ADVERTISEMENT

ಪ್ರಕಾಶ್ ಕಮ್ಮರಡಿ ಬರಹ | ನೆಲದ ಸಂಸ್ಕೃತಿಗೆ ಕೊಡಲಿ ಪೆಟ್ಟು

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ

ಡಾ.ಟಿ.ಎನ್.ಪ್ರಕಾಶ ಕಮ್ಮರಡಿ
Published 26 ಜೂನ್ 2020, 2:47 IST
Last Updated 26 ಜೂನ್ 2020, 2:47 IST
ಸಾಂಪ್ರದಾಯಿಕ ಕೃಷಿಯಲ್ಲಿ ಮಹಿಳೆಯರು ನಾಟಿ ಮಾಡುತ್ತಿರುವುದು
ಸಾಂಪ್ರದಾಯಿಕ ಕೃಷಿಯಲ್ಲಿ ಮಹಿಳೆಯರು ನಾಟಿ ಮಾಡುತ್ತಿರುವುದು   
""

ಮೈಸೂರಿನ ಟಿ.ನರಸೀಪುರ ತಾಲ್ಲೂಕಿನ 73 ವರ್ಷದ ಶಂಕರ್ ಗುರು ಅವರು ಎಕರೆಗೆ 32 ಕ್ವಿಂಟಾಲ್ ಇಳುವರಿ ಕೊಡುವ, ಸಾವಯವ ಕೃಷಿಗೆ ಹೇಳಿ ಮಾಡಿಸಿರುವ ಭತ್ತದ ತಳಿಯೊಂದನ್ನು ಕಂಡುಹಿಡಿದ ಒಬ್ಬ ರೈತ ವಿಜ್ಞಾನಿ. ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ಅವರಲ್ಲಿ ಅಭದ್ರತೆಯ ಭಾವವನ್ನು ಮೂಡಿಸಿದೆ. ಧನಿಕರು ಬಂದು ಸುತ್ತಲೂ ನೂರಾರು ಎಕರೆ ಭೂಮಿ ಖರೀದಿಸಲು ಪ್ರಾರಂಭಿಸಿದರೆ ತಮ್ಮ ಭೂಮಿಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ಅವರ ಚಿಂತೆ. ಹಾಗೆಯೇ, ಆ ಮಣ್ಣಿನ ಸಂಪರ್ಕ ಬಿಟ್ಟು ಬೇರೆ ಕಡೆ ಬದುಕಲು ಸಾಧ್ಯವೇ ಎಂಬ ಪ್ರಶ್ನೆಯೂ ಅವರನ್ನು ಕಾಡುತ್ತಿದೆ.

ರಾಜ್ಯದ ಲಕ್ಷಾಂತರ ರೈತರಿಗೆ ತಮ್ಮ ಹಳ್ಳಿಗಳಲ್ಲಿ ಇನ್ನು ಕಾರ್ಪೊರೇಟ್ ಒಡೆತನದ ಕೃಷಿ ಹಾಗೂ ಉಳ್ಳವರ ಫಾರ್ಮ್ ಹೌಸ್‌ಗಳ ಹಾವಳಿ ಹೆಚ್ಚಲಿದೆ ಎಂಬ ದುಗುಡ. ಅಮೂಲ್ಯ ಭೂಮಿಯನ್ನು ಕಳೆದುಕೊಂಡು ರಾಜ್ಯದ ರೈತ ಸಮುದಾಯ ಬೃಹತ್ ಪ್ರಮಾಣದಲ್ಲಿ ಭೂವಿಹೀನರಾಗುವ ಸಾಧ್ಯತೆ ನಿಚ್ಚಳವಾಗಿದೆ.

