ADVERTISEMENT

ವಾರಾಂತ್ಯಕ್ಕೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಸೃಷ್ಟಿ ಸಾಧ್ಯತೆ: ಹವಾಮಾನ ಇಲಾಖೆ

ಪಿಟಿಐ
Published 18 ಅಕ್ಟೋಬರ್ 2022, 9:21 IST
Last Updated 18 ಅಕ್ಟೋಬರ್ 2022, 9:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ಹೊಂದಿಕೊಂಡಂತೆ ಬಂಗಾಳಕೊಲ್ಲಿಯಲ್ಲಿ ಮಂಗಳವಾರ ಕಡಿಮೆ ಒತ್ತಡ ಪ್ರದೇಶದಂಥ ವಿದ್ಯಮಾನ ಸೃಷ್ಟಿಯಾಗಿದ್ದು, ವಾರಾಂತ್ಯದ ವೇಳೆಗೆ ಅದು ತೀವ್ರ ಸ್ವರೂಪ ಪಡೆದು ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.

ಮುಂದಿನ 48 ಗಂಟೆಗಳಲ್ಲಿ ಆಗ್ನೇಯ ಮತ್ತು ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಸ್ಪಷ್ಟವಾಗಿ ರೂಪುಗೊಳ್ಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

‘ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾದ ನಂತರ ಅದು ಪ್ರಬಲಗೊಂಡು, ಪಶ್ಚಿಮ-ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ. ಅಕ್ಟೋಬರ್ 22ರ ಬೆಳಿಗ್ಗೆ ಮಧ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಬಹುದು. ನಂತರ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿ ಮೇಲೆ ಚಂಡಮಾರುತದ ರೂಪ ಪಡೆದುಕೊಂಡು ವೇಗ ಪಡೆಯಲಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ADVERTISEMENT

‘ಚಂಡಮಾರುತದ ನಿರೀಕ್ಷೆ ಇದೆಯಾದರೂ, ಅದರ ತೀವ್ರತೆ, ಅದು ಯಾವ ದಿಕ್ಕಿಗೆ ಚಲಿಸಲಿದೆ ಎಂಬುದರ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳಲು ಆಗದು’ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ಹೇಳಿದ್ದಾರೆ.

‘ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾದ ನಂತರವೇ ನಾವು ಚಂಡಮಾರುತದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯ’ ಎಂದು ಅವರು ತಿಳಿಸಿದರು.

ಚಂಡಮಾರುತದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ದೃಷ್ಟಿಯಿಂದ ಒಡಿಶಾ ಸರ್ಕಾರವು ತನ್ನ ಅಧಿಕಾರಿಗಳು, ಸಿಬ್ಬಂದಿಗೆ ಅಕ್ಟೋಬರ್ 23 ರಿಂದ 25 ರವರೆಗೆ ರಜಾ ರದ್ದು ಮಾಡಿದೆ. ಅಲ್ಲಿನ ಕರಾವಳಿ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದರ ಜತೆಗೇ, ಕರ್ನಾಟಕದಲ್ಲಿ ಇದೇ 22 ವರೆಗೆ ಮಳೆಯಾಗುವ ಸಾಧ್ಯತೆಗಳು ಇರುವುದಾಗಿಯೂ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.