ADVERTISEMENT

ಪ್ರಕೃತಿಯೆಡೆಗಿನ ಕಾಳಜಿ ನಿರಂತರವಾಗಿರಲಿ

ಹೊಂಬೆಳಕು

ಆರ್.ಶ್ರೀನಾಗೇಶ್
Published 17 ಸೆಪ್ಟೆಂಬರ್ 2019, 20:21 IST
Last Updated 17 ಸೆಪ್ಟೆಂಬರ್ 2019, 20:21 IST

ಮಾಂಟ್ರಿಯಾಲ್ ಪ್ರೊಟೊಕೋಲ್ ಎಂದು ಖ್ಯಾತವಾಗಿರುವ ಘೋಷಣೆಯನ್ನು 1987ರಲ್ಲಿ ಮಾಂಟ್ರಿಯಾಲ್ ನಡೆದ ಅಂತರರಾಷ್ಟ್ರ ಸಮ್ಮೇಳನದಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ಕಾರಣ, ಪ್ರತಿ ವರ್ಷ ಸೆಪ್ಟೆಂಬರ್ 16 ಅನ್ನು ವಿಶ್ವ ಓಜೋನ್ ದಿನವನ್ನಾಗಿ ಆಚರಿಸಲಾಗುತ್ತಿದೆ.

ನಮ್ಮ ಭೂಮಿ ವಿವಿಧ ಪದರಗಳಿಂದ ಆವರಿಸಲ್ಪಟ್ಟಿದೆ ಎಂಬ ವಿಚಾರ ನಿಮಗೆ ತಿಳಿದಿರುತ್ತದೆ. ಭೂಮಿಯಿಂದ ಎತ್ತರಕ್ಕೆ ಹೋಗುತ್ತ ಈ ಪದರಗಳನ್ನು ದಾಟಿಕೊಂಡು ಹೋಗುತ್ತೇವೆ. ಅದರಂತೆಯೇ ಸೂರ್ಯನ ಕಿರಣಗಳು ಈ ಪದರಗಳನ್ನು ದಾಟಿಕೊಂಡು ಭೂಮಿಯತ್ತ ಬರುತ್ತವೆ. ಈ ಪದರಗಳನ್ನು ದಾಟುವ ಸಮಯದಲ್ಲಿ ಕಿರಣಗಳ ಕೆಲವು ಅಂಶಗಳನ್ನು ಪದರಗಳು ಹಿಡಿದು ಹಾಕುತ್ತವೆ (ಜರಡಿ ಹಿಡಿದಂತೆ).

ಕಾಮನ ಬಿಲ್ಲಿನಲ್ಲಿ ಏಳು ಬಣ್ಣಗಳನ್ನು ನೋಡಿರುತ್ತೀರಿ. ಅವು ಒಟ್ಟಾಗಿ ಬಿಳಿಯ ಬಣ್ಣವನ್ನು ಕೊಡುತ್ತವೆ ಎಂಬುದೂ ನಿಮಗೆ ಗೊತ್ತಿದೆ. ಈ ಬಣ್ಣಗಳು ವಿವಿಧ ಶಾಖದ ಪ್ರಖರತೆ ಹೊಂದಿರುತ್ತವೆ ಎನ್ನುವುದು ಪ್ರಾಯಶಃ ನಿಮಗೆ ತಿಳಿದಿರಬಹುದು.

