ADVERTISEMENT

ಬಿಳಿ ರೆಕ್ಕೆಗಳ ಬಾತುಕೋಳಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 19:45 IST
Last Updated 5 ಡಿಸೆಂಬರ್ 2019, 19:45 IST
ಬಿಳಿ ರೆಕ್ಕೆಗಳ ಬಾತುಕೋಳಿ
ಬಿಳಿ ರೆಕ್ಕೆಗಳ ಬಾತುಕೋಳಿ   

ಹಲವು ಜಲವಾಸಿ ಹಕ್ಕಿಗಳು ಅಳಿವಿನಂಚಿನಲ್ಲಿವೆ. ಇವುಗಳ ರಕ್ಷಣೆಗಾಗಿ ಹಲವು ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಅಳಿವಿನಂಚಿನಲ್ಲಿರುವ ದೊಡ್ಡಗಾತ್ರ ಬಾತುಕೋಳಿ ಪ್ರಭೇದಗಳಲ್ಲಿ ಒಂದಾದ ಬಿಳಿ ರೆಕ್ಕೆಗಳ ಬಾತುಕೋಳಿ (White Winged Duck) ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿಯೋಣ.

ಹೇಗಿರುತ್ತದೆ?

ದೇಹವೆಲ್ಲಾ ಕಪ್ಪು ಮತ್ತು ಕಂದು ಬಣ್ಣದ ಪುಕ್ಕದಿಂದ ಕೂಡಿರುತ್ತದೆ. ಕತ್ತಿನ ಮಧ್ಯಭಾಗದಿಂದ ತಲೆ ಮತ್ತು ಮುಖದವರೆಗೆ ಕಪ್ಪು ಮತ್ತು ಬಿಳಿಬಣ್ಣದ ಪುಕ್ಕ ಬೆಳೆದಿರುತ್ತದೆ. ರೆಕ್ಕೆಗಳೂ ಕಪ್ಪು–ಕಂದು ಮಿಶ್ರಿತ ಬಣ್ಣದಲ್ಲಿದ್ದರೂ ರೆಕ್ಕೆಗಳ ಅಂಚುಗಳು ಮಾತ್ರ ಬಿಳಿ ಬಣ್ಣದಲ್ಲಿರುತ್ತವೆ. ಹೀಗಾಗಿ ಇದನ್ನು ಬಿಳಿ ರೆಕ್ಕೆಗಳ ಬಾತುಕೋಳಿ ಎನ್ನುತ್ತಾರೆ. ಬಾಲ ಕೂಡ ಕಪ್ಪು–ಕಂದು ಮಿಶ್ರಿತ ಬಣ್ಣದಲ್ಲಿರುತ್ತದೆ. ಪಾದಗಳು ಮತ್ತು ಕಾಲುಗಳು ಹಳದಿ ಮತ್ತು ಬೂದು ಮಿಶ್ರಿತ ಬಣ್ಣದಲ್ಲಿರುತ್ತವೆ. ಮಧ್ಯಮ ಗಾತ್ರದ ದೃಢವಾದ ಕೊಕ್ಕು ಹಳದಿ ಬಣ್ಣದಲ್ಲಿದ್ದು, ಅಲ್ಲಲ್ಲಿ ಕಪ್ಪು ಮಚ್ಚೆಗಳು ಇರುತ್ತವೆ. ಕಣ್ಣುಗಳು ಪುಟ್ಟದಾಗಿದ್ದು, ಕಂದು ಮತ್ತು ಕಪ್ಪು ಬಣ್ಣದಲ್ಲಿರುತ್ತವೆ.

ADVERTISEMENT

ಎಲ್ಲಿದೆ?

