ADVERTISEMENT

ಕೀಟ–ನೋಟ: ಬಂಬಾರ್ಡಿಯರ್ ಬೀಟಲ್

ನೂರ್ ಸಮದ್ ಅಬ್ಬಲಗೆರೆ
Published 29 ಮೇ 2022, 19:30 IST
Last Updated 29 ಮೇ 2022, 19:30 IST
ಬಂಬಾರ್ಡಿಯರ್ ಬೀಟಲ್
ಬಂಬಾರ್ಡಿಯರ್ ಬೀಟಲ್   

ಕೀಟ ಲೋಕದಲ್ಲಿ ಅಡಗಿರುವ ವಿಸ್ಮಯಗಳನ್ನು ಹುಡುಕುತ್ತಾ ಹೋದರೆ ನಿತ್ಯ ಹೊಸ ಹೊಸ ಪುಟಗಳು ತೆರೆದುಕೊಳ್ಳುತ್ತಲೇ ಹೋಗುತ್ತವೆ. ಅದರಲ್ಲೂ ತಮ್ಮ ಜೀವ ರಕ್ಷಣೆಗಾಗಿ ವಿಚಿತ್ರ ಮಾರ್ಪಾಟುಗಳನ್ನು ಮಾಡಿಕೊಂಡಿರುವುದು ಪ್ರಾಯಶಃ ಪ್ರಾಣಿ ಪ್ರಪಂಚದಲ್ಲಿ ಕೀಟಗಳದ್ದೇ ಮೇಲುಗೈ ಎಂದರೆ ತಪ್ಪಾಗಲಾರದು. ಇಂತಹ ಪ್ರಕ್ರಿಯೆಗಳು ಚಾರ್ಲ್ಸ್ ಡಾರ್ವಿನ್‌ನ ‘ಸರ್ವೈವಲ್ ಆಫ್ ದಿ ಫಿಟೆಸ್ಟ್ (Survival of the fittest)’ ಎಂಬ ಜೀವ ವಿಕಾಸ ಸಿದ್ದಾಂತವನ್ನು ಸಾಕ್ಷೀಕರಿಸುತ್ತವೆ. ಇಂತಹ ಅದ್ಭುತ ಪ್ರಕ್ರಿಯೆಯೊಂದು ವಿಸ್ಮಯ ಕೀಟ ಬಂಬಾರ್ಡಿಯರ್ ಜೀರುಂಡೆಯಲ್ಲಿ (Bombardier beetle) ಅಡಗಿರುವುದು ವಿಶೇಷ.

ಮೊನ್ನೆ ನನ್ನ ಕ್ಯಾಮೆರ ಕಣ್ಣು ನಮ್ಮ ಮನೆಯ ಬಾಲ್ಕನಿಯಲ್ಲಿ ಈ ಜೀರುಂಡೆಯನ್ನು ಸೆರೆ ಹಿಡಿಯಿತು. ಈ ಕೀಟ ತನ್ನ ಉದರದಲ್ಲಿ ಬಾಂಬ್ ತಯಾರಿಸಿ ತನ್ನ ಶತ್ರುಗಳತ್ತ ಸಿಡಿಸುತ್ತದೆ. ಹೀಗೆಂದು ಹೇಳಿದರೆ ಅಚ್ಚರಿ ಮೂಡುತ್ತದೆಯಲ್ಲವೇ?

ಒಂದು ಪುಟ್ಟ ಕೀಟದೊಳಗೆ ಇದೆಲ್ಲ ಹೇಗಾಗುತ್ತದೆ ಗಮನಿಸಿದಾಗ ಅಚ್ಚರಿ ಎನಿಸುವ ವಿಚಾರಗಳು ತೆರೆದುಕೊಳ್ಳುತ್ತವೆ. ಅವು ಹೀಗಿವೆ;