ಐದು ದಶಕಗಳ ಹಳೆಯ ಕಾಯ್ದೆಗೆ ಬದಲಾವಣೆ ಬೇಕು, ಕೃಷಿಯಲ್ಲಿ ಆಸಕ್ತಿ ಹೊಂದಿ, ಇತರರು ಮುಂದೆ ಬಂದರೆ ಅವರಿಗೆ ಅವಕಾಶ ನೀಡಬೇಕು ಎನ್ನುವುದು ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಬೇಕೆನ್ನುವವರ ವಾದ. ಇದು ಸ್ವಲ್ಪ ಸಮಂಜಸ ವಿಚಾರವಾದರೂ ಆಮಿಷ ಮತ್ತು ಒತ್ತಡಕ್ಕೆ ಬಲಿಯಾಗಿ ರೈತರು ಭೂಮಿ ಮಾರಾಟ ಮಾಡುವ ದಾರುಣ ಸ್ಥಿತಿ ಎದುರಾದರೆ ಏನು ಮಾಡಬೇಕು? ಕಾರ್ಪೊರೇಟ್‌ ಕೃಷಿಕನೊಬ್ಬ ತಲೆ ಎತ್ತಲು ನೂರಾರು ರೈತರು ಭೂಹೀನರಾಗುವುದನ್ನು ಹೇಗೆ ಒಪ್ಪಲು ಸಾಧ್ಯ?

ADVERTISEMENT
ಡಾ.ಪ್ರಕಾಶ್ ಕಮ್ಮರಡಿ

ಬೃಹತ್ ಪ್ರಮಾಣದಲ್ಲಿ ಈ ರೀತಿ ಭೂವಿಹೀನರಾಗುವ ರೈತರ ಮುಂದಿನ ಪಾಡೇನು ಎಂಬ ಪ್ರಶ್ನೆಗೂ ಉತ್ತರವಿಲ್ಲ. ಕೊರೊನಾ ಮಹಾಮಾರಿ ಎಲ್ಲರ ಕೈಕಾಲು ಕಟ್ಟಿ ಹಾಕಿ ಮನೆಯಲ್ಲಿ ಬಂದಿ ಮಾಡಿರುವ ಅವಕಾಶವನ್ನೇ ಬಳಸಿ ಸಾಧಕ-ಬಾಧಕಗಳ ಚರ್ಚೆಗೆ ಅವಕಾಶ ನೀಡದೆ ಬಂಡವಾಳಶಾಹಿಗೆ ರತ್ನಗಂಬಳಿ ಹಾಸುವ ಸರ್ಕಾರದ ಈ ನಡೆಯ ಹಿಂದೆ ದೊಡ್ಡ ಹುನ್ನಾರ ಎದ್ದು ಕಾಣುತ್ತಿದೆ.

ಭೂಮಾಲೀಕ ವರ್ಗದ ಶೋಷಣೆಯ ಊಳಿಗಮಾನ್ಯ ಪದ್ಧತಿಯಿಂದ ಕೃಷಿಯನ್ನು ಮುಕ್ತಗೊಳಿಸುವ ಮಹಾನ್‌ ಉದ್ದೇಶವು ಭೂಸುಧಾರಣೆ ತತ್ವದ ಹಿಂದೆ ಅಡಗಿತ್ತು. ಪ್ರಾಕೃತಿಕ ಸಂಪನ್ಮೂಲವಾದ ಭೂಮಿ, ಕೆಲವೇ ಕೆಲವು ಜನರ ಕೈಯಲ್ಲಿ ಕೇಂದ್ರೀಕೃತವಾಗಬಾರದು ಎನ್ನುವ ಸಮಾನತೆಯ ಆಶಯವೂ ಅಲ್ಲಿತ್ತು. ನಿಜವಾಗಿ ಉತ್ತು-ಬಿತ್ತು ಕೃಷಿ ಕಾಯಕ ಕೈಗೊಳ್ಳುವ ರೈತನೇ ಇದರ ಒಡೆಯನಾಗಬೇಕು ಎನ್ನುವ ಮಹಾತ್ವಾಕಾಂಕ್ಷೆಯೂ ಅದರಲ್ಲಿತ್ತು. ಹಾಗಾಗಿ ಭೂಸುಧಾರಣೆಯನ್ನು ‘ಸುಧಾರಣೆಗಳ ಮಹಾತಾಯಿ’ ಎಂದು ಕರೆಯಲಾಗಿದೆ.

