಯಂಟಿ ಫಂಗಸ್‌ ಚಿಕಿತ್ಸೆ, ಶ್ಯಾಂಪೂ ಕಂಡೀಷನಿಂಗ್‌ ಸ್ನಾನ, ಗ್ಲೋ ಡ್ರೈ, ಬಗೆ ಬಗೆ ಹೇರ್‌ ಸ್ಟೈಲ್‌ಗಳನ್ನು ಇಲ್ಲಿ ಮಾಡಲಾಗುತ್ತದೆ. ಕೂದಲನ್ನು ಚೆನ್ನಾಗಿ ಬಾಚಿ, ಕತ್ತರಿಸಿ, ನಾಯಿಗಳ ದೇಹ ಹಾಗೂ ತಳಿಗೆ ತಕ್ಕಂತೆ ಹೇರ್‌ ಕೂದಲ ವಿನ್ಯಾಸ ಮಾಡುವುದು ಈ ಸ್ಪಾ ವಿಶೇಷ.

ನಾಯಿಗಳಿಗೆ ನಾನಾ ಬಗೆಯ ಬಾಡಿಮಸಾಜ್‌ ಮಾಡುತ್ತಾರೆ. ದಾಸವಾಳ ಎಣ್ಣೆಯಿಂದ ಮಸಾಜ್‌ ಮಾಡಿದರೆ ನರಗಳು, ಡೆಡ್‌ ಸ್ಕಿನ್‌ಗಳಿಗೆ ಉತ್ತಮ. ನೋವು ನಿವಾರಣೆಗಾಗಿ ಶುಂಠಿ ಮಿಶ್ರ ತೆಂಗಿನೆಣ್ಣೆಯಿಂದ ಮಸಾಜ್‌ ಮಾಡುತ್ತಾರೆ. ಇದರಿಂದ ನಾಯಿಗಳ ಆರ್ಥರೈಟೀಸ್‌, ಮೈನೋವು ಕಡಿಮೆಯಾಗುತ್ತದೆ. ನಾಯಿಗಳಿಗೆ ಗಾಯಗಳಾಗಿಗಿದ್ದಲ್ಲಿ ಅಥವಾಒಂದೇ ಕಡೆ ಮಲಗಿದ್ದರಿಂದ ನೋವು ಕಾಣಿಸಿಕೊಂಡಲ್ಲಿ ವೈದ್ಯರ ಸಲಹೆ ಮೇರೆಗೆ ಈ ಮಸಾಜ್‌ ಮಾಡಲಾಗುತ್ತದೆ. ಹೇನಿನ ಕಾಟ ಅಧಿಕವಿದ್ದರೆ ಬೇವಿನೆಣ್ಣೆ ಮಸಾಜ್‌.ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ. ತಿಂಗಳಿಗೊಮ್ಮೆ ನಾಯಿಗಳಿಗೆಮಸಾಜ್‌ ಮಾಡಿಸಿದಲ್ಲಿ ನಾಯಿಗಳು ಚಟುವಟಿಕೆಯಿಂದ ಇರುತ್ತವೆ ಎಂಬುದು ಯೆಫ್ನಾ ಸಲಹೆ. ಹೇರ್‌ ಫಾಲ್‌ ಕಂಟ್ರೋಲಿಂಗ್‌ ಟ್ರೀಟ್‌ಮೆಂಟ್‌, ಹೇರ್‌ ಸ್ಮೂಥನಿಂಗ್‌ ಕೂಡ ಇಲ್ಲಿ ಲಭ್ಯ.

‘ನಾಯಿಗಳನ್ನು ಸ್ಟುಡಿಯೊಗೆ ಮಾಲೀಕರು ಕರೆದುಕೊಂಡು ಬಂದಾಗ ಅವುಗಳ ಸ್ವಭಾವ ನನಗೆ ತಿಳಿದಿರುವುದಿಲ್ಲ. ನಾವು ಅದರ ಬಾಡಿ ಲಾಂಗ್ವೇಜ್‌ ನೋಡಿಕೊಂಡು ಮೊದಲು ಅದರ ವಿಶ್ವಾಸ ಗಳಿಸುತ್ತೇವೆ. ಅನಂತರ ಅದಕ್ಕೆ ಯಾವುದೇ ರೀತಿ ಕಿರಿಕಿರಿ, ನೋವಾಗದಂತೆ ಬ್ರಷಿಂಗ್‌, ಕ್ಲೀನಿಂಗ್‌, ಸ್ನಾನ ಮಾಡಿಸುತ್ತೇವೆ’ ಎಂದು ನಾಯಿಗಳ ವಿಶ್ವಾಸ ಗಳಿಸುವ ತಂತ್ರಗಳನ್ನು ವಿವರಿಸುತ್ತಾರೆ.

ಪ್ಯಾಕೇಜ್‌ ₹1,800. ಹೇರ್‌ ಸ್ಟೈಲ್‌ ಪ್ಯಾಕೇಜ್‌ ₹2,000ರಿಂದ ಆರಂಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.