ADVERTISEMENT

ಈ ಕೀಟಗಳ ಉದರದಲ್ಲಿ ಒಂದು ಯಂತ್ರಕ್ರಿಯೆ ರಚನಾ ವ್ಯವಸ್ಥೆಯಿದೆ. ಕೀಟವಿಜ್ಞಾನಿಗಳು ಇದನ್ನು ಬಹಳ ಸುಂದರವಾಗಿ ಸಂಶೋಧನಾತ್ಮಕವಾಗಿ ನಿರೂಪಿಸಿದ್ದಾರೆ. ಅದೇನೆಂದರೇ, ಈ ಕೀಟದ ಉದರದಲ್ಲಿ ಎರಡು ವಿಶಿಷ್ಟ ಗ್ರಂಥಿಗಳಿವೆ. ಒಂದು ಗ್ರಂಥಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್‌ (Hydrogen peroxide), ಮತ್ತೊಂದು ಗ್ರಂಥಿಯಲ್ಲಿ ಹೈಡ್ರೊಕ್ವಿನೋನ್ಸ್ (Hydroquinones) ಎಂಬ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ನಾವು ರಸಾಯನ ವಿಜ್ಞಾನದಲ್ಲಿ ಓದಿರುವಂತೆ ಹೈಡ್ರೋಜನ್ ಪೆರಾಕ್ಸೈಡ್ ಒಂದು ಸ್ಫೋಟಕ ವಸ್ತು. ಶತ್ರು ಕೀಟಗಳು ಎದುರಾದಾಗ ಅಥವಾ ನಾವೇನಾದರೂ ಈ ಕೀಟಕ್ಕೆ ತೊಂದರೆ ಕೊಟ್ಟಾಗ, ಈ ಗ್ರಂಥಿಗಳಿಂದ ಎರಡೂ ರಾಸಾಯನಿಕಗಳು ಏಕಕಾಲಕ್ಕೆ ಸ್ರವಿಸಿ ಮುಂದಿರುವ ಸ್ಫೋಟಕ ಕೋಣೆಯಲ್ಲಿ ಮಿಶ್ರಣಗೊಳ್ಳುತ್ತವೆ. ನಂತರ ಕೆಲವು ಕಿಣ್ವಗಳ (Enzymes) ಸಹಾಯದಿಂದ ಉತ್ಕರ್ಷಣ (Oxidation) ಪ್ರಕ್ರಿಯೆಗೆ ಒಳಗಾಗಿ ಇಲ್ಲಿ ಸ್ಫೋಟಗೊಂಡು ವಿಸರ್ಜಿಸುವ ತೂಬಿನಿಂದ(Firing Jet) ಭುಸ್..ಫಟ್ ಎಂಬ ಶಬ್ದದೊಂದಿಗೆ ನೇರವಾಗಿ ಶತ್ರುಗಳ ಮೈಮೇಲೆಯೇ ಸಿಡಿಸುತ್ತದೆ. ಬಲಿಷ್ಠ ಶತ್ರು ಕೀಟಗಳು ಹೆದರಿ ಓಡಿ ಹೋಗುತ್ತವೆ. ಓಡಿ ಹೋಗಲಾಗದ ಶತ್ರು ಕೀಟಗಳು ಸ್ಥಳದಲ್ಲೇ ಸಾವನ್ನಪ್ಪುತ್ತವೆ. ಈ ರಾಸಾಯನಿಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಶಾಖ ಉತ್ಪನ್ನವಾಗುತ್ತದೆ. ಸ್ಫೋಟಗೊಂಡಾಗ ಹೊರಹೊಮ್ಮುವ ಸ್ಫೋಟಕ ದ್ರವ್ಯವು 100 ಡಿಗ್ರಿ ಉಷ್ಣಾಂಶದಷ್ಟಿರುತ್ತದೆ ಮತ್ತು ಬಹಳ ಕೆಟ್ಟ ವಾಸನೆಯಿಂದಲೂ ಕೂಡಿರುತ್ತದೆ. ಕೋಲಿಯೋಪ್ಟರ (Coleoptera) ಗುಂಪು, ಕ್ಯಾರಾಬಿಡೆ (Carabidae) ಕುಟುಂಬದ ಬಹುತೇಕ ಸದಸ್ಯರಲ್ಲಿ ಇಂತಹ ವಿಸ್ಮಯಕರ ಆತ್ಮರಕ್ಷಣಾ ಪ್ರಕ್ರಿಯೆಯನ್ನು ನಾವು ಕಾಣಬಹುದಾಗಿದೆ.

ಬಾಂಬ್ ಸಿಡಿಸುವ ಈ ಬಂಬಾರ್ಡಿಯರ್ ಜೀರುಂಡೆಗಳನ್ನು ಸಾಮಾನ್ಯವಾಗಿ ಗ್ರೌಂಡ್ ಬೀಟಲ್ (Ground beetle)ಗಳೆಂದೂ ಕರೆಯುತ್ತಾರೆ. ನಾನು ಇದಕ್ಕೆ ನೆಲಜೀರುಂಡೆ ಎಂದು ಹೆಸರಿಸಲು ಬಯಸುತ್ತೇನೆ. ಈ ಕೀಟದ ಮರಿಹುಳುಗಳು ಮತ್ತು ಪ್ರೌಢಕೀಟಗಳು ಪರಭಕ್ಷಕ ಕೀಟ ಹಾಗೂ ನಿಶಾಚರಿಗಳಾಗಿದ್ದು ರಾತ್ರಿ ಸಮಯದಲ್ಲಿ ಇತರೇ ಕೀಟಗಳನ್ನು ತಿಂದು ಬದುಕುತ್ತವೆ. ಇಂತಹ ಬಗೆಬಗೆಯ ವಿಸ್ಮಯಗಳನ್ನು ಹೊತ್ತ ಸಾವಿರಾರು ಕೀಟಗಳು ಆಗಾಗ್ಗೆ ನಮ್ಮನ್ನು ಅಚ್ಚರಿ ಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ.

(ಲೇಖಕರು: ಕೃಷಿ ಅಧಿಕಾರಿ, ಬೆಂಗಳೂರು)

ಚಿತ್ರ: ಲೇಖಕರದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.