1974ರಲ್ಲಿ ದೇವರಾಜ ಅರಸು ಅವರು ತಂದಿರುವ ಪ್ರಗತಿಪರ ಭೂಸುಧಾರಣೆ ಕಾಯ್ದೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಭೂಹಂಚಿಕೆ ವಿಷಯದಲ್ಲಿ ಸಾಮಾಜಿಕ ನ್ಯಾಯದ ವಿಚಾರ ಇಂದಿಗೂ ಜೀವಂತವಾಗಿದೆ. ಆದರೆ, ರಾಜ್ಯ ಸರ್ಕಾರ ತರಲು ಹೊರಟಿರುವ ಈಗಿನ ತಿದ್ದುಪಡಿಯಲ್ಲಿ ಭೂಸುಧಾರಣೆಯ ಮೂಲ ಆಶಯವನ್ನು ಸಂಪೂರ್ಣವಾಗಿ ಬದಿಗೆ ಒತ್ತಲಾಗುತ್ತಿದೆ. ವಿಶ್ವಬ್ಯಾಂಕ್‌, ಬಂಡವಾಳಶಾಹಿ, ನವ ಉದಾರೀಕರಣ ನೀತಿಯ ಪ್ರತಿಪಾದಕರ ಒತ್ತಡಕ್ಕೆ ಸರ್ಕಾರ ಮಣಿದಿದ್ದರಿಂದ ಕೃಷಿಭೂಮಿಯೂ ಮಾರುಕಟ್ಟೆ ಸರಕಾಗುತ್ತಿದೆ.

ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಜನಸಾಮಾನ್ಯರಿಗೆ ನಿವೇಶನವೊಂದನ್ನು ಕೊಳ್ಳುವುದು ಈಗ ಹೇಗೆ ಕನಸಿನ ಮಾತಾಗಿದೆಯೋ ಅದೇ ರೀತಿ ಮುಂದಿನ ದಿನಗಳಲ್ಲಿ ಕೃಷಿಭೂಮಿಯ ಬೆಲೆ ದುಪ್ಪಟ್ಟಾಗಿ ನಿಜವಾದ ರೈತನಿಗೂ ಭೂಮಿ ಕೈಗೆಟುಕದಂತೆ ಆಗುವುದರಲ್ಲಿ ಅನುಮಾನವಿಲ್ಲ. ಸಾಮಾಜಿಕ ನ್ಯಾಯದ ಗಂಧ, ಗಾಳಿ ಅರಿಯದ ಎಡಬಿಡಂಗಿಗಳಿಗೆ ಇದು ಸರಿ ಕಂಡರೂ ಅಚ್ಚರಿಯಿಲ್ಲ.

ಕೃಷಿಭೂಮಿಯು ರೈತರ ಕೈತಪ್ಪಿ, ಆ ಮೂಲಕ ಕೃಷಿ ಉತ್ಪಾದನೆಗೆ ಅಪಾಯ ಬರಬಾರದು ಎಂಬ ಸದುದ್ದೇಶದಿಂದ 1961ರ ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ ಹಲವಾರು ನಿಬಂಧನೆಗಳನ್ನು ಸೇರಿಸಲಾಗಿತ್ತು. ಹಾಗಿದ್ದರೂ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದ ರಾಜ್ಯದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಎಕರೆ ಕೃಷಿ ಭೂಮಿ ರೈತರ ಕೈತಪ್ಪಿ ಇತರ ಕಾರ್ಯಕ್ಕೆ ಪರಿವರ್ತನೆಯಾಗುತ್ತಿದೆ. ಈಗ ರಾಜ್ಯ ಸರ್ಕಾರ ಈ ನಿಬಂಧನೆಗಳನ್ನು ಗಾಳಿಗೆ ತೂರಿ, ಭೂಮಿ ಖರೀದಿಗಿದ್ದ ಆದಾಯದ ಮಿತಿಯನ್ನೂ ತೆಗೆದುಹಾಕಿದೆ. ಒಂದೊಂದು ಕುಟುಂಬವು ನೂರಾರು ಎಕರೆ ಕೃಷಿಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.