ADVERTISEMENT

ಈ ಪ್ರಖರತೆ ಹಲವು ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗುತ್ತದೆ. ವಯೊಲೆಟ್ ಶ್ರೇಣಿಗಿಂತ ಹೆಚ್ಚು ಪ್ರಖರತೆಯ ಕಿರಣಗಳನ್ನು ಅಲ್ಟ್ರಾ ವಯೊಲೆಟ್ ಎಂದು ಕರೆಯಲಾಗುವುದು. ಈ ಲೇಖನ ಭೌತವಿಜ್ಞಾನದ ಪಾಠವಾಗಬಾರದು ಎನ್ನುವ ಕಾರಣಕ್ಕೆ ಒಂದು ಸಾಮಾನ್ಯ ರೀತಿಯಲ್ಲಿ ಇದನ್ನು ವಿವರಿಸುವ ಪ್ರಯತ್ನ ಮಾಡಿದ್ದೇನೆ

ಈ ಅಲ್ಟ್ರಾ ವಯೊಲೆಟ್ ಕಿರಣಗಳನ್ನು ಓಝೋನ್ ಪದರ ಹಿಡಿದಿಡುತ್ತದೆ. ಈ ಪದರದಲ್ಲಿ ರಂಧ್ರವಾದ ಕಾರಣ ಕೆಲವು ಕಿರಣಗಳು ಭೂಮಿಯನ್ನು ತಲುಪಿ ಹಲವು ರಾಸಾಯನಿಕ ಪ್ರಕ್ರಿಯೆಗಳನ್ನು ಉಂಟು ಮಾಡಿ, ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ.

ಚರ್ಮದ ಸುಡುವಿಕೆ, ದೃಷ್ಟಿದೋಷ ಮತ್ತು ಹಲವು ರೀತಿಯ ಕ್ಯಾನ್ಸರ್ ತಂದೊಡ್ಡಬಹುದು. ಈ ರಂಧ್ರವನ್ನು ಮುಚ್ಚಲು ಜಗತ್ತಿನ ಎಲ್ಲ ರಾಷ್ಟ್ರಗಳೂ ಏಕಪ್ರಕಾರವಾಗಿ ಪ್ರಯತ್ನಿಸಬೇಕು ಎನ್ನುವುದೇ ಈ ಓಝೋನ್ ದಿನಾಚರಣೆಯ ಉದ್ದೇಶ.

*ಸ್ವಂತ ಕಾರುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸೈಕಲ್, ನಡಿಗೆಗಳಿಗೆ ಒತ್ತು ಕೊಡಬೇಕು.
*ಮನೆಗಳಲ್ಲಿ ರಾಸಾಯನಿಕಗಳ ಬದಲಿಗೆ ಪರಿಸರಸ್ನೇಹಿಯಾದ ಕೊಳೆನಾಶಕಗಳನ್ನು ಬಳಸಬೇಕು.
*ಹವಾ ನಿಯಂತ್ರಕಗಳು, ರೆಫ್ರಿಜರೇಟರ್ ಮುಂತಾದವುಗಳ ಬಳಕೆಯ ಮೇಲೆ ನಿಯಂತ್ರಣವಿರಬೇಕು. ನಮ್ಮ ಉಡುಪುಗಳ ಬಳಕೆ ವಾತಾವರಣಕ್ಕೆ ಅನುಕೂಲವಾಗಿರಬೇಕು, ತಂಪುಪಾನೀಯಗಳಿಗೆ ಹೂಜಿಯಂತಹವುಗಳ ಬಳಕೆಯಾಗಬೇಕು.
*ಬಳಸದ ಸಮಯದಲ್ಲಿ ವಿದ್ಯುದುಪಕರಣಗಳನ್ನು ಆಫ್ ಮಾಡಿರಬೇಕು.
*ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಬೇಕು.
*ಬಹಳ ಮುಖ್ಯವಾಗಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು.

ಯಾವುದೇ ಅನುಕೂಲಗಳು ಸುಲಭವಾಗಿ ಸಿಗುವುದಿಲ್ಲ. ಅದಕ್ಕೆ ಬೆಲೆ ಕೊಡಬೇಕಾಗುತ್ತದೆ. ಪ್ರಕೃತಿಯೆಡೆಗಿನ ಕಾಳಜಿ ನಿರಂತರವಾಗಿರಲಿ. ಇವನ್ನು ಕಾಪಾಡಿಕೊಳ್ಳಲು ಎಲ್ಲರೂ ಕೈ ಜೋಡಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.