ಆಗ್ನೇಯ ಏಷ್ಯಾದ ಹಲವು ರಾಜ್ಯಗಳಲ್ಲಿ ಈ ಹಕ್ಕಿಯನ್ನು ಕಾಣಬಹುದು. ಭಾರತ ಈಶಾನ್ಯ ರಾಜ್ಯಗಳಲ್ಲೂ ಇದರ ಸಂತತಿ ಇದೆ. ಬಾಂಗ್ಲಾದೇಶ, ಕಾಂಬೋಡಿಯಾ, ಇಂಡೊನೇಷ್ಯಾ, ಲಾವೊಸ್, ಮ್ಯಾನ್ಮಾರ್, ಥಾಯ್ಲೆಂಡ್, ವಿಯೆಟ್ನಾಂ, ಮಲೇಷ್ಯಾ.ಸದಾ ಹಸಿರಿನಿಂದ ಕೂಡಿರುವ ದಟ್ಟ ಅರಣ್ಯಗಳು, ಜೌಗು ಪ್ರದೇಶಗಳು ಮತ್ತು ನದಿ ಸರೋವರಗಳು ಇದರ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಕಾಡಿನಲ್ಲಿದ್ದಾಗ ಇವನ್ನು ಪತ್ತೆ ಮಾಡುವುದು ಕಷ್ಟ. ಮರಗಳ ಮಧ್ಯೆ ಸದಾ ಅವಿತುಕೊಂಡು, ಇತರ ಪ್ರಾಣಿ–ಪಕ್ಷಿಗಳ ಕಣ್ಣಿಗೆ ಕಾಣಿಸಿಕೊಳ್ಳದಂತೆ ಎಚ್ಚರವಹಿಸುತ್ತವೆ. ಸದಾ ಸಂಗಾತಿಯೊಂದಿಗೆ ಇರಲು ಇದು ಇಷ್ಟಪಡುತ್ತದೆ. ನಾಲ್ಕರಿಂದ ಆರು ಬಾತುಕೋಳಿಗಳು ಗುಂಪು ರಚಿಸಿಕೊಂಡಿರುತ್ತವೆ.

ಕಾಡಿನಲ್ಲಿರುವ ಕೊಳಗಳಲ್ಲಿ ಸದಾ ಈಜುತ್ತಾ ಸುತ್ತುತ್ತಿರುತ್ತವೆ. ಸದಾ ನೆರಳಿರುವಂತಹ ಪ್ರದೇಶಗಳಲ್ಲೇ ವಾಸಿಸಲು ಇಷ್ಟಪಡುತ್ತವೆ. ಇದುರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಹಗಲಿನಲ್ಲಿ ಮರಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ. ಮುಂಜಾನೆ ಮತ್ತು ಸಂಜೆ ಕೂಡ ಆಹಾರ ಅರಸುತ್ತಾ ಅಲೆಯುತ್ತದೆ.

ರಾತ್ರಿಯಲ್ಲಿ ಜೋರಾಗಿ ಕಿರುಚುತ್ತಾ ಸಾಗುವುದರಿಂದ ಇವುಗಳ ಧ್ವನಿ ಕಾಡಿನಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ಹಕ್ಕಿಯ ಪುಕ್ಕ ಉದುರಿ ಹೊಸ ಪುಕ್ಕ ಬೆಳೆಯುತ್ತದೆ. ಈ ಅವಧಿಯಲ್ಲಿ ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಇದು ಸುರಕ್ಷಿತ ಪ್ರದೇಶಗಳಲ್ಲಿ ವಾಸಿಸುತ್ತದೆ.