ರಾಜ್ಯದ ರೈತರು ಈಗಾಗಲೇ 21 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿಯನ್ನೇ ಮಾಡದೆ ಬೀಳು ಬಿಟ್ಟಿರುತ್ತಾರೆ. ಕೃಷಿ ಬೆಲೆ ಆಯೋಗ ನಡೆಸಿರುವ ಅಧ್ಯಯನದ ಪ್ರಕಾರ ಈ ರೀತಿ ಬೀಳು ಬಿಟ್ಟಿರುವ ರೈತರಲ್ಲಿ ಶೇ 61ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ವರ್ಗವಾರು ನೋಡಿದಲ್ಲಿ ಭೂಮಿ ಬೀಳುಬಿಟ್ಟ ರೈತರಲ್ಲಿ ಶೇ 55 ಭಾಗ ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರಿದ್ದರೆ, ಶೇ 21ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದವರಿದ್ದಾರೆ. ಅಂದರೆ ಈ ಬೀಳು ಬಿಟ್ಟ ರೈತರಲ್ಲಿ ಬಹುಪಾಲು ‘ಅಹಿಂದ’ ಸಮುದಾಯಕ್ಕೆ ಸೇರಿದ ಬಡ ರೈತರಾಗಿದ್ದು, ಪಟ್ಟಣಕ್ಕೆ ವಲಸೆ ಬಂದು ಜೀವನ ನಿರ್ವಹಿಸುತ್ತಿರುವ ಬಹುಪಾಲು ಕಾರ್ಮಿಕರು ಇವರೇ ಆಗಿರುತ್ತಾರೆ.

ಕೃಷಿ ಮಾಡಲಾಗದಿದ್ದರೂ ಮುಂದೊಂದು ದಿನ ಮದುವೆ, ಮುಂಜಿ, ಅನಾರೋಗ್ಯ, ಸಾವಿನಂತಹ ಸಮಯದಲ್ಲಿ ಆಸರೆ ಆಗಬಹುದು ಎಂಬ ನಿರೀಕ್ಷೆಯಿಂದ ಅವರು ಭೂಮಿಯನ್ನು ಕಷ್ಟಪಟ್ಟು ಉಳಿಸಿಕೊಂಡಿರುತ್ತಾರೆ. ಆದರೆ, ಭೂಮಾಫಿಯಾದ ಆಮಿಷ, ಒತ್ತಡಗಳನ್ನು ತಡೆಯುವ ಶಕ್ತಿ ಈ ಬಡ ರೈತರಿಗಿದೆ ಎಂದು ಹೇಳುವುದು ಕಷ್ಟ. ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ ಸುಮಾರು 50 ಲಕ್ಷ ಎಕರೆ ಅಮೂಲ್ಯ ಭೂಮಿ ರೈತರ ಕೈತಪ್ಪಿದೆ. ಹೀಗೆ, ಆಹಾರ ಸ್ವಾವಲಂಬನೆಗೆ ಏಟು ಬೀಳುತ್ತಿರುವುದನ್ನು ವಿವೇಕಶೂನ್ಯ ಆಳುವವರ್ಗ ಗಮನಿಸಿಲ್ಲ.

ರೈತರು ಬದುಕು ಕಂಡುಕೊಳ್ಳುವ ರೀತಿಯನ್ನು ಸಮಾಜವಾದಿ ಚಿಂತಕ ಅಶೋಕ್ ಮೆಹ್ತಾ ನೆಲದ ಸಂಸ್ಕೃತಿ ಎಂದು ಕರೆದಿದ್ದಾರೆ. ಬದುಕಿನ ಸಮಗ್ರತೆಗಾಗಿ ಮನುಷ್ಯ ನೆಲದ ಸಂಪರ್ಕ ಪಡೆಯುವುದು ಅನಿವಾರ್ಯ ಎಂದು ಮೆಹ್ತಾ ಬಲವಾಗಿ ವಾದಿಸಿದ್ದರು. ಬಿಕ್ಕಟ್ಟು, ಸಮಸ್ಯೆಗಳ ನಡುವೆಯೇ ಅಂತಹ ಸಾರ್ಥಕ ಬದುಕಿಗಾಗಿ ರೈತ, ಬೇಸಾಯದಲ್ಲಿ ಮುಂದುವರಿದಿರುವುದು.

