ADVERTISEMENT

World Environment Day| ವಿಕಾಸದ ಹೆಸರಿನಲ್ಲಿ ವಿನಾಶ..

ಮಾನವನ ಮಿತಿಮೀರಿದ ದುರಾಸೆಯಿಂದಾಗಿ ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 5:14 IST
Last Updated 5 ಜೂನ್ 2022, 5:14 IST
   

ಇಂದು ನಾವು ವಾಸಮಾಡುತ್ತಿರುವ ಈ ಭೂಮಿಯು ಸೃಷ್ಟಿಯಾಗಲು ಕೋಟ್ಯಾನುಕೋಟಿ ವರ್ಷಗಳು ಬೇಕಾಗಿವೆ. ಆದರೆ ಇತ್ತೀಚಿನ ನೂರಿನ್ನೂರು ವರ್ಷಗಳಲ್ಲಿ ಮಾನವನ ಮಿತಿಮೀರಿದ ದುರಾಸೆಯ ಪರಿಣಾಮವಾಗಿ ಭೂಗ್ರಹದಲ್ಲಿ ಜೀವಿಗಳು ಬದುಕಲು ಆಧಾರವಾಗಿರುವ ಮಣ್ಣು, ನೀರು ಮತ್ತು ಗಾಳಿ ಸಾಕಷ್ಟು ಮಾಲಿನ್ಯವಾಗಿವೆ.

ನಾವು ಬೇರೂರಿ ಬೆಳೆದ ‘ಸಹಜ ಪ್ರಕೃತಿ’ಯಿಂದ ದಿನದಿನಕ್ಕೆ ದೂರವಾಗುತ್ತಾ ಹೆಚ್ಚು -ಹೆಚ್ಚಾಗಿ ಕೃತಕತೆಗೆ ಮಾರುಹೋಗಿ ಅದರ ಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ.ಆಕ್ರಮಣಶೀಲ ಕೈಗಾರಿಕೀಕರಣದಿಂದ, ಅರಣ್ಯನಾಶದಿಂದ, ವಿವೇಚನೆಯಿಲ್ಲದ ನಗರೀಕರಣದಿಂದ, ಜಾಗತೀಕರಣದ ಪ್ರಭಾವದಿಂದಾಗಿ ಮಾನವನ ಆಸೆಯು ದುರಾಸೆಯಾಗಿ ಪರಿಸರದ ನಾಶಕ್ಕೆ ನಾಂದಿ ಹಾಡಿದೆ.

ಸಹಜ ಜಗತ್ತಿನ ಮುಖವನ್ನೇ ಬದಲಾಯಿಸುತ್ತಿರುವ ಅದ್ಭುತ ಯಂತ್ರಗಳ ಮಹಾನ್ ಶಕ್ತಿಯನ್ನು ನಾವು ಮೆಚ್ಚಿಕೊಳ್ಳುತ್ತಿದ್ದೇವೆ. ಆ ಮಾರ್ಗದಲ್ಲಿ ನಮ್ಮ ನಿಸರ್ಗದ ರಮ್ಯತೆಗೆ ಆಗುತ್ತಿರುವ ಹಾನಿಯನ್ನು ಕಡೆಗಾಣಿಸುತ್ತಿದ್ದೇವೆ. ನಿತ್ಯ ದೇಶ-ವಿದೇಶಗಳಲ್ಲಿ ತಯಾರಾಗುತ್ತಿರುವ ವಿನೂತನ ಬಗೆಯ ಸಹಸ್ರಾರು ಆಕರ್ಷಕ ವಸ್ತುಗಳಿಗೆ ಮಾರುಹೋಗುತ್ತಿದ್ದೇವೆ.