ಆಹಾರ

ಇದು ಸರ್ವಭಕ್ಷಕ ಹಕ್ಕಿ. ಜಲಸಸ್ಯಗಳೇ ಇದರ ಪ್ರಮುಖ ಆಹಾರ. ವಿವಿಧ ಬಗೆಯ ಕಾಳುಗಳು, ಜಲವಾಸಿ ಕೀಟಗಳು, ಬಸವನಹುಳುಗಳು, ಕಠಿಣಚರ್ಮಿಗಳು, ಮೃದ್ವಂಗಿಗಳು, ಪುಟ್ಟಗಾತ್ರದ ಹಾವುಗಳು, ಮೀನು, ಕಪ್ಪೆಗಳನ್ನು ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ವಯಸ್ಕ ಹಂತ ತಲುಪಿದ ನಂತರ ಗಂಡ ಬಾತುಕೋಳಿ ಹೆಣ್ಣು ಹಕ್ಕಿಯ ಗಮನೆ ಸೆಳೆಯುತ್ತದೆ. ಹೆಣ್ಣು ಬಾತುಕೋಳಿಗೆ ಇಷ್ಟವಾದರೆ ಎರಡೂ ಸೇರಿ ಕೂಡಿ ಬಾಳುತ್ತವೆ. ಮಳೆಬೀಳುವ ಅವಧಿಗೆ ಅನುಗುಣವಾಗಿ ಇವು ಸಂತಾನೋತ್ಪತ್ತಿ ನಡೆಸುತ್ತವೆ. ಇದಕ್ಕಾಗಿ ಸುರಕ್ಷಿತ ಪ್ರದೇಶಗಳಲ್ಲಿ ನೆಲದಿಂದ ಸುಮಾರು 12 ಮೀಟರ್‌ ಎತ್ತರದಲ್ಲಿರುವ ಮರದ ಪೊಟರೆಗಳಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ.

ಹೆಣ್ಣು ಹಕ್ಕಿ ಈ ಅವಧಿಯಲ್ಲಿ ಸುಮಾರು 16 ಮೊಟ್ಟೆಗಳನ್ನು ಇಡುತ್ತದೆ. ಸುಮಾರು 30 ದಿನಗಳ ಕಾಲ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳನ್ನು ಸುಮಾರು 14 ವಾರಗಳ ವರೆಗೆ ಪೋಷಕ ಹಕ್ಕಿಗಳು ಕಾಳಜಿಯಿಂದ ಆಹಾರ ಉಣಿಸಿ ಬೆಳೆಸುತ್ತವೆ.

ಸ್ವಾರಸ್ಯಕರ ಸಂಗತಿಗಳು

* ದೊಡ್ಡಗಾತ್ರದ ಬಾತುಕೋಳಿಯಾಗಿದ್ದರೂ ಅತ್ಯಂತ ಚುರುಕು ಬುದ್ಧಿಯ ಮತ್ತು ವೇಗವಾಗಿ ಓಡುವ ಹಕ್ಕಿ.

* ಮರಿಗಳು ಜನಿಸಿದಾಗ ಬೂದು–ಕಪ್ಪು ಮಿಶ್ರಿತ ಬಣ್ಣದಲ್ಲಿರುತ್ತವೆ. ಬೆಳೆದಂತೆಲ್ಲಾ ಆಕರ್ಷಕ ಪುಕ್ಕ ಮೂಡುತ್ತದೆ.

* ಇದರ ಪಾದಗಳಲ್ಲಿ ರಕ್ತನಾಳಗಳು ಇರುವುದಿಲ್ಲ. ಹೀಗಾಗಿ ಅತ್ಯಂತ ಶೀತ ವಾತಾವರಣದಲ್ಲಿ ಇದ್ದರೂ ಇದರ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ.

* ಇದಕ್ಕೆ ಮೂರು ಕಣ್ಣುರೆಪ್ಪೆಗಳು ಇರುತ್ತವೆ.

* ಇದರ ಬೆನ್ನು ಮತ್ತು ಬಾಲದ ಬೆಳೆಯುವ ಪುಕ್ಕ ಸಂಪೂರ್ಣ ಜಲನಿರೋಧಕವಾಗಿರುತ್ತದೆ. ನೀರಿನಲ್ಲಿ ಎಷ್ಟು ಹೊತ್ತು ಇದ್ದರೂ ದೇಹಕ್ಕೆ ಹಾನಿಯಾಗುವುದಿಲ್ಲ.

ಗಾತ್ರ ಮತ್ತು ಜೀವಿತಾವಧಿ,ದೇಹದ ತೂಕ- 2 ರಿಂದ 4 ಕೆ.ಜಿ., ದೇಹದ ಉದ್ದ- 66 ರಿಂದ 81 ಸೆಂ.ಮೀ,ರೆಕ್ಕೆಗಳ ಅಗಲ-116 ರಿಂದ 153 ಸೆಂ.ಮೀ,ಜೀವಿತಾವಧಿ-10 ರಿಂದ 15 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.