ಬಂಡವಾಳಶಾಹಿಗೆ, ಕಾರ್ಪೊರೇಟ್ ಹಾಗೂ ಉದ್ದಿಮೆ ವಲಯಕ್ಕೆ ನಗರ ಪ್ರದೇಶಗಳಲ್ಲಿ ದುಡಿಯಲು ಅಗ್ಗದ ಕಾರ್ಮಿಕರು ಬೇಕು. ಹಾಗಾಗಿ ಭೂಹೀನರಾಗಿ ರೈತರು ನಗರಕ್ಕೆ ವಲಸೆ ಬಂದಷ್ಟು ಈ ಉಳ್ಳವ ವರ್ಗಕ್ಕೆ ಅನುಕೂಲ. ಇದಕ್ಕೂ ಮುಖ್ಯವಾಗಿ ಯಾವತ್ತೂ ಬೆಲೆ, ಮೌಲ್ಯ ಕುಸಿಯದೆ ಬಂಗಾರದಂತೆ ಸಾದಾ ವೃದ್ಧಿಯಾಗುವ ಒಂದು ಅಮೂಲ್ಯ ಆಸ್ತಿಯಾಗಿ ಭೂಮಿ ಅವರಿಗೆ ಆರ್ಥಿಕ ಸಧೃಢತೆಯನ್ನು ಕೊಡುತ್ತದೆ. ಜೊತೆಗೆ ಕೃಷಿ ಮಾರುಕಟ್ಟೆ ನಿಯಮವನ್ನು ಸಡಿಲಿಸಿ ರೈತ ಬೆಳೆದ ಧಾನ್ಯ, ಹಣ್ಣು, ತರಕಾರಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಮತ್ತ ಲಾಭದಾಯಕ ಧಾರಣೆ ಒದಗಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರ್ಕಾರ, ಖಾಸಗಿ ವಲಯಕ್ಕೆ ರತ್ನಗಂಬಳಿ ಹಾಸಿದೆ.

ಕಪ್ಪುಹಣ ಯಥೇಚ್ಛವಾಗಿರುವ ಬಂಡವಾಳದಾರರಿಗೆ ನೂರಾರು ಎಕರೆ ಭೂಮಿಯನ್ನು ಕೊಳ್ಳುವುದು ಕಷ್ಟವೇನೂ ಅಲ್ಲ. ಹಣವುಳ್ಳ ಬಂಡವಾಳದಾರರ ಕೈಗೊಂಬೆಗಳಾಗಿರುವ ನಮ್ಮ ಆಳುವ ವರ್ಗ, ಅವರ ನಿರೀಕ್ಷೆ ಮತ್ತು ಒತ್ತಡಕ್ಕೆ ಕುಣಿಯುತ್ತಿರುವುದು ಸ್ಪಷ್ಟ. ಇದಕ್ಕೆ ಪೂರಕವಾಗಿ ಸ್ವಂತ ಭೂಮಿ ಗೇಣಿ ಸೇರಿಸಿದ ವೆಚ್ಚಕ್ಕೆ ಪ್ರತಿಫಲವೂ ದೊರಕದಷ್ಟು ಅಸಮರ್ಪಕ ಬೆಂಬಲ ಬೆಲೆ ಘೋಷಿಸಿ ಕೇಂದ್ರ ಸರ್ಕಾರ, ರೈತ ಕೃಷಿಯನ್ನು ಕೈಬಿಡುವಂತೆ ಪರೋಕ್ಷ ಒತ್ತಡ ಹೇರಿದೆ. ಗ್ರಾಮೀಣ ವ್ಯವಸ್ಥೆಗೆ ಇಂತಹ ಆತಂಕ, ಆಘಾತ ಎದುರಾದ ಈ ಹೊತ್ತಿನಲ್ಲಿ ಹಸಿರು ಶಾಲಿನ ಯೋಧರ ಮುಂದಿನ ನಡೆ ಕುತೂಹಲಕರ.

ಲೇಖಕ: ಕೃಷಿ ಆರ್ಥಿಕ ತಜ್ಞ ಮತ್ತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.