ADVERTISEMENT

ರಾಜ್ಯದ 10 ನಗರಗಳಲ್ಲಿ ಹೆಚ್ಚಿದ ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 6:50 IST
Last Updated 14 ಜೂನ್ 2018, 6:50 IST
   

ನವದೆಹಲಿ:ರಾಜ್ಯದ ಬೆಂಗಳೂರು, ತುಮಕೂರು, ದಾವಣಗೆರೆ, ಬೀದರ್ ಹಾಗೂ ರಾಯಚೂರು ನಗರಗಳಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಇದೆ ಎಂದು ಗ್ರೀನ್‌ಪೀಸ್ ಸಂಘಟನೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. 10 ನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ, ಧಾರವಾಡ, ಕೋಲಾರ, ಕಲಬುರ್ಗಿ ಮತ್ತು ಬೆಳಗಾವಿ ನಗರಗಳು ನಂತರದ ಸ್ಥಾನದಲ್ಲಿವೆ.

ಹೆಚ್ಚು ಸಾಂದ್ರತೆಯಿಂದ ಕೂಡಿರುವ ದೂಳಿನ ಕಣಗಳು (ಪಿಎಂ) ಶ್ವಾಸಕೋಶದ ಒಳಗೆ ಪ್ರವೇಶಿಸುವುದರಿಂದ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಸರ್ಕಾರದ ಅಂಕಿ ಅಂಶಗಳನ್ನು ಆಧರಿಸಿ, ದೇಶದಾದ್ಯಂತ ಪಿಎಂ–10 ವ್ಯಾಪಿಸಿರುವ ಚಿತ್ರಣವನ್ನು ವರದಿ ಬಿಚ್ಚಿಟ್ಟಿದೆ. 18 ನಗರಗಳ ಪೈಕಿ ಯಾವುದೂ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ (ಪ್ರತಿ ಘನ ಮೀಟರ್‌ಗೆ 20 ಮೈಕ್ರೊಗ್ರಾಂ) ಸುರಕ್ಷತಾ ಮಿತಿಯೊಳಗಿಲ್ಲ ಎಂದು ವರದಿ ಹೇಳಿದೆ. ಈ ಪೈಕಿ 10 ನಗರಗಳು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿರುವ (ಪ್ರತಿ ಘನ ಮೀಟರ್‌ಗೆ 60 ಮೈಕ್ರೊಗ್ರಾಂ) ಸುರಕ್ಷತಾ ಮಿತಿಯನ್ನು ದಾಟಿವೆ.

ADVERTISEMENT

ಉತ್ತರ ಭಾರತದ ನಗರಗಳಿಗೆ ಹೋಲಿಸಿದರೆ, ದಕ್ಷಿಣದ ನಗರಗಳ ವಾಯು ಗುಣಮಟ್ಟ ಕೊಂಚ ಉತ್ತಮವಾಗಿದೆ.

‘ಈ ನಗರಗಳಿಗೆ ತುರ್ತು ಪರಿಹಾರ ಕ್ರಮ ಅಗತ್ಯವಿಲ್ಲ. ಆದರೆ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ದೀರ್ಘಕಾಲದ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ’ ಎಂದು ವರದಿ ಹೇಳಿದೆ.

ದೆಹಲಿಯು ದೇಶದ ಅತಿಹೆಚ್ಚು ಮಾಲಿನ್ಯಯುಕ್ತ ನಗರವಾಗಿದೆ. ಇಲ್ಲಿ ಪಿಎಂ10 ಮಟ್ಟವು 290 ಮೈಕ್ರೊಗ್ರಾಂ ಇದೆ. ಫರೀದಾಬಾದ್, ಭಿವಂಡಿ, ಪಟ್ನಾ ನಂತರದ ಸ್ಥಾನದಲ್ಲಿವೆ.

ಅಚ್ಚರಿಯೆಂದರೆ, ನಿವೃತ್ತ ಜೀವನಕ್ಕೆ ಪ್ರಶಸ್ತ ಎನಿಸಿದ್ದ ಡೆಹ್ರಾಡೂನ್ ಕೂಡಾ ಮಲಿನಯುಕ್ತ ಅಗ್ರ 10 ನಗರಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.