ADVERTISEMENT

ವೇಗವಾಗಿ ಕರಗುತ್ತಿವೆ ಹಿಮಾಲಯದ ಹಿಮನದಿಗಳು: ಅಧ್ಯಯನ ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2021, 7:42 IST
Last Updated 21 ಡಿಸೆಂಬರ್ 2021, 7:42 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ಹಿಮಾಲಯದ ಹಿಮನದಿಗಳು ವೇಗವಾಗಿ ಕರಗುತ್ತಿವೆ ಎಂಬುದಕ್ಕೆ ಹೊಸದೊಂದು ಪುರಾವೆ ಸೋಮವಾರ ದೊರೆತಿದೆ.

ಹಿಮಾಲಯದ ಹಿಮನದಿಗಳು ಅನಿರೀಕ್ಷಿತ ಮಟ್ಟದಲ್ಲಿ ಕರಗುತ್ತಿವೆ. ಕಳೆದ ಕೆಲವು ದಶಕಗಳಲ್ಲಿ ಈ ಹಿಮನದಿಗಳು ಸುಮಾರು 10 ಪಟ್ಟು ಕರಗಿವೆ. 400–700 ವರ್ಷಗಳ ಹಿಂದಿನ ‘ಲಿಟಲ್ ಐಸ್ ಏಜ್‌’ ನಂತರ ಇದೇ ಮೊದಲ ಬಾರಿಗೆ ಈ ಮಟ್ಟದಲ್ಲಿ ಹಿಮನದಿಗಳು ಕರಗುತ್ತಿವೆ ಎಂದು ಇಂಗ್ಲೆಂಡ್‌ನ ಲೀಡ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದ ತಂಡದ ಅಧ್ಯಯನ ವರದಿ ತಿಳಿಸಿದೆ.

‘ಲಿಟಲ್ ಐಸ್ ಏಜ್‌’ ಸಂದರ್ಭದಲ್ಲಿ ಇದ್ದುದಕ್ಕಿಂತ ಶೇ 40ರಷ್ಟು, ಅಂದರೆ ಸುಮಾರು 390–586 ಕ್ಯೂಬಿಕ್ ಕಿಲೋಮೀಟರ್‌ರಷ್ಟು ಹಿಮಗಡ್ಡೆಗಳು ಕರಗಿಹೋಗಿವೆ. ಇದು ಮಧ್ಯ ಯುರೋಪ್‌ನ ಆಲ್ಪಸ್‌, ಕಕಾಸಸ್ ಮತ್ತು ಸ್ಕ್ಯಾಂಡಿನೇವಿಯಾದಲ್ಲಿ ಇರಬಹುದಾದ ಒಟ್ಟು ಹಿಮಗಡ್ಡೆಗಳಿಗೆ ಸಮಾನ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಪ್ರಪಂಚದ ಇತರ ಕಡೆಗಳಲ್ಲಿರುವ ಹಿಮನದಿಗಳಿಗಿಂತಲೂ ವೇಗವಾಗಿ, ಅನಿರೀಕ್ಷಿತ ಮಟ್ದಲ್ಲಿ ಭಾರತದ ಹಿಮಗಡ್ಡೆಗಳು ಕರಗುತ್ತಿವೆ. ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಲಕ್ಷಾಂತರ ಜನರಿಗೆ ನೀರು ಪೂರೈಕೆ ಮಾಡುವ ವಿಚಾರದಲ್ಲಿ ಸಮಸ್ಯೆಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

‘ಹಿಮಾಲಯದ ಹಿಮನದಿಗಳ ಮಂಜುಗಡ್ಡೆಗಳು ಕಳೆದ ಕೆಲವು ಶತಮಾನಗಳ ಜತೆ ಹೋಲಿಸಿದರೆ ಹತ್ತು ಪಟ್ಟು ವೇಗವಾಗಿ ಕರಗಿ ಹೋಗುತ್ತಿವೆ. ಕಳೆದ ಕೆಲವೇ ದಶಕಗಳಲ್ಲಿ ಕರಗುವಿಕೆಯ ವೇಗ ವೃದ್ಧಿಯಾಗಿದೆ. ಇದಕ್ಕೆ ಹವಾಮಾನ ಬದಲಾವಣೆಯೂ ಕಾರಣ ಎಂಬುದು ನಮ್ಮ ಅಧ್ಯಯನದಲ್ಲಿ ತಿಳಿದುಬಂದಿದೆ’ ಎಂದು ಲೀಡ್ಸ್ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ಉಪ ಮುಖ್ಯಸ್ಥ, ಅಧ್ಯಯನ ವರದಿ ಸಿದ್ಧಪಡಿಸಿದ ಲೇಖಕರಲ್ಲಿ ಒಬ್ಬರಾದ ಜೊನಾಥನ್ ಕ್ಯಾರಿವಿಕ್ ಮಾಹಿತಿ ನೀಡಿದ್ದಾರೆ.

ಹಿಮಾಲಯ ಪರ್ವತ ಶ್ರೇಣಿಯು ವಿಶ್ವದ ಮೂರನೇ ಅತಿದೊಡ್ಡ ಹಿಮನದಿಗಳ ತವರಾಗಿದೆ. ಅಂಟಾರ್ಟಿಕಾ ಮತ್ತು ಆರ್ಕ್‌ಟಿಕ್ ನಂತರದ ಸ್ಥಾನದಲ್ಲಿದೆ.

ಆಹಾರ ಮತ್ತು ಇಂಧನಕ್ಕಾಗಿ ಏಷ್ಯಾದ ನದಿ ವ್ಯವಸ್ಥೆಯನ್ನು ಅವಲಂಬಿಸಿರುವ ಲಕ್ಷಾಂತರ ಮಂದಿಯ ಮೇಲೆ ಹಿಮನದಿ ಕರಗುವಿಕೆ ತೀವ್ರ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.