ADVERTISEMENT

ಗ್ರಾಹಕ ಸಂಸ್ಕೃತಿ ನಮ್ಮನ್ನು ಬಲವಾಗಿ ಆವರಿಸುತ್ತಲಿದೆ. ಇದರ ಪ್ರಭಾವದಿಂದಾಗಿ ನಮ್ಮಂಥಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಚಲಿತಗೊಂಡು ನಮಗೆ ಅರಿವಿಲ್ಲದಂತೆ ನಮ್ಮ ಪರಿಸರ ನಾಶಕ್ಕೆ ಪರೋಕ್ಷವಾಗಿ ಕಾರಣವಾಗಿದೆ. ಇಂದು ಮಾಲಿನ್ಯವನ್ನು ಕಡಿಮೆ ಮಾಡಲು ಇಲ್ಲವೆ ನಿವಾರಿಸಲು ಅಗಾಧ ಪ್ರಮಾಣದ ಹಣ ವೆಚ್ಚ ಮಾಡಬೇಕಾಗುತ್ತದೆ. ಹಾಗಾಗಿ ಆಧುನಿಕ ಸಮಾಜದಲ್ಲಿ ಜೀವನ ಎನ್ನುವುದು ದಿನದಿನಕ್ಕೆ ದುಬಾರಿಯಾಗುತ್ತ ಮಾರಾಟದ ಸರಕಾಗಿ ಪರಿಣಮಿಸಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಕಾರ್ಖಾನೆಗಳು ಹೆಚ್ಚು-ಹೆಚ್ಚು ಉತ್ಪಾದನೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೇರಳವಾದ ನೈಸರ್ಗಿಕ ಸಂಪತ್ತಿನ ಬಳಕೆಯು ಅವ್ಯಾಹತವಾಗಿ ಸಾಗಿದೆ. ಸರ್ಕಾರಗಳು ಈ ರೀತಿ ಬೆಳವಣಿಗೆಗಳೇ ಎಲ್ಲವಕ್ಕೂ ತಕ್ಕ ಉಪಾಯವೆಂದು ನಂಬಿಕೊಂಡು ಕೂತಿವೆ. ಆರ್ಥಿಕ ಬೆಳವಣಿಗೆಯ ಗತಿಯು ಸತತವಾಗಿ ಮೇಲೆರುತ್ತ ಕೈಗೆ ಸಿಗದ ಮರೀಚಿಕೆಯಾಗುತ್ತಿದೆ. ಅನೇಕ ಲೆಕ್ಕಾಚಾರದ ಪ್ರಕಾರ ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ನಾವು ದಟ್ಟಕಾಡಿನ ಬಹುಭಾಗವನ್ನು ಕಳೆದುಕೊಂಡಿದ್ದೇವೆ. ನದಿ- ಸಾಗರವನ್ನು ಮಲಿನಗೊಳಿಸಿದ್ದೇವೆ.ಓಜೋನ್ ಪದರದ ನಾಶಕ್ಕೆ ಕಾರಣರಾಗಿದ್ದೇವೆ. ಭೂಗ್ರಹದ ತಾಪಮಾನ ಏರಿಸಿ ಜೀವಸಂಕುಲದ ಸರ್ವನಾಶವನ್ನು ಸನಿಹಕ್ಕೆ ತರುತ್ತಿದ್ದೇವೆ.

ಈ ಭೂಗ್ರಹದ ಜೀವವೈವಿಧ್ಯ ನಿಸರ್ಗದ ವರಪ್ರಸಾದವಾಗಿದೆ. ಮಾನವ ಜೀವಿಸಲು ಸಾಧ್ಯವಾಗಿದ್ದೇ ಈ ಜೈವಿಕ ವೈವಿಧ್ಯತೆಯಿಂದ.
ಆದರೆ ನಮ್ಮ ವಿವೇಚನೆಯಿಲ್ಲದ ಪ್ರಗತಿಯ ಹೆಸರಿನ ಕೆಲ ಯೋಜನೆಗಳು ಈ ಜೀವ ವೈವಿಧ್ಯದ ಬುಡವನ್ನು ವಿನಾಶಗೊಳಿಸತೊಡಗಿವೆ.

ನಮ್ಮ ಪ್ರಾಂಪಚಿಕ ಸುಖಭೋಗಲಾಲಸೆಯೇ ಈ ಪರಿಸರದ ಅನಾಹುತದ ಆಪತ್ತಿನ ಬಳಿಗೆ ಕರೆತಂದಿದೆ. ಇಂತಹ ಅಪಾಯವನ್ನು ತಡೆಯುವ ಪ್ರಯತ್ನ ಮಾಡಲು ನಾವೆಲ್ಲ ಇನ್ನೂ ಹೆಚ್ಚು ನೈತಿಕವಾಗಿ, ಬೌದ್ಧಿಕವಾಗಿ, ಶಾಶ್ವತ ಚಿಂತನೆಯನ್ನು ನಡೆಸಿ ಸರಳ ಬದುಕಿನಲ್ಲಿ ಸಾಗಿ ಪರಿಸರದ ರಕ್ಷಣೆಯ ಜವಾವ್ದಾರಿಯನ್ನು ನಿಭಾಯಿಸಬೇಕಾಗಿದೆ. ಏಕೆಂದರೆ ಪರಿಸರವನ್ನು ನಾವು ರಕ್ಷಿಸಿದರೆ ನಮ್ಮನ್ನು ಪರಿಸರ ರಕ್ಷಿಸುತ್ತದೆ. ಕೊಡಲಿಯನ್ನು ಹಿಡಿದು ಮರಕಡಿಯುವವನಿಗೂ ವೃಕ್ಷ ನೆರಳು ನೀಡುತ್ತದೆ ಎಂಬುದನ್ನು ನಾವು ಮರೆಯಬಾರದು.
(ಲೇಖಕರು ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.