ADVERTISEMENT

ಪ್ಲಾಸ್ಟಿಕ್‌ ಕಡಿವಾಣಕ್ಕೆ ‘ಕೂಪನ್ ವ್ಯವಸ್ಥೆ’

ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಅನುಷ್ಠಾನ

ಜಿ.ಬಿ.ನಾಗರಾಜ್
Published 8 ಜುಲೈ 2018, 11:50 IST
Last Updated 8 ಜುಲೈ 2018, 11:50 IST
ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಿದ ನಾಮಫಲಕ
ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಿದ ನಾಮಫಲಕ   

ಚಿತ್ರದುರ್ಗ: ಪರಿಸರ ಹಾಗೂ ವನ್ಯಜೀವಿಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್‌ ವಸ್ತುಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ ಇಲಾಖೆ, ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ‘ಕೂಪನ್ ವ್ಯವಸ್ಥೆ’ ಜಾರಿಗೊಳಿಸಿದೆ.

ಪ್ಲಾಸ್ಟಿಕ್‌ ಬಾಟಲಿ, ಕ್ಯಾರಿಬ್ಯಾಗ್‌ ಹೊಂದಿದ ಪ್ರವಾಸಿಗರಿಂದ ₹ 10 ಠೇವಣಿ ಪಡೆದು ಮೃಗಾಲಯಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ಹೊರನಡೆಯುವ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಬಾಟಲಿ, ಕ್ಯಾರಿಬ್ಯಾಗ್‌ ತೋರಿಸಿ ಠೇವಣಿ ಮರಳಿ ಪಡೆಯುವ ವ್ಯವಸ್ಥೆ ಇದಾಗಿದೆ. ‘ಪ್ಲಾಸ್ಟಿಕ್‌ ಮಾಲಿನ್ಯ ಹಿಮ್ಮೆಟ್ಟಿಸಿ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಈ ವ್ಯವಸ್ಥೆ ಅನುಷ್ಠಾನಗೊಳಿಸಿದೆ.

ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಯುವ ಉದ್ದೇಶದಿಂದ ಅರಣ್ಯ ಇಲಾಖೆ ನೂತನ ಕ್ರಮಕ್ಕೆ ನಾಂದಿ ಹಾಡಿದೆ. ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಪ್ಲಾಸ್ಟಿಕ್‌ ಮುಕ್ತ ವಲಯವನ್ನಾಗಿ ರೂಪಿಸುವುದು ಇದರ ಉದ್ದೇಶ. ಪ್ಲಾಸ್ಟಿಕ್‌ ಉತ್ಪನ್ನಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಕುರಿತು ಅರಿವು ಮೂಡಿಸುವ ಕೆಲಸವೂ ಈ ಮೂಲಕ ನಡೆಯುತ್ತಿದೆ.

ADVERTISEMENT

ಜೋಗಿಮಟ್ಟಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿರುವ ಆಡುಮಲ್ಲೇಶ್ವರ ಪ್ರವಾಸಿಗರ ಆಕರ್ಷಣೀಯ ತಾಣವಾಗುತ್ತಿದೆ. ಬಯಲುಸೀಮೆಯ ಊಟಿ ಎಂದೇ ಪ್ರಖ್ಯಾತವಾಗಿರುವ ಗಿರಿಧಾಮ ಹಲವು ಪ್ರಾಣಿಗಳಿಗೆ ಆಶ್ರಯ ಒದಗಿಸಿದೆ. ಪ್ರತಿ ವರ್ಷ ಸುಮಾರು ಒಂದು ಲಕ್ಷ ಪ್ರವಾಸಿಗರು ಕಿರು ಮೃಗಾಲಯ ವೀಕ್ಷಣೆ ಮಾಡುತ್ತಿದ್ದಾರೆ. 35 ಕೃಷ್ಣಮೃಗ, 4 ಚಿರತೆ, 1 ಕರಡಿ, 2 ಹೆಬ್ಬಾವು, 2 ಮೊಸಳೆ ಹಾಗೂ ಹಲವು ಪಕ್ಷಿಗಳನ್ನು ಕಣ್ತುಂಬಿಕೊಳ್ಳಲು ಬರುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ.

ನಗರಕ್ಕೆ ಹೊಂದಿಕೊಂಡಿರುವ ಈ ಮೃಗಾಲಯಕ್ಕೆ ಬರುವ ಬಹುತೇಕ ಪ್ರವಾಸಿಗರು ಪ್ಲಾಸ್ಟಿಕ್‌ ನೀರಿನ ಬಾಟಲಿ ತರುತ್ತಾರೆ. ತಿಂಡಿ–ತಿನಿಸುಗಳನ್ನು ಹೊಂದಿದ ಕ್ಯಾರಿಬ್ಯಾಗ್‌ಗಳು ಇವರ ಕೈಯಲ್ಲಿರುತ್ತವೆ. ತಿನಿಸು ತಿಂದು, ನೀರು ಕುಡಿದ ಬಳಿಕ ಇವನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರವೃತ್ತಿ ಅನೇಕರಲ್ಲಿದೆ. ಇದರಿಂದ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಕಣ್ಣಿಗೆ ರಾಚುತ್ತಿದೆ.

ಕಾಡುಪ್ರಾಣಿಗಳ ಆವಾಸಸ್ಥಾನವಾಗಿರುವ ಜೋಗಿಮಟ್ಟಿಯ ಎಲ್ಲೆಂದರಲ್ಲಿ ಕಾಣುವ ಪ್ಲಾಸ್ಟಿಕ್‌ ವನ್ಯಜೀವಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಭೂಮಿಯಲ್ಲಿ ಕೊಳೆಯದ ಈ ವಸ್ತುವಿನ ವಿಷಕಾರಿ ಅಂಶಗಳು ಪರಿಸರ ಸೇರಿ ಪ್ರಾಣಿಗಳ ಜೀವಕ್ಕೆ ಹಾನಿಯುಂಟು ಮಾಡುತ್ತಿವೆ.

ಟಿಕೆಟ್‌ ಪಡೆದು ಮೃಗಾಲಯ ಪ್ರವೇಶಿಸುವ ಪ್ರತಿಯೊಬ್ಬರನ್ನು ಪರಿಶೀಲಿಸಲಾಗುತ್ತದೆ. ಪ್ಲಾಸ್ಟಿಕ್‌ ಬಾಟಲಿ, ಕ್ಯಾರಿ ಬ್ಯಾಗ್‌ ಹೊಂದಿದವರಿಂದ ₹ 10 ಠೇವಣಿ ಪಡೆದು ಕೂಪನ್‌ ವಿತರಿಸಲಾಗುತ್ತದೆ. ಮೃಗಾಲಯದಿಂದ ಹೊರಬರುವಾಗ ಪ್ಲಾಸ್ಟಿಕ್‌ ವಸ್ತು ಹಾಗೂ ಕೂಪನ್‌ ಪ್ರದರ್ಶಿಸಿದವರಿಗೆ ಮಾತ್ರ ಠೇವಣಿ ಮರಳಿಸಲಾಗುತ್ತದೆ. ಇಲ್ಲವಾದರೆ, ಈ ಹಣವನ್ನು ಮುಟ್ಟುಗೋಲು ಹಾಕಿಕೊಂಡು ದಂಡವೆಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.